ರಾಜ್ಯದ ವಾಹನ ಸವಾರರಿಗೆ “ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಇನ್ನು ಮುಂದೆ ಕಡ್ಡಾಯವಲ್ಲ” ಎಂದು ಹಲವು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಆದರೆ, ಪ್ರಸ್ತುತ ವಿದ್ಯಮಾನಗಳು ಮತ್ತು ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ಮಾಹಿತಿಯನ್ನು ಪರಿಶೀಲಿಸಿದಾಗ ಈ ಸುದ್ದಿಯ ವಾಸ್ತವ ಬೇರೆಯೇ ಇದೆ ಎಂಬುದು ತಿಳಿದುಬರುತ್ತದೆ. ಈ ಕುರಿತಾದ ಸಂಪೂರ್ಣ ವರದಿ ಇಲ್ಲಿದೆ
ಇತ್ತೀಚೆಗೆ ಕೆಲವು ಮಾಧ್ಯಮಗಳು ಮತ್ತು ಜಾಲತಾಣಗಳಲ್ಲಿ, “HSRP ಅಳವಡಿಕೆ ನಿಯಮವು ರಾಜ್ಯದಲ್ಲಿ ವಿಫಲವಾಗಿದೆ, ಹಾಗಾಗಿ ಸರ್ಕಾರವು ಈ ನಿಯಮವನ್ನು ಹಿಂಪಡೆದಿದೆ ಮತ್ತು ಇನ್ನು ಮುಂದೆ ಹಳೆಯ ವಾಹನಗಳಿಗೆ ಈ ನಂಬರ್ ಪ್ಲೇಟ್ ಕಡ್ಡಾಯವಲ್ಲ” ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.
ಈ ಸುದ್ದಿಗಳ ಬಗ್ಗೆ ಕರ್ನಾಟಕ ಸಾರಿಗೆ ಇಲಾಖೆ ಅಧಿಕೃತ ಸ್ಪಷ್ಟನೆ ನೀಡಿದ್ದು, ಇದು ಸಂಪೂರ್ಣ ಸುಳ್ಳು ಸುದ್ದಿ (Fake News) ಎಂದು ಖಚಿತಪಡಿಸಿದೆ. ವಾಸ್ತವಿಕ ಅಂಶಗಳು ಹೀಗಿವೆ
ಏಪ್ರಿಲ್ 1, 2019 ಕ್ಕಿಂತ ಮೊದಲು ನೋಂದಣಿಯಾದ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯ. ಈ ನಿಯಮವನ್ನು ಸರ್ಕಾರ ಎಲ್ಲೂ ರದ್ದುಗೊಳಿಸಿಲ್ಲ.
ಈ ಪ್ರಕ್ರಿಯೆಯ ಕುರಿತು ಸದ್ಯ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯವು ಮುಂದಿನ ಆದೇಶ ನೀಡುವವರೆಗೆ ವಾಹನ ಸವಾರರ ಮೇಲೆ ದಂಡ ವಿಧಿಸುವಂತಿಲ್ಲ ಅಥವಾ ಯಾವುದೇ ತರಾತುರಿಯ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರಕ್ಕೆ ಸೂಚಿಸಿದೆ. ಈ ‘ದಂಡದಿಂದ ಸಿಕ್ಕಿರುವ ತಾತ್ಕಾಲಿಕ ವಿನಾಯಿತಿ’ಯನ್ನೇ ಕೆಲವರು ‘ನಿಯಮವೇ ರದ್ದಾಗಿದೆ’ ಎಂದು ತಪ್ಪಾಗಿ ಅರ್ಥೈಸಿಕೊಂಡು ಸುದ್ದಿ ಪ್ರಕಟಿಸಿದ್ದಾರೆ.
ಸಾರ್ವಜನಿಕರು ತಮ್ಮ ವಾಹನಗಳಿಗೆ HSRP ಅಳವಡಿಸಿಕೊಳ್ಳಲು ಯಾವುದೇ ಅಡ್ಡಿಯಿಲ್ಲ ಹಾಗೂ ಅಳವಡಿಕೆ ಪ್ರಕ್ರಿಯೆಗೆ ನ್ಯಾಯಾಲಯ ಯಾವುದೇ ತಡೆಯಾಜ್ಞೆ ನೀಡಿಲ್ಲ. ಹಾಗಾಗಿ ಇಂತಹ ವದಂತಿಗಳನ್ನು ನಂಬಬಾರದು ಎಂದು ಇಲಾಖೆ ಮನವಿ ಮಾಡಿದೆ.
ಎಚ್‌ಎಸ್‌ಆರ್‌ಪಿ (HSRP) ಏಕೆ ಅಳವಡಿಸಿಕೊಳ್ಳಬೇಕೆಂದರೆ
ಇದರಲ್ಲಿರುವ ಲೇಸರ್-ಕೋಡೆಡ್ ಪಿನ್ ಮತ್ತು ಅಶೋಕ ಚಕ್ರದ 3D ಹೊಲೊಗ್ರಾಮ್‌ನಿಂದಾಗಿ ನಂಬರ್ ಪ್ಲೇಟ್ ಅನ್ನು ನಕಲಿ ಮಾಡಲು ಸಾಧ್ಯವಿಲ್ಲ.
ವಾಹನ ಕಳ್ಳತನ ಮತ್ತು ಕದ್ದ ವಾಹನಗಳನ್ನು ಬಳಸಿಕೊಂಡು ಮಾಡುವ ಇತರ ಅಪರಾಧಗಳನ್ನು ಪತ್ತೆಹಚ್ಚಲು ಹಾಗೂ ತಡೆಯಲು ಇದು ಬಹಳ ಮುಖ್ಯವಾಗಿದೆ.
ಹಲವು ಸುದ್ದಿ ಮಾಧ್ಯಮಗಳು HSRP ನಂಬರ್ ಪ್ಲೇಟ್ ಖಡ್ಡಾಯ ಇಲ್ಲ ಎಂಬ ಸುದ್ದಿ ಪ್ರಕಟಿಸುತ್ತಿರುವುದು ತಪ್ಪು ಮಾಹಿತಿಯಿಂದ ಕೂಡಿದೆ. ವಾಹನ ಸವಾರರು ಇಂತಹ ವದಂತಿಗಳಿಗೆ ಕಿವಿಗೊಡದೆ, ಭವಿಷ್ಯದಲ್ಲಿ ದಂಡ ಕಟ್ಟುವುದನ್ನು ತಪ್ಪಿಸಲು ಹಾಗೂ ತಮ್ಮ ವಾಹನದ ಸುರಕ್ಷತೆಗಾಗಿ ಅಧಿಕೃತ ಪೋರ್ಟಲ್ ಮೂಲಕ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ.
ಸಾಕಾರ ನ್ಯೂಸ್

