ಮೊಬೈಲ್ ತೆರೆದು ಇನ್ಸ್ಟಾಗ್ರಾಮ್ ನೋಡಿ ಎಲ್ಲರೂ ಸಂತೋಷವಾಗಿದ್ದಾರೆ. ಒಬ್ಬ ಫಾರಿನ್ ಗೆ ಹೋಗಿದ್ದಾನೆ, ಮತ್ತೊಬ್ಬಳು ಮನೆ ಕಟ್ಟಿದ್ದಾಳೆ, ಇನ್ನೊಬ್ಬ ಹೊಸ ಬಿಸಿನೆಸ್ ಶುರು ಮಾಡಿದ್ದಾನೆ. ವಾಟ್ಸಾಪ್ ಸ್ಟೇಟಸ್ ನೋಡಿ ಎಲ್ಲರದೂ ವೇದಾಂತ. ಎಲ್ಲರೂ ಸಭ್ಯರು. ಹಾಗಾದರೆ ಲೋಕ ಎಷ್ಟು ಚೆನ್ನಾಗಿರಬೇಕು? ಆಗ ನಮ್ಮ ಮನಸ್ಸಿನಲ್ಲಿ ತೀರಾ ವೈಯಕ್ತಿಕವಾಗಿ ಯೋಚಿಸುವಾಗ ಒಂದೊಂದೇ ಪ್ರಶ್ನೆಗಳು ಮೂಡುತ್ತದೆ.
“ನನಗೇನಾಗಿದೆ? ನಾನು ಮಾತ್ರನಾ ಹೀಗಿರುವುದಾ? ಎಂದು.
ಅಲ್ಲ, ನಿಜ ಹೇಳಬೇಕೆಂದರೆ ನಾವು ಮಾತ್ರವಲ್ಲ. ನನಗೆ ಈಗ ಮಧ್ಯ ವಯಸ್ಸು. ಈ ವಯಸ್ಸಿನಲ್ಲಿ ನನ್ನ ಅಕೌಂಟ್‌ನಲ್ಲಿ ನಾಳೆ ಏನಾದರೂ ಆಸ್ಪತ್ರೆಗೆ ಹೋಗಬೇಕು ಅಂದರೆ ಖರ್ಚು ಮಾಡುವಷ್ಟು ದುಡ್ಡಿಲ್ಲ. ಬದಲಾಗಿ ಆರು ಅಂಕಿಯ ಸಾಲವಿದೆ. ಪ್ರತಿ ತಿಂಗಳು ಮನೆ ಬಾಡಿಗೆ, ಕಂತುಗಳ ದಿನಾಂಕ ಹತ್ತಿರ ಬಂದಾಗ ಎದೆಯೊಡೆದಂತಾಗುತ್ತದೆ. ಗಳಿಕೆ ದುಡ್ಡು ಆ ದಿನವೇ ಮುಗಿದು ಹೋಗುತ್ತದೆ. ಮನೆ ಖರ್ಚು ನಿಭಾಯಿಸುತ್ತಲೇ ಹೈರಾಣಾಗಿ ಹೋಗಿರುತ್ತದೆ. ದೇಹಕ್ಕೆ ದಿನಾ ವಯಸ್ಸಾಗುತ್ತಿದೆ. ಪ್ರತಿ ತಿಂಗಳು ಹತ್ತನೇ ತಾರೀಖು ಬಂದರೆ ಬಾಡಿಗೆ ಕಟ್ಟಬೇಕು. ಸಣ್ಣದಾದರೂ ಒಂದು ಸ್ವಂತ ಮನೆ ಇರಬೇಕು, ಆ ಖುಷಿಯನ್ನು ಅಮ್ಮನ ಹೆಂಡತಿಯ ಮಕ್ಕಳ ಮುಖದಲ್ಲಿ ನೋಡಬೇಕು ಎಂಬ ಎಷ್ಟೋ ಜವಾಬ್ದಾರಿಗಳ ಭಾರ ಹೊತ್ತು ರಾತ್ರಿ ಮಲಗುತ್ತೇನೆ. ಆದರೆ ಹಲವರಂತೆ ಮಲಗಿದ ತಕ್ಷಣ ನಿದ್ದೆ ಬರುವುದಿಲ್ಲ. ಯಾಕೆಂದರೆ ಮನಸ್ಸಿನಲ್ಲಿ ಆತಂಕ (Anxiety) ತುಂಬಿರುತ್ತದೆ.
