ಶಿಕ್ಷಣ ಸಂಸ್ಥೆಗಳ ಪ್ರಚಾರದ ಭರಾಟೆಗೆ ಮಕ್ಕಳ ಖಾಸಗಿತನಕ್ಕೆ ಧಕ್ಕೆ: ಖಿನ್ನತೆಗೊಳಗಾಗುತ್ತಿರುವ ಮಕ್ಕಳು

✒ಸಾಹುಕಾರ್ ಅಚ್ಚು

ಪ್ರತಿ ಬಾರಿ ಪರೀಕ್ಷಾ ಫಲಿತಾಂಶಗಳು ಪ್ರಕಟವಾದಾಗಲೂ ರಾಜ್ಯದ ನಗರ, ಪಟ್ಟಣ ಹಾಗೂ ರಸ್ತೆ ಬದಿಗಳಲ್ಲಿ ಒಂದು ಸಾಮಾನ್ಯ ದೃಶ್ಯ ಕಂಡುಬರುತ್ತದೆ. ಅದೇ ಶಾಲಾ-ಕಾಲೇಜುಗಳ ಬೃಹತ್ ಫ್ಲೆಕ್ಸ್‌ಗಳು. ಅದರಲ್ಲಿ ನೂರಕ್ಕೆ ನೂರು ಅಂಕ ಪಡೆದ, ರ‍್ಯಾಂಕ್ ಪಡೆದ ಮಕ್ಕಳ ಫೋಟೋಗಳು, ಅವರು ಪಡೆದ ಅಂಕಗಳು ಹಾಗೂ ವೈಯಕ್ತಿಕ ವಿವರಗಳನ್ನು ಮುದ್ರಿಸಿ ದೊಡ್ಡ ಮಟ್ಟದ ಪ್ರಚಾರ ಗಿಮಿಕ್ ಮಾಡಲಾಗುತ್ತದೆ.

ಆದರೆ, ಈ ರೀತಿ ಮಕ್ಕಳ ಮತ್ತು ಪೋಷಕರ ಯಾವುದೇ ಲಿಖಿತ ಅನುಮತಿ ಇಲ್ಲದೆ, ಶಿಕ್ಷಣ ಸಂಸ್ಥೆಗಳು ತಮ್ಮ ವಾಣಿಜ್ಯ ಲಾಭಕ್ಕಾಗಿ ಮಕ್ಕಳ ವಿವರಗಳನ್ನು ಬ್ಯಾನರ್, ಬ್ರೋಚರ್, ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಳಸುವುದು ಮಕ್ಕಳ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬ ಗಂಭೀರ ಆತಂಕ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಅದೇ ರೀತಿ ಇತ್ತೀಚೆಗೆ ನೂರಕ್ಕೆ ನೂರು ಫಲಿತಾಂಶ ಬಂದ ಶಿಕ್ಷಣ ಸಂಸ್ಥೆಗಳು ಎಲ್ಲಾ ವಿದ್ಯಾರ್ಥಿಗಳ ಫೋಟೋ ಹಾಕಿ ಅವರ ಮಾರ್ಕುಗಳನ್ನು ಹಾಕಿ ಪ್ರಥಮ ದ್ವಿತೀಯ ಹೀಗೇ ಹಾಕಿರುತ್ತಾರೆ. ಅಲ್ಲಿ ಕ್ಲಾಸಿನಲ್ಲಿ  ಅತೀ ಕಡಿಮೆ ಅಂಕ ಪಡೆದ ವಿದ್ಯಾರ್ಥಿ ಫೋಟೊ ಮತ್ತು ಅಂಕವೂ ಪ್ರಕಟಗೊಂಡಿರುತ್ತದೆ. ಇರುವ ಅಷ್ಟು ಜನರಲ್ಲಿ ನಾನು ಕೊನೆಯವ ಎನ್ನುವ ಕೀಳರಿಮೆ ಆ ವಿದ್ಯಾರ್ಥಿಯನ್ನು ಕಾಡುತ್ತದೆ. ಹೀಗೇ ಕಲಿಕೆಯ ಪೈಪೋಟಿ ಯುಗದಲ್ಲಿ  ಸಾಮಾನ್ಯ ಕಲಿಕೆಯ ಮಕ್ಕಳು  ಖಿನ್ನತೆ ಗೊಳಗಾಗಿ ವಿದ್ಯೆಯ ಉಸಾಬರಿಯೇ ಬೇಡ ಎಂದು ಬೇರೆ ಹಾದಿ ಹಿಡಿವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಈ ಪ್ಲೆಕ್ಸ್ ಸಂಸ್ಕೃತಿ ಬೆಳೆಯುವ ಮಕ್ಕಳಲ್ಲಿ  ಹಲವು ಪರಿಣಾಮ ಬೀರುತ್ತದೆ.

