ಮಂಗಳೂರು: ಸಹೋದರಿಯ ಅಗಲಿಕೆಯ ದುಃಖದಿಂದ ಹೊರಬರಲಾರದೆ, ದುಬೈನಲ್ಲಿ ಉದ್ಯೋಗದಲ್ಲಿದ್ದ ಯುವಕನೊಬ್ಬ ಮಂಗಳೂರಿನ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ವರದಿಯಾಗಿದೆ. ಕೇರಳದ ಕಾಸರಗೋಡು ಮೂಲದ ಅರ್ಜುನ್ ಮಹೇಶ್ ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಇವರು ದುಬೈನ ನಿಸ್ಸಾನ್ ಕಂಪನಿಯಲ್ಲಿ ಆಟೋಮೊಬೈಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಅರ್ಜುನ್ ಅವರ ೧೯ ವರ್ಷದ ಸಹೋದರಿ ಐಜಾ ಮಹೇಶ್ ಅವರು ಸುಮಾರು ಎರಡು ತಿಂಗಳ ಹಿಂದೆಯಷ್ಟೇ ಆತ್ಮಹತ್ಯೆಗೆ ಶರಣಾಗಿದ್ದರು. ನೀಟ್ ಮರು ಪರೀಕ್ಷೆಯ ತೀವ್ರ ಒತ್ತಡದಲ್ಲಿದ್ದ ಐಜಾ, ಕೊಟ್ಟಾಯಂನ ಪಾಲಾದಲ್ಲಿದ್ದ ಹಾಸ್ಟೆಲ್ನಲ್ಲಿ ಸಿದ್ಧತೆ ನಡೆಸುತ್ತಿದ್ದರು. ಮೇ ಮೂರರಂದು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಭರವಸೆಯಲ್ಲಿದ್ದ ಅವರಿಗೆ, ಪರೀಕ್ಷೆಯ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳಿಂದಾಗಿ ಪರೀಕ್ಷೆ ರದ್ದಾಗಿದ್ದು ದೊಡ್ಡ ಆಘಾತ ತಂದಿತ್ತು. ಬಳಿಕ ಮರು ಪರೀಕ್ಷೆಗೆ ಸಿದ್ಧತೆ ನಡೆಸುವಾಗ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಅವರು ಜೂನ್ ಎರಡರಂದು ಹಾಸ್ಟೆಲ್ ಕೊಠಡಿಯಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಯಿತಾದರೂ, ಜೂನ್ ಮೂರರಂದು ಚಿಕಿತ್ಸೆ ಫಲಿಸದೆ ಐಜಾ ಮೃತಪಟ್ಟಿದ್ದರು.
ತಂಗಿಯ ಅಕಾಲಿಕ ಮರಣದಿಂದ ಅರ್ಜುನ್ ತೀವ್ರ ಮಾನಸಿಕ ನೋವು ಹಾಗೂ ಖಿನ್ನತೆಗೆ ಒಳಗಾಗಿದ್ದರು. ಸಹೋದರಿಯ ಅಂತ್ಯಕ್ರಿಯೆಯ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ಅವರು ದುಬೈಗೆ ಮರಳಿ ಕೆಲಸಕ್ಕೆ ಹಾಜರಾಗಿದ್ದರೂ, ಮನಸ್ಸಿನಲ್ಲಿದ್ದ ದುಃಖದಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಕುಟುಂಬದವರಿಗೆ ಯಾವುದೇ ಸುಳಿವು ನೀಡದೆ ಶಾರ್ಜಾದಿಂದ ಹೊರಟು ಭಾನುವಾರ ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರಿನ ಮರವೂರಿನಲ್ಲಿರುವ ಸ್ಕೈ ಗ್ರಾಂಡ್ ಎಂಪೈರ್ ಹೋಟೆಲ್ನಲ್ಲಿ ಮಧ್ಯಾಹ್ನದ ವೇಳೆ ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದರು.
ದೀರ್ಘ ಸಮಯದವರೆಗೆ ಅರ್ಜುನ್ ಕೊಠಡಿಯಿಂದ ಹೊರಬಾರದೇ ಇದ್ದಾಗ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಬಜ್ಪೆ ಪೊಲೀಸರು ಕೊಠಡಿಯ ಬಾಗಿಲು ತೆರೆದು ಪರಿಶೀಲಿಸಿದಾಗ ಅರ್ಜುನ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಡೆತ್ನೋಟ್ ಲಭ್ಯವಾಗಿದ್ದು, ಅದರಲ್ಲಿ ಅಮ್ಮ ನನ್ನನ್ನು ಕ್ಷಮಿಸು ಎಂದು ಬರೆಯಲಾಗಿದೆ. ಜೊತೆಗೆ ತಮ್ಮ ಸಾವಿನ ಮಾಹಿತಿಯನ್ನು ನೀಡಬೇಕಾದ ಕೆಲವು ಆಪ್ತ ಸ್ನೇಹಿತರ ಹೆಸರುಗಳನ್ನು ಅವರು ನಮೂದಿಸಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸಹೋದರಿಯ ಅಗಲಿಕೆಯ ಬೆನ್ನಲ್ಲೇ ಮಗನನ್ನೂ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.