ನಾಳೆ ನಾನು ಏಳುವೆನೇ? ಇವತ್ತಿನ ರೀತಿ ನಾಳೆ ಎದ್ದು ನಡೆಯಬಹುದೇ? ಎಲ್ಲಾದರೂ ಮಲಗಿದಲ್ಲೇ ಬಾಕಿಯಾದರೆ ಈ ಸಾಲಗಳೆಲ್ಲಾ ಹೇಗೆ ತೀರುತ್ತದೆ? ಯಾವಾಗ ಮುಗಿಯುತ್ತದೆ? ನನ್ನ ಹೆಂಡತಿ ಮಕ್ಕಳಿಗೆ ಗತಿ ಯಾರು?
ಹೀಗೆ ಸಾವಿರ ಚಿಂತನೆಗಳು..
ಬೆಳಿಗ್ಗೆ ಎದ್ದಾಗ ಸುಸ್ತು. ಮಧ್ಯವಯಸ್ಸಿಗೆ ಶುರುವಾಗುವ ರೋಗಗಳು ತನ್ನ ತೋರ್ಪಡಿಸುವಿಕೆ ಶುರು ಮಾಡಿರುವುದರಿಂದ ದೇಹ ಅಲುಗಾಡಲು ಕೂಡ ಸೋಮಾರಿತನ ತೋರಿಸುತ್ತದೆ. ಮೈ ತೂಕ ಏರುಪೇರಾಗುತ್ತಿದೆ , ಕೈಕಾಲುಗಳೆಲ್ಲ ಒಂದು ರೀತಿ ಜೋಮುಜೋಮು. ಎಲ್ಲದರಲ್ಲೂ ನಿರಾಸಕ್ತಿ, ಜೀವನದ ಮೇಲೆಯೇ ಬೇಸರ.”ಯಾಕೆ ಹೀಗೆ ಬದುಕಬೇಕು” ಎಂದು ಅನ್ನಿಸಿಬಿಡುತ್ತದೆ.ಆದರೂ ಸ್ಟೇಟಸ್ ಹಾಕುವಾಗ “ಹ್ಯಾಪಿ” ಎಂದೇ ಹಾಕುತ್ತೇವೆ.
ಇದೆಲ್ಲವನ್ನೂ ಓದುತ್ತಿರುವಾಗ ನಿಮಗೆ “ಇದು ನಾನೇ ಅಲ್ವಾ” ಎಂದು ಅನಿಸುತ್ತಿದೆಯೇ? ಹಾಗಿದ್ದರೆ ನೀವು ಒಬ್ಬಂಟಿಯಲ್ಲ. ನಮ್ಮಂತೆ ತುಂಬಾ ಜನರಿದ್ದಾರೆ. ಸಾಲ ಇರುವವರು, ಜವಾಬ್ದಾರಿ ಹೊತ್ತವರು, ಆತಂಕದಿಂದ ನಿದ್ದೆ ಬಾರದವರು, ದೇಹ ಸಹಕರಿಸದಿದ್ದಕ್ಕೆ ತಮ್ಮನ್ನು ತಾವೇ ದ್ವೇಷಿಸುವವರು, ಎಲ್ಲವೂ ಸರಿಹೋಗುತ್ತದೆ ಎಂದು ಭಾವಿಸಿ ದಿನ ತಳ್ಳುವವರು.. ನಾವ್ಯಾರೂ ಪರ್ಫೆಕ್ಟ್ ಅಲ್ಲ, ನಮ್ಮ ಲೈಫ್ ರೀಲ್ಸ್ ತರಹ ಸುಂದರವಲ್ಲ. ಅದು ಗೊಂದಲಗಳಿಂದ ಕೂಡಿದೆ. ನೋವು, ಭಯ ಮತ್ತು ಅಪರಾಧ ಪ್ರಜ್ಞೆಯಿಂದ ತುಂಬಿದೆ.
ಅದೇ ಸತ್ಯ, ಅದೇ ಜೀವನ.