ಈ ಗಂಭೀರ ವಿಷಯದ ಬಗ್ಗೆ ಧ್ವನಿ ಎತ್ತಿರುವ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸುವಂತೆ ಆಗ್ರಹಿಸಿದ್ದಾರೆ. ಮಕ್ಕಳ ಫೋಟೋ, ಅಂಕಗಳು ಹಾಗೂ ವೈಯಕ್ತಿಕ ಮಾಹಿತಿಗಳನ್ನು ಪೋಷಕರ ಅಥವಾ ಮಕ್ಕಳ ಅನುಮತಿ ಪಡೆಯದೇ ಶಾಲೆ ಅಥವಾ ಕಾಲೇಜುಗಳು ತಮ್ಮ ಪ್ರಚಾರಕ್ಕಾಗಿ ಬಳಸುವುದು ಗಂಭೀರ ಆತಂಕದ ವಿಷಯವಾಗಿದೆ. ಇದು ಮಕ್ಕಳ ಖಾಸಗಿತನದ ಹಕ್ಕು, ಆತ್ಮಗೌರವ ಹಾಗೂ ಮಾನಸಿಕ ಸುರಕ್ಷತೆಯ ಪ್ರಶ್ನೆಯಾಗಿದೆ. ಮಕ್ಕಳ ಸಾಧನೆಗೆ ಗೌರವ ಇರಲಿ, ಆದರೆ ಅವರ ಗೌರವ ಮತ್ತು ಖಾಸಗಿತನಕ್ಕೂ ಸಮಾನ ಆದ್ಯತೆ ದೊರಕಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ನಮ್ಮ ದೇಶದ ಸಂವಿಧಾನ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಗಳು ಮಕ್ಕಳ ವೈಯಕ್ತಿಕ ಮಾಹಿತಿಯ ದುರ್ಬಳಕೆಯನ್ನು ಗಂಭೀರವಾಗಿ ಪರಿಗಣಿಸುತ್ತವೆ. ಈ ಕುರಿತ ಪ್ರಮುಖ ಕಾನೂನು ಅಂಶಗಳು ಹೀಗಿವೆ.
ಮೊದಲನೆಯದಾಗಿ, ಭಾರತೀಯ ಸಂವಿಧಾನದ ವಿಧಿ 21ರ ಜೀವಿಸುವ ಹಕ್ಕಿನ ಅಡಿಯಲ್ಲಿ ಖಾಸಗಿತನದ ಹಕ್ಕು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಪುಟ್ಟಸ್ವಾಮಿ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಇದು ಮಕ್ಕಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಪೋಷಕರ ಪೂರ್ವಾನುಮತಿ ಇಲ್ಲದೆ ಮಗುವಿನ ಫೋಟೋ ಅಥವಾ ಅಂಕಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಈ ಹಕ್ಕಿನ ಉಲ್ಲಂಘನೆಯಾಗುತ್ತದೆ.

ಎರಡನೆಯದಾಗಿ, ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣೆ ಅಂದರೆ ಡಿಪಿಡಿಪಿ ಕಾಯ್ದೆಯ ಪ್ರಕಾರ, 18 ವರ್ಷದೊಳಗಿನ ಮಕ್ಕಳ ವೈಯಕ್ತಿಕ ಡೇಟಾವನ್ನು ಯಾವುದೇ ಸಂಸ್ಥೆ ಬಳಸಬೇಕಾದರೂ ಅವರ ಪೋಷಕರಿಂದ ಸ್ಪಷ್ಟವಾದ ಲಿಖಿತ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ವಾಣಿಜ್ಯ ಲಾಭಕ್ಕಾಗಿ ಮಕ್ಕಳ ಡೇಟಾವನ್ನು ಅನಧಿಕೃತವಾಗಿ ಬಳಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ.

ಮೂರನೆಯದಾಗಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಯಾವುದೇ ಮಗುವಿನ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಪ್ರದರ್ಶನಗಳನ್ನು ಮಾಡುವಂತಿಲ್ಲ. ಫ್ಲೆಕ್ಸ್‌ಗಳಲ್ಲಿ ಹೆಚ್ಚು ಅಂಕ ಪಡೆದವರನ್ನು ಮಾತ್ರ ವೈಭವೀಕರಿಸುವುದರಿಂದ, ಕಡಿಮೆ ಅಂಕ ಪಡೆದ ಅಥವಾ ಅದೇ ಶಾಲೆಯ ಇತರ ಮಕ್ಕಳಲ್ಲಿ ಕೀಳರಿಮೆ ಮತ್ತು ತೀವ್ರ ಮಾನಸಿಕ ಒತ್ತಡ ಉಂಟಾಗುತ್ತದೆ. ಇದು ಅವರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಯಾಗಿದೆ.

ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳ ಮೇಲೆ ಮುಂದಿನ ದಿನಗಳಲ್ಲಿ ಸದಾ ನಂಬರ್ ಒನ್ ಆಗಿರಬೇಕೆಂಬ ಅನಗತ್ಯ ಸಾಮಾಜಿಕ ಒತ್ತಡ ಸೃಷ್ಟಿಯಾಗುತ್ತದೆ. ಇದರೊಂದಿಗೆ ರಸ್ತೆ ಬದಿಯ ಬ್ಯಾನರ್‌ಗಳಲ್ಲಿ ಮಕ್ಕಳ ಮುಖ, ಹೆಸರು ಮತ್ತು ಶಾಲೆಯ ವಿವರಗಳು ಸಾರ್ವಜನಿಕವಾಗಿ ಸಿಗುವುದರಿಂದ ಕಿಡಿಗೇಡಿಗಳು ಅಥವಾ ಅಪರಾಧಿಗಳು ಮಕ್ಕಳನ್ನು ಟ್ರ್ಯಾಕ್ ಮಾಡಲು ಇದು ಸುಲಭ ದಾರಿಯಾಗುತ್ತದೆ. ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ಕೇವಲ ತಮ್ಮ ಬ್ರ್ಯಾಂಡ್ ರಾಯಭಾರಿಗಳಂತೆ ಬಳಸಿ, ಕೋಟ್ಯಂತರ ರೂಪಾಯಿ ಲಾಭ ಗಳಿಸಲು ಈ ಫ್ಲೆಕ್ಸ್‌ಗಳನ್ನು ದಾಳವಾಗಿಸಿಕೊಳ್ಳುತ್ತಿರುವುದು ಶಿಕ್ಷಣದ ವ್ಯಾಪಾರೀಕರಣಕ್ಕೆ ಸಾಕ್ಷಿಯಾಗಿದೆ.

ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಅತ್ಯಂತ ಸಮಯೋಚಿತವಾಗಿದೆ. ಶಿಕ್ಷಣ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಯಾವುದೇ ವಿದ್ಯಾರ್ಥಿಯ ಫೋಟೋವನ್ನು ಜಾಹೀರಾತಿಗೆ ಬಳಸುವ ಮುನ್ನ ಪೋಷಕರಿಂದ ಲಿಖಿತ ಒಪ್ಪಿಗೆ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಹಾಗೆಯೇ ಅನುಮತಿ ಇಲ್ಲದೆ ಫ್ಲೆಕ್ಸ್ ಹಾಕುವ ಶಿಕ್ಷಣ ಸಂಸ್ಥೆಗಳ ವಿರುದ್ಧ ದಂಡ ಹಾಗೂ ಮಾನ್ಯತೆ ರದ್ದು ಪಡಿಸುವಂತಹ ಕಠಿಣ ಕ್ರಮ ಕೈಗೊಳ್ಳಬೇಕು.

ಮಕ್ಕಳು ದೇಶದ ಆಸ್ತಿ, ಅವರು ಶಿಕ್ಷಣ ಸಂಸ್ಥೆಗಳ ವಾಣಿಜ್ಯ ಉತ್ಪನ್ನಗಳಲ್ಲ. ಅವರ ಸಾಧನೆಗೆ ಪ್ರೋತ್ಸಾಹ ಸಿಗಬೇಕೇ ಹೊರತು, ಅವರ ಖಾಸಗಿತನ ರಸ್ತೆಯ ಹರಾಜಿಗೆ ಒಳಗಾಗಬಾರದು. ಈ ನಿಟ್ಟಿನಲ್ಲಿ ಸರ್ಕಾರದ ಮುಂದಿನ ನಡೆ ಏನಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Discover more from

Subscribe now to keep reading and get access to the full archive.

Continue reading