ಈ ಸಲದ ಐಪಿಎಲ್ ನಲ್ಲಿ ವೈಭವ್ ಬಿರುಗಾಳಿ ಎಬ್ಬಿಸಿದ್ದು, ಕೇವಲ 15ನೇ ವಯಸ್ಸಿನಲ್ಲಿ ಐಪಿಎಲ್ ಇತಿಹಾಸವನ್ನು ತಿರುಚುವ ಸಾಧನೆ ಮಾಡಿದ್ದಾರೆ.
ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸುತ್ತಿರುವ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್ 2026ರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಈ ಯುವ ಪ್ರತಿಭೆ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದ ವೇಗದ ಶತಕಗಳ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಈ ಹದಿಹರೆಯದ ಆಟಗಾರ ತನ್ನದಾಗಿಸಿಕೊಂಡಿದ್ದಾರೆ.




ಇಂದು ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಇನ್ನಿಂಗ್ಸ್ ಆರಂಭಿಸಿದ ವೈಭವ್, ಹೈದರಾಬಾದ್ ಬೌಲರ್‌ಗಳನ್ನು ಅಕ್ಷರಶಃ ಪೆರೇಡ್ ನಡೆಸಿದರು. ಇಂದಿನ ಪಂದ್ಯದಲ್ಲಿ ಅವರು ಒಟ್ಟು 37 ಎಸೆತಗಳಲ್ಲಿ 103 ರನ್ ಗಳಿಸಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 12 ಭರ್ಜರಿ ಸಿಕ್ಸರ್‌ಗಳು ಸಿಡಿದವು. 36 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಐಪಿಎಲ್ ಇತಿಹಾಸದ ಮೂರನೇ ಅತಿ ವೇಗದ ಶತಕದ ದಾಖಲೆ ಬರೆದರು.






ಕ್ರಿಸ್ ಗೇಲ್ ಅವರ 30 ಎಸೆತಗಳ ಶತಕದ ದಾಖಲೆಯನ್ನು ಹೊರತುಪಡಿಸಿದರೆ, ಟಾಪ್ 3 ಪಟ್ಟಿಯಲ್ಲಿ ಉಳಿದ ಎರಡು ಸ್ಥಾನಗಳು ಈಗ ವೈಭವ್ ಹೆಸರಿನಲ್ಲಿವೆ. ಅವರು 2025ರಲ್ಲಿ ಗುಜರಾತ್ ವಿರುದ್ಧ 35 ಎಸೆತಗಳಲ್ಲಿ ಶತಕ ಗಳಿಸಿದ್ದರು ಮತ್ತು ಈಗ ಹೈದರಾಬಾದ್ ವಿರುದ್ಧ 36 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಯೂಸುಫ್ ಪಠಾಣ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ದೈತ್ಯ ಆಟಗಾರರನ್ನು ಹಿಂದಿಕ್ಕಿ 15ನೇ ವಯಸ್ಸಿನಲ್ಲಿ ಈ ಆಟಗಾರ ವಿಸ್ಮಯ ಮೂಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಐಪಿಎಲ್‌ನಲ್ಲಿ ಎರಡು ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಈಗ ವೈಭವ್ ಸೂರ್ಯವಂಶಿ ಅವರ ಪಾಲಾಗಿದೆ. ಕ್ರಿಕೆಟ್ ಜಗತ್ತು ಕಂಡ ಅತ್ಯಂತ ದೊಡ್ಡ ಅದ್ಭುತವಾಗಿ ಇವರು ಹೊರಹೊಮ್ಮುತ್ತಿದ್ದಾರೆ ಎಂಬುದಕ್ಕೆ ಇಂದಿನ ಈ ಇನ್ನಿಂಗ್ಸ್ ಸಾಕ್ಷಿಯಾಗಿದೆ.

