ಒಂದು ದಿನ ರಾತ್ರಿ ಮಲಗುವ ಕೋಣೆಯ ಒಂದು ಮೂಲೆಯಲ್ಲಿ ಹಠಾತ್ತನೆ ಕಾಣಿಸಿಕೊಂಡ ಒಂದು ಹಾತೆ ಮನೆಯವರ ನಿದ್ದೆಗೆಡಿಸಿತ್ತು. ರೆಕ್ಕೆಗಳನ್ನು ಹರಡಿಕೊಂಡು ಗೋಡೆಗೆ ಅಂಟಿಕೊಂಡಿದ್ದ ಅದು ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿಯೇ ಇತ್ತು. ಅತ್ತಿತ್ತ ಕದಲದೆ, ರೆಕ್ಕೆ ಬಡಿಯದೆ ಕಲ್ಲಿನಂತೆ ಕುಳಿತಿದ್ದ ಆ ಜೀವಿಯನ್ನು ನೋಡುತ್ತಿದ್ದಂತೆ ಮನೆಯ ಹಿರಿಯರ ಮಾತುಗಳು ಕಿವಿಯಲ್ಲಿ ರಿಂಗಣಿಸತೊಡಗಿದವು. ತೀರಿಕೊಂಡವರು ಮೋಕ್ಷ ಸಿಗದೆ ಹೀಗೆ ಹಾತೆಯ ರೂಪದಲ್ಲಿ ಮನೆಗೆ ಬರುತ್ತಾರೆ ಎಂಬ ಹಳೆಯ ನಂಬಿಕೆ ಮೌನವಾಗಿ ಮನೆಯೊಳಗೆ ಭಯ ಮತ್ತು ಕುತೂಹಲದ ಸಂದರ್ಭ ಹುಟ್ಟುಹಾಕಿತು.
ದಿನಗಳು ಕಳೆದವು..
ಯಾವಾಗಲೂ ಹಾರಾಡುವ ಸ್ವಭಾವದ ಹಾತೆ ಎರಡು ದಿನಗಳಾದರೂ ಒಂದೇ ಕಡೆ ಇರುವುದನ್ನು ಕಂಡು ಮನಸ್ಸಿನಲ್ಲಿ ಸಂಶಯದ ಸುಳಿಗಳು ಎದ್ದವು. ಅಗಲಿದ ಯಾವ ಹಿರಿಯರು ಇರಬಹುದು ಇದು? ನಮ್ಮ ಮೇಲೆ ಅದೆಂತಹ ಪ್ರೀತಿ ಇರಬಹುದು? ಅಥವಾ ಏನನ್ನಾದರೂ ಹೇಳಲು ಪ್ರಯತ್ನಿಸುತ್ತಿದೆಯೇ? ಇಂತಹ ನೂರಾರು ಪ್ರಶ್ನೆಗಳು ತಲೆ ಕೆರೆದುಕೊಳ್ಳುವಂತೆ ಮಾಡಿದವು. ಅದನ್ನು ನೋಡಿದಾಗಲೆಲ್ಲ ಎದೆಯೊಳಗೆ ಒಂದು ಅಳುಕು, ಒಂದು ರೀತಿಯ ಭಾವುಕತೆ. ಸಾಕ್ಷಾತ್ ಆತ್ಮವೇ ಎದುರು ಕುಳಿತಿರುವಾಗ ಅದನ್ನು ಅಸಡ್ಡೆ ಮಾಡುವುದು ಹೇಗೆ ಎಂಬ ಸಂಕೋಚ.






ಮೂರನೇ ದಿನವೂ ಅದು ಅಲ್ಲಿಯೇ ಇರುವುದನ್ನು ಕಂಡು ಕುತೂಹಲ ತಡೆಯಲಾಗಲಿಲ್ಲ. ಹತ್ತಿರ ಹೋಗಿ ನೋಡಿದರೂ ಅದು ಚಲಿಸಲಿಲ್ಲ. ಮೆಲ್ಲನೆ ಕೈ ಚಾಚಿ ಅದರ ರೆಕ್ಕೆಗಳನ್ನು ಮುಟ್ಟುವ ಸಾಹಸಕ್ಕೆ ಮನಸ್ಸು ಮುಂದಾಯಿತು. ಒಂದು ವೇಳೆ ದೈವೀ ಶಕ್ತಿಯೇ ಆಗಿದ್ದರೆ ಕೈ ತಾಗಿದ ತಕ್ಷಣ ಮಾಯವಾಗಬಹುದೇ ಎಂಬ ಸಣ್ಣದೊಂದು ನಡುಕ ಬೆರಳುಗಳಲ್ಲಿತ್ತು. ಆದರೆ ಬೆರಳು ತಾಗಿದಾಗಲೂ ಅದು ಕದಲಲಿಲ್ಲ. ಅಚ್ಚರಿಯಿಂದ ಅದನ್ನು ಮೆಲ್ಲಗೆ ಅಲ್ಲಾಡಿಸಿದಾಗ ಅದರ ಸತ್ಯ ನಿಧಾನವಾಗಿ ಹೊರಬರತೊಡಗಿತು.




ಅದನ್ನು ಕಸ ಬಿಸಾಡುವ ‘ಕೋರಿ’ಯಲ್ಲಿ ಎತ್ತಿ ಬೆಳಕಿಗೆ ಹಿಡಿದಾಗ ಸಂಶಯದ ಮೋಡಗಳು ಕರಗಿದ್ದವು. ಆ ಹಾತೆ ಯಾವುದೋ ನಿಗೂಢ ಲೋಕದ ಪ್ರತಿನಿಧಿಯಾಗಿರಲಿಲ್ಲ. ಅದು ಮೇಲಿರುವ ಫ್ಯಾನಿನ ವೇಗಕ್ಕೆ ಸಿಲುಕಿ ರೆಕ್ಕೆ ತುಂಡಾಗಿ ಅಸಹಾಯಕವಾಗಿ ಅಲ್ಲಿ ಬಿದ್ದಿತ್ತು. ಆ ಜೀವಿಗೆ ಫ್ಯಾನಿನ ಬ್ಲೇಡು ಬಡಿದ ಕಾರಣ ಗಾಯವಾಗಿತ್ತು ಅಷ್ಟೇ.
ಆತ್ಮ, ಮೋಕ್ಷ, ಹಿರಿಯರ ಭೇಟಿಯೆಂಬ ಎಲ್ಲಾ ರೋಮಾಂಚನಕಾರಿ ಕಲ್ಪನೆಗಳು ಆ ಕ್ಷಣವೇ ಮಣ್ಣು ಪಾಲಾದವು. ಕೈಯಲ್ಲಿದ್ದ ಕಸ ಬಿಸಾಡುವ ವಸ್ತುವಿನಲ್ಲಿದ್ದ ಆ ಜೀವಿಯನ್ನು ಹೊರಗೆ ಬಿಸಾಡುವಾಗ ನಿಗೂಢತೆಯ ಜಾಗದಲ್ಲಿ ವಾಸ್ತವದ ನಗು ಮಾತ್ರ ಬಾಕಿ ಉಳಿದಿತ್ತು.
~ಸಾಹುಕಾರ್ ಅಚ್ಚು