ಸೋತು ಹೋದೆ ಎಂದು ಭಾವಿಸಬೇಡಿ. ನಾವು ಹೋರಾಡುತ್ತಿದ್ದೇವೆ, ಅದುವೇ ದೊಡ್ಡ ವಿಷಯ.
ಇದೇನೂ ಉಪದೇಶವಲ್ಲ, ಉಪದೇಶದಿಂದ ಯಾರಿಗೂ ಹೊಟ್ಟೆ ತುಂಬುವುದಿಲ್ಲ, ಸಾಲ ತೀರುವುದಿಲ್ಲ, ಆತಂಕ ದೂರವಾಗುವುದಿಲ್ಲ.
ನಾನು ಹೇಳುತ್ತಿರುವುದು ಇಷ್ಟೇ
ಇಲ್ಲಿ ಯಾರೂ ಒಬ್ಬಂಟಿಯಲ್ಲ, ನಮ್ಮಂತೆ ಇನ್ನೂ ಸಾವಿರಾರು ಜನರಿದ್ದಾರೆ. ಬಹುಶಃ ಅದು ಗೊತ್ತಿದ್ದರೆ ಸಾಕು, ಈ ದಿನವನ್ನು ಕಳೆಯಲು..
ನಾವು ರೋಬೋಟ್‌ಗಳಲ್ಲ, ಮನುಷ್ಯರು. ನಮಗೆ ನೋವಾಗುತ್ತದೆ, ಭಯವಾಗುತ್ತದೆ, ಬೇಸರವಾಗುತ್ತದೆ. ಅದರರ್ಥ ನಾವು ಕೆಟ್ಟವರು ಅಥವಾ ಅಸಮರ್ಥರು ಎಂದಲ್ಲ.
ರಾತ್ರಿ ಮಲಗುವಾಗ ‘ನಾಳೆ ಎಲ್ಲವೂ ಬದಲಾಗಲಿ’ ಎಂದು ಪ್ರಾರ್ಥಿಸುತ್ತೀರಾ?
ನಾನೂ ಪ್ರಾರ್ಥಿಸುತ್ತೇನೆ. ಆದರೆ ಬೆಳಿಗ್ಗೆ ಎದ್ದಾಗ ಅದೇ ಸಾಲ, ಅದೇ ಟೆನ್ಷನ್, ಅದೇ ಜೀವನ.
ಆದರೂ ನಾವು ಏಳುತ್ತೇವೆ, ಹಲ್ಲುಜ್ಜುತ್ತೇವೆ, ಕೆಲಸಕ್ಕೆ ಹೋಗುತ್ತೇವೆ, ಎಲ್ಲರ ಜೊತೆ ನಗುತ್ತೇವೆ.
ಇದನ್ನೇ ಬದುಕುಳಿಯುವಿಕೆ ಎನ್ನುತ್ತಾರೆ. ನಾವ್ಯಾರೂ ಹೀರೋಗಳಲ್ಲದಿರಬಹುದು, ಆದರೆ ಪ್ರತಿದಿನವೂ ನಾವು ಗೆಲ್ಲುತ್ತಿದ್ದೇವೆ.
ಇದನ್ನು ಓದುತ್ತಿರುವ ನೀವು ಯಾವ ನಗರದಲ್ಲಿದ್ದರೂ, ಯಾವ ಕೆಲಸ ಮಾಡುತ್ತಿದ್ದರೂ, ಗಂಡಿರಲಿ ಹೆಣ್ಣಿರಲಿ, ಒಂದು ವಿಷಯ ನೆನಪಿಡಿ.
ನಮ್ಮ ನೋವು ಸುಳ್ಳಲ್ಲ, ನಮ್ಮ ಸುಸ್ತು ನಾಟಕವಲ್ಲ.
ನಮ್ಮ ಭಯ ವಾಸ್ತವ, ಅದನ್ನು ಒಪ್ಪಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ನಾವೆಲ್ಲರೂ ಒಂದೇ ದೋಣಿಯಲ್ಲಿದ್ದೇವೆ, ದೋಣಿ ತೂತಾಗಿದೆ ನಿಜ, ಆದರೆ ಮುಳುಗಿಲ್ಲ.
ಹುಟ್ಟು ಹಾಕಬೇಕು, ಮೆಲ್ಲನೆ..
~ಸಾಹುಕಾರ್ ಅಚ್ಚು









