ಬಂಟ್ವಾಳದ ಬಿ.ಸಿ. ರೋಡ್‌ನಲ್ಲಿರುವ ಸ್ಪರ್ಶ ಕಲಾಮಂದಿರದಲ್ಲಿ ಮೇ 6 ರಂದು ಅರೆಭಾಷೆ ಸಾಂಸ್ಕೃತಿಕ ಸಂಭ್ರಮ 2026 ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಬಂಟ್ವಾಳದ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ಕರಾವಳಿ ಕಲೋತ್ಸವದ ಅಂಗವಾಗಿ ಆಯೋಜಿಸಲಾಗಿತ್ತು.


ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅರೆಭಾಷೆ ಸಾಂಸ್ಕೃತಿಕ ಸಂಭ್ರಮ ಸಮಿತಿಯ ಅಧ್ಯಕ್ಷರಾಗಿ ವಕೀಲ ಉಮೇಶ್ ಕುಮಾರ್ ವೈ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ವಕೀಲ ಅಶ್ವಿನಿ ಕುಮಾರ್ ರೈ, ಕೆ. ಸುಂದರ ಗೌಡ ನಡುಬೈಲು, ಸಿ. ಕುಶಾಲಪ್ಪ ಗೌಡ ಅನಂತಾಡಿ, ಪುರಂದರ ಗೌಡ ಮತ್ತು ಲಿಂಗಪ್ಪ ಗೌಡ ಅಳಿಕೆ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಲತಾಪ್ರಸಾದ್ ಕುದ್ರಾಜೆ ಹಾಗೂ ಕಾರ್ಯಪ್ಪ ಪಿ.ಎಸ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ಬಂದಿತು.
ಸಭಾ ಕಾರ್ಯಕ್ರಮದಲ್ಲಿ ತೇವು ತಾರನಾಥ ಕೊಟ್ಟಾರಿ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಅಕಾಡೆಮಿ ಸದಸ್ಯ ಡಾ. ಜ್ಞಾನೇಶ್ ಎನ್.ಎ ಅವರು ಎಲ್ಲರನ್ನು ಸ್ವಾಗತಿಸಿದರೆ, ಧರ್ಮಾವತಿ ಪಿ.ಬಿ ವಂದನಾರ್ಪಣೆ ಮಾಡಿದರು. ಪೂಜಾಶ್ರೀ ವಿತೇಶ್ ಕೋಡಿ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಸಭಾ ಕಾರ್ಯಕ್ರಮ ಮುಗಿದ ನಂತರ ಯಶವಂತ ಕುಡೇಕಲ್ಲು ಅವರ ಅಧ್ಯಕ್ಷತೆಯಲ್ಲಿ ವಿಶೇಷ ಕವಿಗೋಷ್ಠಿ ನಡೆಯಿತು. ಇದರಲ್ಲಿ ಉದಯ ಭಾಸ್ಕರ್ ಸುಳ್ಯ, ಕುಸುಮಾಕರ ಅಂಬೆಕಲ್ಲು, ಜೀವನ್ ಪುರ ಮರ್ಕಂಜ, ಚಂದ್ರಾವತಿ ಬಡ್ಡಡ್ಕ, ಹೇಮಲತಾ ಕಜಿಗದ್ದೆ ಹಾಗೂ ಡಾ. ತಾರಾ ಗಣೇಶ್ ಅವರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ನಂತರ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೆಳೆದವು. ಸ್ವರ ಬೆಟ್ಟಂಪಾಡಿ ತಂಡದಿಂದ ಅರೆಭಾಷೆ ನೃತ್ಯ, ಮಂಡೆಕೋಲು ಗ್ರಾಮದ ತಂಡದಿಂದ ಸಿದ್ಧವೇಶ, ರಮೇಶ್ ಮೆಟ್ಟಿನಡ್ಕ ಅವರಿಂದ ಅರೆಭಾಷೆ ಗಾಯನ ಹಾಗೂ ಶ್ರೀ ಮೂಕಾಂಬಿಕಾ ಕಲ್ಪರಕ್ ಅಕಾಡೆಮಿ ಪುತ್ತೂರು ತಂಡದಿಂದ ಕೆರೆಗೆ ಹಾರ ನೃತ್ಯ ರೂಪಕ ಪ್ರದರ್ಶನಗೊಂಡವು. ದಿನೇಶ್ ಸುಳ್ಯ ತಂಡದ ಪೋಲ್ಕೆ ಕಾರ್ಯಕ್ರಮವು ಗಮನಸೆಳೆಯಿತು. ಇಡೀ ಸಾಂಸ್ಕೃತಿಕ ವೈಭವದ ಸಂಯೋಜನೆಯನ್ನು ಲತಾಪ್ರಸಾದ್ ಕುದ್ಪಾಜೆ ಅವರು ನಿರ್ವಹಿಸಿದರು.
ಈ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ವಿವಿಧ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಆರು ದಿನಗಳ ಕರಾವಳಿ ಕಲೋತ್ಸವದ ಭಾಗವಾಗಿತ್ತು. ತುಳು, ಕೊಂಕಣಿ, ಬ್ಯಾರಿ ಮತ್ತು ಅರೆಭಾಷೆ ಅಕಾಡೆಮಿಗಳ ಸಂಗಮದೊಂದಿಗೆ ಈ ಬಹುಸಂಸ್ಕೃತಿ ಉತ್ಸವವು ಸ್ಥಳೀಯ ಕಲೆ ಮತ್ತು ಸಂಸ್ಕೃತಿಗೆ ಭದ್ರ ಬುನಾದಿ ಹಾಕಿಕೊಟ್ಟಿತು.

