ನಿನ್ನೆ ರಾತ್ರಿ ನಡೆದ ಅಪಘಾತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗಳು ಕೂಡ ಇಂದು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಲ್ಬಿ ಜಲಾಲ್ (21) ಮೃತಪಟ್ಟವರು. ಇವರ ತಾಯಿ ಸಲ್ವ ಮಹಮ್ಮದ್ ಕುಂಞು (53) ಅಪಘಾತ ನಡೆದ ಸ್ಥಳದಲ್ಲೇ ಮೃತಪಟ್ಟಿದ್ದರು. ಕೇರಳದ ಕೊಚ್ಚಿನ್ ನಗರದಲ್ಲಿ ಅಪಘಾತ ಸಂಭವಿಸಿತ್ತು. ಮೃತರು ಪತ್ತನಂತಿಟ್ಟ ಜಿಲ್ಲೆಯ ಪಂದಳಂ ನಿವಾಸಿಗಳಾಗಿದ್ದಾರೆ.

ನಿನ್ನೆ ರಾತ್ರಿ ತಾಯಿ ಮತ್ತು ಮಗಳು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅದೇ ದಿಕ್ಕಿನಿಂದ ಬಂದ ಕಾರು ಇವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಮತ್ತೊಂದು ಕಾರು ಕೂಡ ಇವರಿಗೆ ಡಿಕ್ಕಿ ಹೊಡೆದಿದೆ. ಅಲ್ಲದೆ, ಸಲ್ವ ಅವರ ದೇಹದ ಮೇಲೆ ಬೈಕ್ ಒಂದು ಹರಿದು ಹೋಗಿದೆ ಎಂದು ತಿಳಿದುಬಂದಿದೆ.

ಅಪಘಾತ ಸಂಭವಿಸಿದ ತಕ್ಷಣ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕಾರು ನಿಲ್ಲಿಸದೆ ಪರಾರಿಯಾಗಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತಲೆಮರೆಸಿಕೊಂಡಿರುವ ವಾಹನ ಮತ್ತು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಒಟ್ಟಾರೆಯಾಗಿ ಈ ಭೀಕರ ಅಪಘಾತ ಒಂದೇ ಕುಟುಂಬದ ಇಬ್ಬರ ಜೀವವನ್ನು ಬಲಿಪಡೆದಿದೆ.



