ಉಪ್ಪಿನಂಗಡಿ: ಗ್ಯಾಸ್ಟ್ರಿಕ್ ಮತ್ತು ಹೊಟ್ಟೆನೋವಿನ ಸಮಸ್ಯೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಯುವಕರೊಬ್ಬರು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯ ಆಸ್ಪತ್ರೆಯೊಂದರ ಸಿಬ್ಬಂದಿಗಳ ಬೇಜವಾಬ್ದಾರಿತನವೇ ಈ ಸಾವಿಗೆ ಕಾರಣ ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಪರಪ್ಪು ಎಂಬಲ್ಲಿ ರಸ್ತೆ ಬದಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಮೊಹಮ್ಮದ್ ಶರೀಫ್ (35) ಮೃತಪಟ್ಟ ದುರ್ದೈವಿ.
ಕೆಲ ದಿನಗಳ ಹಿಂದೆ ತೀವ್ರ ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಮೊಹಮ್ಮದ್ ಶರೀಫ್ ಅವರನ್ನು ಉಪ್ಪಿನಂಗಡಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಭಾಗವಾಗಿ ಆಸ್ಪತ್ರೆಯ ಸಿಬ್ಬಂದಿಗಳು ಪೈಪ್ ಅಳವಡಿಸುವಾಗ (ಎಂಡೋಸ್ಕೋಪಿ ಅಥವಾ ತತ್ಸಮಾನ ಪ್ರಕ್ರಿಯೆ) ನಡೆದಿದೆ ಎನ್ನಲಾದ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಶರೀಫ್ ಅವರ ದೊಡ್ಡ ಕರುಳಿಗೆ ತೂತಾಗಿದೆ ಎನ್ನಲಾಗಿದೆ. ಇದರಿಂದಾಗಿ ಮಲವು ಹೊಟ್ಟೆಯೊಳಗೆ ಸೇರಿ ಸೋಂಕು (Infection) ತೀವ್ರಗೊಂಡು ಅವರ ಪರಿಸ್ಥಿತಿ ಅತ್ಯಂತ ಕಠಿಣ ಹಂತ ತಲುಪಿತ್ತು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಆಸ್ಪತ್ರೆಯ ಮ್ಯಾನೇಜ್‌ಮೆಂಟ್, ತಕ್ಷಣವೇ ತಮ್ಮದೇ ಆಸ್ಪತ್ರೆಯ ಆಂಬ್ಯುಲೆನ್ಸ್ ಮೂಲಕ ಶರೀಫ್ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ರವಾನಿಸಿದೆ. ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿದರಾದರೂ, ಕರುಳಿನ ಸೋಂಕು ಇಡೀ ದೇಹಕ್ಕೆ ವ್ಯಾಪಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಶರೀಫ್ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಮೃತ ಮೊಹಮ್ಮದ್ ಶರೀಫ್ ಅವರು ಅತ್ಯಂತ ಬಡ ಕುಟುಂಬದವರಾಗಿದ್ದು, ರಸ್ತೆ ಬದಿಯಲ್ಲಿ ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದರು. ಸದ್ಯ ಅವರ ನಿಧನದಿಂದಾಗಿ ಹತ್ತು ವರ್ಷದೊಳಗಿನ ಮೂರು ಸಣ್ಣ ಮಕ್ಕಳು ಹಾಗೂ ಪತ್ನಿ ತುತ್ತು ಅನ್ನಕ್ಕೂ ಪರದಾಡುವಂತಾಗಿದ್ದು, ಇಡೀ ಕುಟುಂಬ ಬೀದಿಗೆ ಬಿದ್ದಿದೆ.
“ಸಣ್ಣ ಹೊಟ್ಟೆನೋವಿಗೆಂದು ಹೋದವರನ್ನು ಆಸ್ಪತ್ರೆಯವರ ನಿರ್ಲಕ್ಷ್ಯ ಕೊಲೆ ಮಾಡಿದೆ” ಎಂದು ಮೃತರ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಮೃತರ ಕುಟುಂಬಸ್ಥರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದು, ತಮಗೆ ನ್ಯಾಯ ಸಿಗಬೇಕು ಮತ್ತು ತಪ್ಪಿತಸ್ಥ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಉಪ್ಪಿನಂಗಡಿಯ ಆಸ್ಪತ್ರೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆಯೂ ಈ ಆಸ್ಪತ್ರೆಯಲ್ಲಿ ಇಂತಹ ಹಲವು ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದ ಪ್ರಕರಣಗಳು ನಡೆದಿವೆ ಎಂದು ಸ್ಥಳೀಯರು ಚರ್ಚಿಸುತ್ತಿದ್ದು, ಆರೋಗ್ಯ ಇಲಾಖೆ ತಕ್ಷಣವೇ ಆಸ್ಪತ್ರೆಯ ವಿರುದ್ಧ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

