ಚುನಾವಣಾ ಫಲಿತಾಂಶದ ನಂತರ ಎರಡು ರಾಜ್ಯಗಳು ನಮಗೆ ತೋರಿಸಿಕೊಟ್ಟ ಮಾದರಿಗಳು

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ಕೇವಲ ಅಧಿಕಾರ ಬದಲಾವಣೆಯ ಪ್ರಕ್ರಿಯೆಯಲ್ಲ, ಅದು ಒಂದು ದೇಶದ ಅಥವಾ ರಾಜ್ಯದ ರಾಜಕೀಯ ಸಂಸ್ಕೃತಿಯ ಪ್ರತಿಬಿಂಬವೂ ಹೌದು. ಇತ್ತೀಚಿನ ಚುನಾವಣಾ ಫಲಿತಾಂಶಗಳ ನಂತರ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಕಂಡುಬಂದ ಚಿತ್ರಣಗಳು ಈ ಸಂಸ್ಕೃತಿಯ ಎರಡು ಭಿನ್ನ ತುದಿಗಳನ್ನು ನಮಗೆ ಪರಿಚಯಿಸುತ್ತಿವೆ.

ತಮಿಳುನಾಡಿನ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಅಲ್ಲಿ ದಶಕಗಳ ಕಾಲ ಕರುಣಾನಿಧಿ ಮತ್ತು ಜಯಲಲಿತಾ ನಡುವೆ ತೀವ್ರ ಸ್ತರದ ವೈಯಕ್ತಿಕ ವೈರತ್ವವಿತ್ತು. ಆದರೆ ಇಂದಿನ ತಮಿಳುನಾಡು ಭಾರತಕ್ಕೆ ಒಂದು ಹೊಸ ಸಂದೇಶ ನೀಡುತ್ತಿದೆ. ಅಲ್ಲಿನ ನೂತನ ಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸಿದ ನಂತರ, ನಿಕಟಪೂರ್ವ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಹಸ್ತಲಾಘವ ಮಾಡಿ, ಗೌರವ ಸಲ್ಲಿಸಿದ ರೀತಿ ಪ್ರಜಾಪ್ರಭುತ್ವದ ಘನತೆಯನ್ನು ಹೆಚ್ಚಿಸಿದೆ. ಇದು ರಾಜಕೀಯ ಎಂದರೆ ಕೇವಲ ಸೈದ್ಧಾಂತಿಕ ಹೋರಾಟವೇ ಹೊರತು ವೈಯಕ್ತಿಕ ದ್ವೇಷವಲ್ಲ ಎನ್ನುವುದನ್ನು ಇಂದಿನ ಯುವ ಪೀಳಿಗೆಗೆ ಸಾಬೀತುಪಡಿಸುತ್ತಿದೆ. ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಈ ‘ಸ್ಟೇಟ್ಸ್‌ಮನ್’ ಗುಣ ಇಂದಿನ ರಾಜಕಾರಣಕ್ಕೆ ಅತ್ಯಂತ ಅವಶ್ಯಕವಾಗಿದೆ.

