ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆ ಬೆನ್ನಲ್ಲೇ ಅಸಮಾಧಾನ ಸ್ಪೋಟ: ಸಂಪಾಜೆ ವಲಯ ಅಧ್ಯಕ್ಷತೆಗೆ ವಸಂತ ಗೌಡ ಪೆಲ್ತಡ್ಕ ರಾಜೀನಾಮೆ

ಸುಳ್ಯ ಬ್ಲಾಕ್ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದ್ದು, ಸಂಪಾಜೆ ವಲಯ ಕಾಂಗ್ರೆಸ್ ಪ್ರಭಾರ ಅಧ್ಯಕ್ಷರಾದ ವಸಂತ ಪೆಲ್ತಡ್ಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನೂತನವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಾದ ಸಂದರ್ಭದಲ್ಲಿ ಸಂಪಾಜೆಯ ನಾಯಕರನ್ನು ವಿಶ್ವಾಸಕ್ಕೆ ಪಡೆಯದಿರುವುದು ಮತ್ತು ಕನಿಷ್ಠ ಅಭಿಪ್ರಾಯವನ್ನೂ ಕೇಳದಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ. ಮುಖ್ಯವಾಗಿ, ಕಳೆದ ಬಾರಿ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ಆದೇಶ ಉಲ್ಲಂಘಿಸಿ ಸ್ಪರ್ಧಿಸಿದ್ದ ಎಸ್.ಕೆ. ಹನೀಫ್ ಅವರನ್ನು ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿರುವುದು ಶಿಸ್ತು ಮತ್ತು ಪಕ್ಷಪ್ರೇಮಕ್ಕೆ ನೀಡಿದ ಹಿನ್ನಡೆ ಎಂದು ಅವರು ಆಕ್ಷೇಪಿಸಿದ್ದಾರೆ.

ಇಂತಹ ನಿರ್ಧಾರಗಳು ಮುಂದಿನ ದಿನಗಳಲ್ಲಿ ಪಕ್ಷವಿರೋಧಿ ಚಟುವಟಿಕೆಗಳಿಗೆ ಪ್ರೇರಣೆ ನೀಡಲಿವೆ ಹಾಗೂ ಸುಳ್ಯದ ಇತರೆಡೆ ಪಕ್ಷಕ್ಕಾದ ಸ್ಥಿತಿಯೇ ಸಂಪಾಜೆಯಲ್ಲೂ ಮರುಕಳಿಸುವ ಮುನ್ಸೂಚನೆ ಸಿಕ್ಕಿರುವುದರಿಂದ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ಅದರಂತೆ ಬ್ಲಾಕ್ ಹುದ್ದೆ ಹಾಗೂ ಸಂಪಾಜೆ ವಲಯದ ಪ್ರಭಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಂದಿನ ದಿನಗಳಲ್ಲಿ ಕೇವಲ ಸಾಮಾನ್ಯ ಸದಸ್ಯನಾಗಿ ಮುಂದುವರಿಯುವುದಾಗಿ ವಸಂತ ಪೆಲ್ತಡ್ಕ ಅವರು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಇದುವರೆಗೆ ಸಹಕರಿಸಿದ ಎಲ್ಲಾ ನಾಯಕರಿಗೂ ಮತ್ತು ಕಾರ್ಯಕರ್ತರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading