ಕೇರಳದ ಮಲಪ್ಪುರಂ ಜಿಲ್ಲೆಯ ಎಡವಣ್ಣ ಎಂಬಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾದ ಅತ್ಯಂತ ಹೃದಯಸ್ಪರ್ಶಿ ಘಟನೆಯೊಂದು ವರದಿಯಾಗಿದೆ. ಇಲ್ಲಿನ ಸ್ಥಳೀಯ ನಿವಾಸಿಯಾಗಿದ್ದ 65 ವರ್ಷದ ಆಮಿನಾ ಎಂಬುವವರು ಕಳೆದ ಕೆಲವು ದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಮರಣದ ನಂತರ ಅವರು ದಿನಾ ಅನ್ನ ಹಾಕುತ್ತಿದ್ದ ಬೀದಿನಾಯಿಯೊಂದು ತೋರುತ್ತಿರುವ ನಿಷ್ಠೆ ಮತ್ತು ಪ್ರೀತಿ ಈಗ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.
ಆಮಿನಾ ಅವರು ಬದುಕಿದ್ದಾಗ ಈ ಶ್ವಾನವನ್ನು ಅಪಾರ ಪ್ರೀತಿಯಿಂದ ನೋಡಿಕೊಂಡಿದ್ದರು. ಮತ್ತು ಪ್ರತಿದಿನ ಅದಕ್ಕೆ ತಪ್ಪದೇ ಆಹಾರ ನೀಡುತ್ತಿದ್ದರು. ಆದರೆ ಒಂದು ವಾರದ ಹಿಂದೆ ಆಮಿನಾ ಅವರು ಇದ್ದಕ್ಕಿದ್ದಂತೆ ನಿಧನರಾದಾಗ ಆ ಶ್ವಾನವು ಒಂಟಿಯಾಯಿತು. ಅವರನ್ನು ಮಸೀದಿಯ ಕಬರಸ್ಥಾನದಲ್ಲಿ ದಫನ ಮಾಡಿದ ದಿನದಿಂದಲೂ ಆ ಶ್ವಾನವು ಅಲ್ಲಿಂದ ಕದಲುತ್ತಿಲ್ಲ.



ಪ್ರತಿದಿನ ತನ್ನ ಅನ್ನದಾತೆ ಮಲಗಿರುವ ಸಮಾಧಿಯ ಬಳಿಯೇ ಹೋಗಿ ಕುಳಿತುಕೊಳ್ಳುವ ಈ ಶ್ವಾನವು ದಿನವಿಡೀ ಅಲ್ಲಿಯೇ ಕಾಲ ಕಳೆಯುತ್ತಿದೆ. ತನ್ನನ್ನು ಪ್ರೀತಿಯಿಂದ ಸಲಹುತ್ತಿದ್ದ ವ್ಯಕ್ತಿ ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದ ಆ ಮೂಕ ಪ್ರಾಣಿ, ಸಮಾಧಿಯ ಸುತ್ತಮುತ್ತಲೇ ಓಡಾಡುತ್ತಾ ಮೌನವಾಗಿ ತನ್ನ ನೋವನ್ನು ವ್ಯಕ್ತಪಡಿಸುತ್ತಿದೆ. ಹಸಿವು ಮತ್ತು ಬಾಯಾರಿಕೆಯನ್ನು ಮರೆತು ತನ್ನ ಅನ್ನದಾತೆಯ ನೆನಪಿನಲ್ಲಿ ಸಮಾಧಿಯನ್ನೇ ಕಾಯುತ್ತಿರುವ ಈ ಶ್ವಾನದ ಸ್ಥಿತಿಯನ್ನು ಕಂಡು ಸ್ಥಳೀಯರು ಮರುಗುತ್ತಿದ್ದಾರೆ.



ಸಾಮಾನ್ಯವಾಗಿ ಪ್ರಾಣಿಗಳಿಗೆ ಕೃತಜ್ಞತೆ ಜಾಸ್ತಿ ಎನ್ನಲಾಗುತ್ತದೆ. ಆದರೆ ಸಾವಿನ ನಂತರವೂ ತನ್ನ ಅನ್ನದಾತೆಯನ್ನು ಹುಡುಕುತ್ತಾ ಸಮಾಧಿಯ ಬಳಿ ದಿನ ಕಳೆಯುತ್ತಿರುವ ಈ ಶ್ವಾನದ ವರ್ತನೆಯು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ನಿಷ್ಕಲ್ಮಶ ಪ್ರೀತಿ ಎಂತಹದ್ದು ಎಂಬುದಕ್ಕೆ ಕನ್ನಡಿ ಹಿಡಿದಿದೆ. ಈ ಅಪೂರ್ವ ಬಾಂಧವ್ಯದ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಗಮನ ಸೆಳೆಯುತ್ತಿದೆ.




