ಕಣ್ಣವಂ ತಂಙಳ್ ಮನೆಯ ಮೌಲಿದ್: ಇಷ್ಕ್ ಸುಧೆ ಹರಿಸಿದ ಧನ್ಯ ಕ್ಷಣಗಳು

 

ಮಂಜಂಪಾರೆ: ರಬೀಉಲ್ ಅವ್ವಲ್ ತಿಂಗಳ ಪವಿತ್ರ ದಿನದಂದು ಮಂಜಂಪಾರೆಯಲ್ಲಿ ಆಧ್ಯಾತ್ಮಿಕತೆ ಮತ್ತು ಪೈಗಂಬರ್ ಪ್ರೀತಿಯ ಮಹಾಸಂಗಮಕ್ಕೆ ಸಾಕ್ಷಿಯಾದ ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ನಡೆಯಿತು. ಎಸ್.ವೈ.ಎಸ್. ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಸೈಯದ್ ಜೈನುಲ್ ಆಬಿದೀನ್ ಮುತ್ತುಕೋಯ ತಂಗಳ್ ಕಣ್ಣವಂ ಅವರ ಮನೆಯಲ್ಲಿ ಪ್ರತಿವರ್ಷ ನಡೆಯುವ ಈ ಮೌಲಿದ್ ಮಜ್ಲಿಸ್‌ಗೆ ಈ ಬಾರಿಯೂ ಐದು ಸಾವಿರಕ್ಕೂ ಅಧಿಕ ವಿಶ್ವಾಸಿಗಳು ಹಾಗೂ ಪೈಗಂಬರ್ ಪ್ರೇಮಿಗಳು ಭಾಗವಹಿಸಿದ್ದರು.

ಪ್ರತಿ ಹಿಜರಿ ವರ್ಷದ ರಬೀಉಲ್ ಅವ್ವಲ್ ತಿಂಗಳ ಕೊನೆಯ ಸೋಮವಾರದಂದು ಈ ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ನಡೆಯುವುದು ವಿಶೇಷವಾಗಿದೆ. ವಿವಿಧ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಜನರಿಂದ ಮಂಜಂಪಾರೆಯ ಪರಿಸರವು ಭಕ್ತಿಯ ವಾತಾವರಣದಿಂದ ಕಂಗೊಳಿಸಿತು.

ಮೌಲಿದ್ ಪಾರಾಯಣ, ನಬಿ ಪ್ರಕೀರ್ತನೆಗಳು ಹಾಗೂ ಸ್ವಲಾತ್‌ಗಳೊಂದಿಗೆ ನಡೆದ ಸಭೆಯಲ್ಲಿ ಕೇರಳ ಮತ್ತು ಕರ್ನಾಟಕದ ಆಧ್ಯಾತ್ಮಿಕ ಕ್ಷೇತ್ರದ ಪ್ರಮುಖ ಸಾದಾತ್‌ಗಳು ಹಾಗೂ ಉಲಮಾಗಳು ಭಾಗವಹಿಸಿದ್ದರು. ತಿರುನಬಿ ಮುಹಮ್ಮದ್ (ಸ.ಅ) ಅವರ ಜೀವನ, ಸಂದೇಶ ಮತ್ತು ಮಹತ್ವವನ್ನು ಸ್ಮರಿಸುತ್ತಾ ನಡೆದ ಕಾರ್ಯಕ್ರಮವು ಭಾಗವಹಿಸಿದವರಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸಿತು.

ಜಾತಿ-ಮತ, ಶ್ರೀಮಂತ-ಬಡವ ಎಂಬ ಭೇದವಿಲ್ಲದೆ ಸಮಾಜದ ವಿವಿಧ ವರ್ಗಗಳ ಜನರು ಒಂದೆಡೆ ಸೇರಿ ತಿರುನಬಿಯರ ಮದ್ಹ್ ಹಾಗೂ ಸ್ವಲಾತ್‌ಗಳಲ್ಲಿ ಪಾಲ್ಗೊಂಡರು. ಮುತಅಲ್ಲಿಮ್‌ಗಳು ಸೇರಿದಂತೆ ನಾನಾ ಪ್ರದೇಶಗಳಿಂದ ಆಗಮಿಸಿದ ಪೈಗಂಬರ್ ಪ್ರೇಮಿಗಳ ಉಪಸ್ಥಿತಿಯಿಂದ ಮಜ್ಲಿಸ್ ವಿಶೇಷ ಗಮನ ಸೆಳೆಯಿತು.

ಸೈಯದ್ ಜೈನುಲ್ ಆಬಿದೀನ್ ಮುತ್ತುಕೋಯ ತಂಗಳ್ ನೇತೃತ್ವದಲ್ಲಿ ನಡೆದ ಮೌಲಿದ್ ಮಜ್ಲಿಸ್‌ನಲ್ಲಿ ತಿರುನಬಿಯರ ಜನ್ಮದಿನದ ನೆನಪುಗಳನ್ನು ಮೆಲುಕು ಹಾಕಲಾಯಿತು. ನಬಿ ಪ್ರೇಮ, ಸಹೋದರತೆ ಹಾಗೂ ಆಧ್ಯಾತ್ಮಿಕ ಜಾಗೃತಿಯ ಸಂದೇಶವನ್ನು ಸಾರಿದ ಈ ಮಹಾಸಂಗಮವು ಭಕ್ತರಿಗೆ ಮರೆಯಲಾಗದ ಅನುಭವವಾಯಿತು.

ಮೌಲಿದ್ ಪಾರಾಯಣ ಮತ್ತು ಪ್ರಾರ್ಥನಾ ಕಾರ್ಯಕ್ರಮಗಳ ಬಳಿಕ ಅನ್ನದಾನ ನಡೆಯುವುದರೊಂದಿಗೆ ಕಾರ್ಯಕ್ರಮಗಳು ಸಮಾಪ್ತಿಗೊಂಡವು. ಪ್ರತಿ ವರ್ಷ ರಬೀಉಲ್ ಅವ್ವಲ್ ತಿಂಗಳ ಕೊನೆಯ ಸೋಮವಾರ ನಡೆಯುವ ಈ ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ಮಂಜಂಪಾರೆಯ ಆಧ್ಯಾತ್ಮಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.

Leave a Reply

Discover more from

Subscribe now to keep reading and get access to the full archive.

Continue reading