ಕನ್ನಡ ಶಾಲೆಗಳ ಉಳಿವಿಗಾಗಿ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದವರಿಂದ ವಿನೂತನ ಕಾರ್ಯಕ್ರಮಗಳು

ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಹೊಸ ಆಯಾಮ – ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ಮಹೋನ್ನತ ಹೆಜ್ಜೆ

ಇಂದಿನ ಆಧುನಿಕ ಕಾಲಘಟ್ಟದಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹದ ನಡುವೆ ಸರ್ಕಾರಿ ಕನ್ನಡ ಶಾಲೆಗಳು ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ದಯನೀಯ ಸ್ಥಿತಿಯಲ್ಲಿವೆ. ಮೂಲಸೌಕರ್ಯಗಳ ಕೊರತೆ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ, ಶಾಲೆಗಳನ್ನು ಕೇವಲ ಉಳಿಸುವುದಲ್ಲದೆ ಅವುಗಳನ್ನು ಸಶಕ್ತವಾಗಿ ಬೆಳೆಸುವ ನಿಟ್ಟಿನಲ್ಲಿ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ ಸಂಘಟನೆಯು ಕೈಗೊಂಡಿರುವ ಕಾರ್ಯಗಳು ನಾಡಿನಾದ್ಯಂತ ಭರವಸೆಯ ಕಿರಣವನ್ನು ಮೂಡಿಸಿವೆ.

ಕನ್ನಡ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಮತ್ತು ಕಲಿಕೆಯನ್ನು ಆನಂದದಾಯಕವಾಗಿಸಲು ಈ ಅಭಿಯಾನವು ಮೊದಲ ಹಂತದಲ್ಲಿ ವಿನೂತನ ಪ್ರಯೋಗವನ್ನು ಮಾಡಿತ್ತು. ರಾಜ್ಯದ ಸುಮಾರು ನೂರರಷ್ಟು ಕನ್ನಡ ಶಾಲೆಗಳಿಗೆ ಗುಣಮಟ್ಟದ ಅಟಿಕೆ ಸಾಮಾಗ್ರಿಗಳನ್ನು ವಿತರಿಸುವ ಮೂಲಕ, ಶಾಲಾ ಪರಿಸರವನ್ನು ಆಟವಾಡುವ ತಾಣವನ್ನಾಗಿ ಪರಿವರ್ತಿಸಿತ್ತು. ಇದು ಶಾಲಾ ದಾಖಲಾತಿಯನ್ನು ಹೆಚ್ಚಿಸುವಲ್ಲಿ ಮತ್ತು ಮಕ್ಕಳಲ್ಲಿ ಶಾಲೆಗೆ ಬರುವ ಆಸಕ್ತಿಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಸಂಘಟನೆಯು ಇದೀಗ ಮತ್ತೊಂದು ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ. ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದು ಶಾಲೆಯನ್ನು ಆಯ್ಕೆ ಮಾಡಿ, ಒಟ್ಟು 31 ಜಿಲ್ಲೆಗಳ 31 ಕನ್ನಡ ಶಾಲೆಗಳಿಗೆ ಹೊಸ ರೂಪ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಶಿಥಿಲಗೊಂಡಿರುವ ಅಥವಾ ಬಣ್ಣ ಕಳೆದುಕೊಂಡಿರುವ ಶಾಲಾ ಕಟ್ಟಡಗಳಿಗೆ ಸುಂದರವಾದ ಬಣ್ಣಗಳನ್ನು ಬಳಿಯುವ ಮೂಲಕ ಶಾಲೆಗೆ ಹೊಸ ಕಳೆ ನೀಡಲಾಗುತ್ತಿದೆ.
ಶಾಲೆಗಳ ಗೋಡೆಗಳ ಮೇಲೆ ಜ್ಞಾನವಿಕಾಸಕ್ಕೆ ಪೂರಕವಾದ ಚಿತ್ರಗಳನ್ನು ಬಿಡಿಸುವ ಮೂಲಕ ಕಲಿಕಾ ಪರಿಸರವನ್ನು ನಿರ್ಮಿಸಲಾಗುತ್ತಿದೆ.
ಇದು ಕೇವಲ ಒಂದು ತಂಡದ ಕೆಲಸವಾಗಿರದೆ, ಸಮುದಾಯವನ್ನು ಒಟ್ಟುಗೂಡಿಸಿ ಕನ್ನಡದ ಅಸ್ಮಿತೆಯನ್ನು ಉಳಿಸುವ ಯಜ್ಞವಾಗಿದೆ.

ಈ ಇಡೀ ಅಭಿಯಾನದ ಬೆನ್ನೆಲುಬಾಗಿ ನಿಂತು ಕಾರ್ಯನಿರ್ವಹಿಸುತ್ತಿರುವವರು ಸಾಮಾಜಿಕ ಕಾರ್ಯಕರ್ತರಾದ ಉನೈಸ್ ಪೆರಾಜೆ. ಇವರ ನೇತೃತ್ವದ ತಂಡವು ಯಾವುದೇ ಸರ್ಕಾರಿ ಅನುದಾನದ ನಿರೀಕ್ಷೆ ಮಾಡದೆ, ಕನ್ನಡಾಭಿಮಾನಿಗಳ ಸಹಕಾರದೊಂದಿಗೆ ಈ ಬದಲಾವಣೆಯ ಹರಿಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂಡದ ಈ ನಿಸ್ವಾರ್ಥ ಸೇವೆ ಮತ್ತು ಸಂಘಟನಾ ಶಕ್ತಿಯು ಯುವ ಸಮುದಾಯಕ್ಕೆ ಮಾದರಿಯಾಗಿದೆ.

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ತಳಹದಿಯಾದ ಸರ್ಕಾರಿ ಶಾಲೆಗಳನ್ನು ಕಟ್ಟಿ ಬೆಳೆಸುತ್ತಿರುವ ಈ ತಂಡದ ಕಾರ್ಯಕ್ಕೆ ನಾಡಿನಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ 31 ಶಾಲೆಗಳ ಮಾದರಿ ಅಭಿವೃದ್ಧಿಯು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಶಾಲೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿ. ಉನೈಸ್ ಪೆರಾಜೆ ಮತ್ತು ಅವರ ಇಡೀ ತಂಡಕ್ಕೆ ನಾಡಿನ ಜನತೆಯ ಪರವಾಗಿ ಹೃತ್ಪೂರ್ವಕ ಶುಭಾಶಯಗಳು.

ಕನ್ನಡ ಬೆಳೆಯಲಿ, ಕನ್ನಡ ಶಾಲೆಗಳು ಮೆರೆಯಲಿ!

Leave a Reply

Discover more from

Subscribe now to keep reading and get access to the full archive.

Continue reading