ಆದರೆ ಪಶ್ಚಿಮ ಬಂಗಾಳದ ಚಿತ್ರಣ ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ. ಚುನಾವಣಾ ಫಲಿತಾಂಶದ ಬೆನ್ನಲ್ಲೇ ಅಲ್ಲಿ ಹೊತ್ತಿ ಉರಿಯುತ್ತಿರುವ ಹಿಂಸಾಚಾರವು ರಾಜಕೀಯ ವೈರತ್ವದ ಪರಮಾವಧಿಯನ್ನು ತೋರಿಸುತ್ತಿದೆ. ಸೋಲನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಮೊಂಡುತನ ಮತ್ತು ಗೆಲುವನ್ನು ಅತಿರೇಕವಾಗಿ ಆಚರಿಸುವ ಹಠಮಾರಿತನ ಅಲ್ಲಿನ ಪ್ರಜಾಪ್ರಭುತ್ವದ ಆಶಯಗಳನ್ನೇ ಬುಡಮೇಲು ಮಾಡುತ್ತಿದೆ. ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ಈ ಸಂಘರ್ಷವು ಕೇವಲ ಮತಗಳ ಹೋರಾಟವಾಗಿ ಉಳಿಯದೆ, ಸಾಮಾನ್ಯ ಜನರ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ಬಂಗಾಳದಲ್ಲಿ ಬಿಜೆಪಿ ಗೆಲುವಿನ ನಂತರ ಟಿಎಂಸಿಯನ್ನು ನಡೆಸಿಕೊಳ್ಳುತ್ತಿರುವ ರೀತಿ ಮತ್ತು ಮಮತಾ ಬ್ಯಾನರ್ಜಿ ಅವರು ಚುನಾವಣಾ ಅಕ್ರಮಗಳ ಬಗ್ಗೆ ಮಾಡುತ್ತಿರುವ ಗಂಭೀರ ಆರೋಪಗಳು ಮೊದಲೇ ಜನ ಕಳೆದುಕೊಂಡಿರುವ ಚುನಾವಣಾ ಆಯೋಗದ ಮೇಲಿನ ವಿಶ್ವಾಸವನ್ನು ಮತ್ತೆ ಮತ್ತೆ ಪ್ರಶ್ನೆ ಮಾಡುವಂತಿದೆ.

ಸೋತರೂ ರಾಜೀನಾಮೆ ನೀಡದೆ ಅಧಿಕಾರಕ್ಕಾಗಿ ಹಠ ಹಿಡಿಯುವ ಪ್ರವೃತ್ತಿ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಈ ಎರಡು ರಾಜ್ಯಗಳ ಉದಾಹರಣೆಗಳು ನಮ್ಮ ಮುಂದಿರುವ ಎರಡು ದಾರಿಗಳನ್ನು ಸ್ಪಷ್ಟಪಡಿಸುತ್ತವೆ: ಒಂದು ತಮಿಳುನಾಡು ತೋರಿಸುತ್ತಿರುವ ಪರಸ್ಪರ ಗೌರವದ ಸುಸಂಸ್ಕೃತ ದಾರಿ, ಇನ್ನೊಂದು ಬಂಗಾಳ ತೋರಿಸುತ್ತಿರುವ ದ್ವೇಷ ಮತ್ತು ಹಿಂಸೆಯ ದಾರಿ.

ಹೊಸ ಪೀಳಿಗೆಯ ರಾಜಕಾರಣಿಗಳು ಮತ್ತು ಮತದಾರರು ತಮಿಳುನಾಡಿನ ಈ ಪಕ್ವತೆಯನ್ನು ಮಾದರಿಯಾಗಿ ಸ್ವೀಕರಿಸಬೇಕಿದೆ. ರಾಜಕೀಯ ಪಕ್ಷಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಅದು ವೈಯಕ್ತಿಕ ದ್ವೇಷ ಅಥವಾ ಸಾಮಾಜಿಕ ಅಶಾಂತಿಗೆ ಕಾರಣವಾಗಬಾರದು. ಬಂಗಾಳದ ಅಶಾಂತಿಯು ನಮಗೆ ಒಂದು ಎಚ್ಚರಿಕೆಯ ಗಂಟೆಯಾದರೆ, ತಮಿಳುನಾಡಿನ ಸೌಹಾರ್ದತೆಯು ಭವಿಷ್ಯದ ಆಶಾವಾದದ ಸಂಕೇತವಾಗಿದೆ.

ಚುನಾವಣೆಯಲ್ಲಿ ಯಾರು ಗೆದ್ದರೂ ಸೋತರೂ ಅಂತಿಮವಾಗಿ ಪ್ರಜಾಪ್ರಭುತ್ವ ಮತ್ತು ಶಾಂತಿ ಗೆಲ್ಲಬೇಕು. ಅಧಿಕಾರ ಬರುತ್ತದೆ ಹೋಗುತ್ತದೆ, ಆದರೆ ನಾವು ಉಳಿಸಿಕೊಳ್ಳುವ ರಾಜಕೀಯ ಸಂಸ್ಕೃತಿ ಮುಂದಿನ ತಲೆಮಾರಿಗೆ ದಾರಿದೀಪವಾಗಬೇಕು.

Leave a Reply

Discover more from

Subscribe now to keep reading and get access to the full archive.

Continue reading