ಶ್ರೀಧರ ಗೌಡ ಕೆರೆಮೂಲೆ ಶಿಕ್ಷಣ ಕ್ಷೇತ್ರದ ಸಾಧಕನ ಸೇವಾ ನಿವೃತ್ತಿ ಬೀಳ್ಕೊಡುಗೆ ಮತ್ತು ಸಾಧನೆಯ ಮೆಲುಕು

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ, ಎಲಿಮಲೆ ಅಹಮದ್ ಸಾಹುಕಾರ್ ರಿಂದ ಸ್ಥಾಪಿಸಲ್ಪಟ್ಟು ನೂರು ವರ್ಷಗಳನ್ನು ಪೂರೈಸಿರುವ ದೇವಚಳ್ಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾಜಿ ಮುಖ್ಯೋಪಾಧ್ಯಾಯರಾದ ಶ್ರೀಧರ ಗೌಡ ಕೆರೆಮೂಲೆ ಅವರು ಮಾರ್ಚ್ 31, 2026 ರಂದು ಸುದೀರ್ಘ ಕಾಲದ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರಿಗೆ ದೇವಚಳ್ಳ ಶಾಲೆಯಲ್ಲಿ ಊರವರಿಂದ ಬೃಹತ್ ಬೀಳ್ಕೊಡುಗೆ ಸಮಾರಂಭ ನಡೆಯಿತು.

ನಿವೃತ್ತಿ ವೇಳೆಗೆ ಮಂಗಳೂರಿನ ಮುಳ್ಳುಕಾಡು ಆ‌ರ್.ಎಂ.ಎಸ್. ಶಾಲೆಯಲ್ಲಿ ಹಿರಿಯ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರ ವೃತ್ತಿಜೀವನವು ಯುವ ಶಿಕ್ಷಕರಿಗೆ ಮಾದರಿಯಾಗಿದೆ.

ಅಮರಮುಡ್ನೂರು ಗ್ರಾಮದ ಕೆರೆಮೂಲೆಯಲ್ಲಿ ದಿ. ಎಲ್ಮಣ್ಣ ಗೌಡ ಕೆ. ಮತ್ತು ಶ್ರೀಮತಿ ದೇವಮ್ಮ ದಂಪತಿಗಳ ಸುಪುತ್ರನಾಗಿ 1966ರಲ್ಲಿ ಜನಿಸಿದ ಶ್ರೀಧರ ಗೌಡರು, ಗ್ರಾಮೀಣ ಪರಿಸರದಲ್ಲಿ ಬೆಳೆದು ಶಿಕ್ಷಣದ ಮಹತ್ವವನ್ನು ಅರಿತವರು. ಪೈಲಾರು, ಚೊಕ್ಕಾಡಿ ಮತ್ತು ಪಂಜದಲ್ಲಿ ತಮ್ಮ ಆರಂಭಿಕ ಹಾಗೂ ಪದವಿ ಪೂರ್ವ ಶಿಕ್ಷಣ ಮುಗಿಸಿ, ಮಂಗಳೂರಿನಲ್ಲಿ ಶಿಕ್ಷಕ ತರಬೇತಿಯನ್ನು ಪೂರೈಸಿದರು.

