ನಾವ್ಯಾರೂ ಈಗ ಸ್ವತಂತ್ರರಾಗಿಲ್ಲ: ಈ ಡಿಜಿಟಲ್ ಸೆರೆಮನೆಯಿಂದ ಹೊರಬರದೇ ಹೋದರೆ..

ಇಂದಿ‌ನ ಜಗತ್ತಿನಲ್ಲಿ ಮನುಷ್ಯನಿಗೆ ಆಮ್ಲಜನಕಕ್ಕಿಂತಲೂ ವೈ-ಫೈ ಮತ್ತು ಡೇಟಾ ಪ್ಯಾಕ್‌ಗಳೇ ಮುಖ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಬೆರಳುಗಳ ತುದಿಯಲ್ಲಿ ಜಗತ್ತನ್ನೇ ಅಂಗೈಗೆ ತಂದುಕೊಟ್ಟಿರುವ ತಂತ್ರಜ್ಞಾನ, ಅದೇ ಕೈಗಳಿಂದ ನಮ್ಮವರನ್ನು ಮುಟ್ಟದಂತೆ, ಪ್ರೀತಿಸದಂತೆ ದೂರ ತಳ್ಳುತ್ತಿದೆ. ಮನೆಯೊಳಗೆ ಪರಸ್ಪರ ಮುಖ ನೋಡಿ ಮಾತನಾಡುವ ಅಭ್ಯಾಸ ಮರೆಯಾಗುತ್ತಿದೆ. ಸಹೋದ್ಯೋಗಿಗಳ ನಡುವಿನ ಒಡನಾಟ ಕೇವಲ ಔಪಚಾರಿಕ ಸಂದೇಶಗಳಿಗೆ ಸೀಮಿತವಾಗಿದೆ. ಈ ಡಿಜಿಟಲ್ ವ್ಯಸನ ಕೇವಲ ಸಂಬಂಧಗಳನ್ನು ಮಾತ್ರವಲ್ಲ, ನಮ್ಮ ಆರೋಗ್ಯವನ್ನೂ ಹಂತಹಂತವಾಗಿ ಹದಗೆಡಿಸುತ್ತಿದೆ.
ದೀರ್ಘಕಾಲದ ಮೊಬೈಲ್ ಮತ್ತು ಸ್ಕ್ರೀನ್ ವೀಕ್ಷಣೆಯಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ನಾವು ಇಂದು ಕಡೆಗಣಿಸುತ್ತಿದ್ದೇವೆ.

ಅವುಗಳಲ್ಲಿ ಪ್ರಮುಖವಾವಾದವುಗಳೆಂದರೆ ಗಂಟೆಗಟ್ಟಲೆ ಮೊಬೈಲ್ ಪರದೆಯನ್ನು ದಿಟ್ಟಿಸುವುದರಿಂದ ಕಣ್ಣುಗಳ ಮೇಲೆ ವಿಪರೀತ ಒತ್ತಡ ಉಂಟಾಗುತ್ತದೆ. ಇದು ದೃಷ್ಟಿ ಮಾಂದ್ಯತೆ, ಕಣ್ಣು ಒಣಗುವುದು ಮತ್ತು ತಲೆನೋವಿಗೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲದೆ, ಮೊಬೈಲ್ ಬಳಸುವಾಗ ನಮ್ಮ ಕುತ್ತಿಗೆಯನ್ನು ಬಗ್ಗಿಸುವ ಭಂಗಿಯಿಂದಾಗಿ ‘ಟೆಕ್ಸ್ಟ್ ನೆಕ್’ ಎಂಬ ಕುತ್ತಿಗೆ ನೋವಿನ ಸಮಸ್ಯೆ ಮತ್ತು ಬೆನ್ನುಮೂಳೆಯ ತೊಂದರೆಗಳು ಯುವಜನತೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ.

