ಕ್ವಿಟ್ ಟ್ರೆಂಡ್’ ಕಾರ್ಯಾಗಾರ ಹಾಗೂ ಸನ್ಮಾನ ಸಮಾರಂಭ: ಸುಳ್ಯದ ಗೂನಡ್ಕದಲ್ಲಿ ಯಶಸ್ವಿ ಆಯೋಜನೆ

ಗೂನಡ್ಕ: ಸುನ್ನೀ ಯುವಜನ ಸಂಘ (SYS) ಸುಳ್ಯ ಸರ್ಕಲ್ ಆಶ್ರಯದಲ್ಲಿ ಗೂನಡ್ಕ ಮದ್ರಸಾ ಆವರಣದಲ್ಲಿ ‘ಕ್ವಿಟ್ ಟ್ರೆಂಡ್’ (Quit Trend) ಕಾರ್ಯಾಗಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ವಿಚಾರಪೂರ್ಣ ವಿಷಯ ಮಂಡನೆಗಳು ಮತ್ತು ಉದಯೋನ್ಮುಖ ಪ್ರತಿಭೆಗಳ ಗೌರವಾರ್ಪಣೆಯೊಂದಿಗೆ ಕಾರ್ಯಕ್ರಮವು ಸಾರ್ವಜನಿಕರ ಗಮನ ಸೆಳೆಯಿತು.

ಮೊದಲ ಸೆಷನ್‌ನಲ್ಲಿ ಸಂಘಟನಾ ಚಟುವಟಿಕೆಗಳ ಅನಿವಾರ್ಯತೆ ಎಂಬ ವಿಷಯದ ಕುರಿತು ಬಹು ಮುಬಶ್ಶಿರ್ ಅಹ್ಸನಿ ಮುದರ್ರಿಸ್ (ಗಾಂಧಿನಗರ, ಸುಳ್ಯ) ಉಪನ್ಯಾಸ ನೀಡಿದರು. ಮಾನವನ ಯಥಾರ್ಥ ಜೀವನವು ಮರಣಾನಂತರ ಆರಂಭವಾಗಲಿದ್ದು, ಆಧುನಿಕ ಲೌಕಿಕ ವೈಪರೀತ್ಯಗಳ ಕುರಿತು ಪ್ರತಿಯೊಬ್ಬ ಸತ್ಯವಿಶ್ವಾಸಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. ಫಲಿತಾಂಶದ ಚಿಂತೆ ಮಾಡದೆ ಅಲ್ಲಾಹನಲ್ಲಿ ಭರವಸೆ (ತವಕ್ಕುಲ್) ಇಟ್ಟು ಪ್ರತಿಯೊಂದು ಕಾರ್ಯವನ್ನೂ ಆರಾಧನೆಯಾಗಿ ನಿರ್ವಹಿಸಬೇಕು ಹಾಗೂ ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಪ್ರವಾದಿ ಚರ್ಯೆಯಂತೆ ಸಂಘಟನಾ ಕಾರ್ಯಕರ್ತರ ಕ್ರಿಯಾಶೀಲ ಕಾರ್ಯಾಚರಣೆ ಅನಿವಾರ್ಯ ಎಂದು ತಿಳಿಸಿದರು.

ಎರಡನೇ ಸೆಷನ್‌ನಲ್ಲಿ ಕ್ವಿಟ್ ಟ್ರೆಂಡ್ ಎಂಬ ವಿಷಯದ ಕುರಿತು ಬಹು ಅಶ್ರಫ್ ಸಖಾಪಿ ಅಲ್-ಮಳ್ಹರಿ (ಖತೀಬ್, ಗೂನಡ್ಕ) ವಿಷಯ ಮಂಡಿಸಿದರು. ಆತ್ಮಶುದ್ಧಿ ಮತ್ತು ಧರ್ಮ ಪ್ರಚಾರ ಸಂಘಟನೆಯ ಮುಖ್ಯ ಉದ್ದೇಶಗಳಾಗಿದ್ದು, ಕುರ್‌ಆನ್ ಆಧಾರಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಇಸ್ಲಾಂನ ಪ್ರಥಮ ಕಾರ್ಯಾಲಯ ದಾರುಲ್ ಅರ್ಕಮ್ ಮತ್ತು ಹಝ್ರತ್ ಮುಸ್ಅಬ್ ಇಬ್ನ್ ಉಮೈರ್ ಅವರ ತ್ಯಾಗಮಯ ಜೀವನವನ್ನು ಕಾರ್ಯಕರ್ತರು ಮಾದರಿಯಾಗಿಸಬೇಕು. ಸಂಘಟಕರು ಸಹನಶೀಲತೆ ಹಾಗೂ ಮಾದರಿ ಜೀವನಕ್ರಮ ಬೆಳೆಸಿಕೊಳ್ಳಬೇಕು ಮತ್ತು ಸೋಷಿಯಲ್ ಮೀಡಿಯಾ ವೈಪರೀತ್ಯಗಳು ಹಾಗೂ ಅನಿಸ್ಲಾಮಿಕ ಟ್ರೆಂಡ್‌ಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ವೈದ್ಯಕೀಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಗೈದ ಸ್ಥಳೀಯ ಪ್ರತಿಭೆಗಳನ್ನು ಗೌರವಿಸಲಾಯಿತು. ಸುಳ್ಯ ಕೆ.ವಿ.ಜಿ. ಆಸ್ಪತ್ರೆಯ ಫಿಸಿಯೋಥೆರಪಿ ವಿಭಾಗದ ಶ್ರೇಷ್ಠ ಸಾಧನೆಗಾಗಿ ಸಫೀಖಾ ಶಿರಿನ್ ಅವರ ಪರವಾಗಿ ಅವರ ತಂದೆ ಇಬ್ರಾಹಿಂ ಪಾಂಡಿ ಅವರಿಗೆ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಅಂತರರಾಷ್ಟ್ರೀಯ ಮಟ್ಟದ CMA (USA) ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಶ್ಫಾಕ್ ಗೂನಡ್ಕ ಅವರಿಗೆ ಶಾಲ ಹೊದಿಸಿ, ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು. ಹಾಗೆಯೇ ಎಸ್.ಎಸ್.ಎಫ್. ಸಾಹಿತ್ಯೋತ್ಸವದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಅಝೀಝ್ ಶಾಲಾ ಬಳಿ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ SYS ಸುಳ್ಯ ಝೋನ್ ಅಧ್ಯಕ್ಷರಾದ ಬಹು ಲತೀಫ್ ಸಖಾಪಿ, ಸುಳ್ಯ ಸರ್ಕಲ್ ಉಸ್ತುವಾರಿ ಲತೀಫ್ ಅಡ್ಕಾರ್, ಸುಳ್ಯ ಸರ್ಕಲ್ ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ಹಾಗೂ ಸ್ಥಳೀಯ ಯುನಿಟ್ ಪದಾಧಿಕಾರಿಗಳು ಮತ್ತು SYS ಸುಳ್ಯ ಸರ್ಕಲ್ ವ್ಯಾಪ್ತಿಯ ವಿವಿಧ ಯುನಿಟ್‌ಗಳ ನೂರಾರು ಸಕ್ರಿಯ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Discover more from

Subscribe now to keep reading and get access to the full archive.

Continue reading