1990ರಲ್ಲಿ ಅಲೆಟ್ಟಿ ಗ್ರಾಮದ ಭೂತಕಲ್ಲು ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದ ಇವರು, ನಂತರ ಉಬರಡ್ಕ ಮತ್ತು ನಾಣ್ಯಕಾಜೆ ಶಾಲೆಗಳಲ್ಲಿ ಸೇವೆ ಸಲ್ಲಿಸಿದರು. 1998 ರಿಂದ 2014 ರವರೆಗೆ ದೇವಚಳ್ಳ ಶಾಲೆಯಲ್ಲಿ ಸಹಶಿಕ್ಷಕರಾಗಿ, ಬಳಿಕ ಅಲ್ಲಿಯೇ ಮುಖ್ಯೋಪಾಧ್ಯಾಯರಾಗಿ ಭಡ್ತಿ ಪಡೆದು ಆ ಶಾಲೆಯ ಇತಿಹಾಸದಲ್ಲೇ ಹೊಸ ಅಧ್ಯಾಯವನ್ನು ಬರೆದರು. ಅವರ ಅವಧಿಯಲ್ಲಿ ದೇವಚಳ್ಳ ಶಾಲೆಯು ಕೇವಲ ಒಂದು ಕಟ್ಟಡವಾಗಿ ಉಳಿಯದೆ, ಒಂದು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿ ಮಾರ್ಪಟ್ಟಿತು.
ದೇವಚಳ್ಳ ಶಾಲೆಯ ಸರ್ವತೋಮುಖ ಅಭಿವೃದ್ಧಿ
ಶ್ರೀಧರ ಗೌಡರ ನೇತೃತ್ವದಲ್ಲಿ ದೇವಚಳ್ಳ ಶಾಲೆಯು ಕಂಡ ಬದಲಾವಣೆಗಳು ಅಪಾರ.
ದಾನಿಗಳ ಸಹಕಾರದೊಂದಿಗೆ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಲ್ಯಾಬ್, ಲ್ಯಾಪ್‌ಟಾಪ್ ಹಾಗೂ ಸುಸಜ್ಜಿತ ಗ್ರಂಥಾಲಯದ ಸೌಲಭ್ಯಗಳನ್ನು ಕಲ್ಪಿಸಿದರು.
ಶಾಲಾ ಕಟ್ಟಡದ ವಿಸ್ತರಣೆ, ಸುಸಜ್ಜಿತ ರಂಗಮಂದಿರ, ವಿಶಾಲವಾದ ಸಭಾಭವನ ಮತ್ತು ಆಟದ ಮೈದಾನದ ಅಭಿವೃದ್ಧಿಗೆ ಒತ್ತು ನೀಡಿದರು.
ಗ್ರಾಮೀಣ ಭಾಗದ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಸಿಗುವಂತೆ ಮಾಡಿ, ವಿದ್ಯಾರ್ಥಿಗಳ ಸಂಖ್ಯೆಯನ್ನು 170ಕ್ಕೆ ಏರಿಸುವಲ್ಲಿ ಯಶಸ್ವಿಯಾದರು. ಎಲ್.ಕೆ.ಜಿ ಮತ್ತು ಯು.ಕೆ.ಜಿ ವಿಭಾಗಗಳನ್ನು ಆರಂಭಿಸಿ ಶಾಲೆಯ ಭದ್ರಬುನಾದಿ ಹಾಕಿದರು.
ಸಂಘಟನೆ ಮತ್ತು ಗೌರವಗಳು
ಕೇವಲ ಶಾಲೆಗೆ ಸೀಮಿತವಾಗದೆ, ಶಿಕ್ಷಕರ ಹಿತರಕ್ಷಣೆಗಾಗಿಯೂ ಇವರು ಶ್ರಮಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಸುಳ್ಯ ಘಟಕದಲ್ಲಿ 15 ವರ್ಷಗಳ ಕಾಲ ಪದಾಧಿಕಾರಿಯಾಗಿ (ಅಧ್ಯಕ್ಷ ಹಾಗೂ ಕಾರ್ಯದರ್ಶಿ) ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ 2002-03ರಲ್ಲಿ ‘ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ’.
2024ರಲ್ಲಿ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್‌ನಿಂದ ‘ಸಾಧಕ ಪ್ರಶಸ್ತಿ’. 2025-26ನೇ ಸಾಲಿನ ‘ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

ಸದ್ಯ ನಾರ್ಣಕಜೆಯಲ್ಲಿ ನೆಲೆಸಿರುವ ಇವರ ಪತ್ನಿ ಶ್ರೀಮತಿ ರೂಪವಾಣಿ ಅವರು ಕೂಡ ಅಮರಪಡ್ನೂರು ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಮಕ್ಕಳು ಉನ್ನತ ಶಿಕ್ಷಣ ಪಡೆದು ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಶ್ರೀಧರ ಗೌಡ ಕೆರೆಮೂಲೆಯವರ ನಿವೃತ್ತಿಯು ಶಿಕ್ಷಣ ಕ್ಷೇತ್ರಕ್ಕೆ ಒಂದು ನಷ್ಟವಾದರೂ, ಅವರು ನಿರ್ಮಿಸಿದ ಶೈಕ್ಷಣಿಕ ಆಸ್ತಿ ಮತ್ತು ಅವರು ಬೆಳಗಿದ ಸಾವಿರಾರು ಮಕ್ಕಳ ಭವಿಷ್ಯ ಎಂದೆಂದಿಗೂ ಸ್ಮರಣೀಯ. ಅವರ ನಿವೃತ್ತಜೀವನಕ್ಕೆ ಶುಭಹಾರೈಕೆಗಳು.

ಸಾಕಾರ ನ್ಯೂಸ್

Leave a Reply

Discover more from

Subscribe now to keep reading and get access to the full archive.

Continue reading