ಮೊಬೈಲ್ ಪರದೆಯಿಂದ ಹೊರಬರುವ ನೀಲಿ ಬೆಳಕು (Blue Light) ನಮ್ಮ ಶರೀರದಲ್ಲಿ ನಿದ್ರೆಯನ್ನು ಪ್ರಚೋದಿಸುವ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ. ಇದರಿಂದಾಗಿ ತಡರಾತ್ರಿಯವರೆಗೆ ನಿದ್ದೆ ಬಾರದೆ ಇರುವುದು, ಬೆಳಿಗ್ಗೆ ಎದ್ದಾಗ ಅತಿಯಾದ ಆಯಾಸ ಮತ್ತು ಏಕಾಗ್ರತೆಯ ಕೊರತೆ ಕಾಡುತ್ತಿದೆ. ದೀರ್ಘಕಾಲದ ಈ ಅಭ್ಯಾಸವು ಮೆದುಳಿನ ಕಾರ್ಯಕ್ಷಮತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಸದಾ ಕಾಲ ಸೋಷಿಯಲ್ ಮೀಡಿಯಾದಲ್ಲಿ ಇತರರ ಬಣ್ಣದ ಬದುಕನ್ನು ನೋಡುವುದು ನಮ್ಮಲ್ಲಿ ಕೀಳರಿಮೆಯನ್ನು ಉಂಟುಮಾಡುತ್ತದೆ. ಇಂಟರ್ನೆಟ್ ಸಂಪರ್ಕ ಕ್ಷಣಕಾಲ ಇಲ್ಲವಾದರೂ ಮನುಷ್ಯನಲ್ಲಿ ಉಂಟಾಗುವ ಚಡಪಡಿಕೆ ಮತ್ತು ಆತಂಕವು ಒಂದು ರೀತಿಯ ಮಾನಸಿಕ ರೋಗದಂತೆಯೇ ಮಾರ್ಪಡುತ್ತಿದೆ. ನಾವು ವರ್ಚುವಲ್ ಜಗತ್ತಿನಲ್ಲಿ ಸಾವಿರಾರು ಸ್ನೇಹಿತರನ್ನು ಹೊಂದಿದ್ದರೂ, ನಿಜ ಜೀವನದಲ್ಲಿ ಹಂಚಿಕೊಳ್ಳಲು ಯಾರೂ ಇಲ್ಲದ ಏಕಾಂತಕ್ಕೆ ದೂಡಲ್ಪಡುತ್ತಿದ್ದೇವೆ.

ಮಕ್ಕಳು ಹೊರಗೆ ಹೋಗಿ ಆಟವಾಡುವ ಬದಲು ಮೊಬೈಲ್ ಗೇಮ್‌ಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಅವರ ಸಾಮಾಜಿಕ ಕೌಶಲಗಳು ಕುಂಠಿತಗೊಳ್ಳುತ್ತಿವೆ. ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಸಹಾನುಭೂತಿ ತೋರುವ ಗುಣಗಳು ಅವರಲ್ಲಿ ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಷಯ.
ಈ ಎಲ್ಲಾ ಸಮಸ್ಯೆಗಳಿಂದ ಹೊರಬರಲು ನಾವು ‘ಡಿಜಿಟಲ್ ಡಯಟ್’ ಅನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಊಟದ ಮೇಜಿನ ಮೇಲೆ ಮೊಬೈಲ್ ನಿಷೇಧಿಸುವುದು, ಮಲಗುವ ಮುನ್ನ ಒಂದು ಗಂಟೆ ಮೊದಲೇ ಫೋನ್ ದೂರವಿಡುವುದು ಮತ್ತು ವಾರಾಂತ್ಯದಲ್ಲಿ ಕನಿಷ್ಠ ಕೆಲವು ಗಂಟೆಗಳ ಕಾಲ ‘ಡಿಜಿಟಲ್ ಡಿಟಾಕ್ಸ್’ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ.
ತಂತ್ರಜ್ಞಾನವು ನಮ್ಮ ಬದುಕನ್ನು ಸುಂದರಗೊಳಿಸಲು ಇರಬೇಕೇ ಹೊರತು, ನಮ್ಮ ಬದುಕನ್ನೇ ನುಂಗಿ ಹಾಕಬಾರದು. ನೆನಪಿಡಿ, ಇಂಟರ್ನೆಟ್ ಮೂಲಕ ಸಿಗುವ ಮಾಹಿತಿ ಅರಿವು ನೀಡಬಲ್ಲದು, ಆದರೆ ಹಿರಿಯರ ಜೊತೆಗಿನ ಮಾತುಕತೆ ಮತ್ತು ಕುಟುಂಬದ ಜೊತೆಗಿನ ಕಾಲ ಕಳೆಯುವಿಕೆ ಮಾತ್ರ ಜೀವನದ ಮೌಲ್ಯಗಳನ್ನು ಕಲಿಸಬಲ್ಲದು. ಸ್ಕ್ರೀನ್ ಆಫ್ ಮಾಡಿ, ಸಂಬಂಧಗಳ ಬೆಳಕನ್ನು ಬೆಳಗಿಸೋಣ.

Leave a Reply

Discover more from

Subscribe now to keep reading and get access to the full archive.

Continue reading