ಹರಿಯಾಣದ ಫರೀದಾಬಾದ್‌ನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯನ್ನು ತರಗತಿಯಿಂದ ಹೊರಗೆ ಕರೆದು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಸಿಕೋನಾದ ಸರಸ್ವತಿ ಸೀನಿಯರ್ ಸೆಕೆಂಡರಿ ಶಾಲೆಯ ಇಂಗ್ಲಿಷ್ ಶಿಕ್ಷಕಿ ಸಂಧ್ಯಾ (26) ಕೊಲೆಯಾದವರು. ಘಟನೆ ನಡೆದ ಕೆಲವು ಗಂಟೆಗಳಲ್ಲೇ ಆರೋಪಿ, ಕೋಟ್ ಗ್ರಾಮದ ನಿವಾಸಿ ಅಮಿತ್ (21) ಎಂಬಾತನನ್ನು ಬಂಧಿಸಲಾಗಿದೆ. ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
ಕಳೆದ ಎರಡು ವರ್ಷಗಳಿಂದ ಅಮಿತ್ ಸಂಧ್ಯಾ ಅವರನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪತಿಯ ಹೆಸರು ಹೇಳಿ ವಂಚಿಸಿ ಶಾಲೆಯ ಗೇಟ್ ಬಳಿಗೆ ಕರೆಸಿಕೊಂಡ ನಂತರ ಆಕೆಯ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, 20 ಕ್ಕೂ ಹೆಚ್ಚು ಬಾರಿ ಇರಿದಿರುವುದು ಸ್ಪಷ್ಟವಾಗಿದೆ.
ಕೆಲವು ದಿನಗಳ ಹಿಂದೆ ಸಂಧ್ಯಾ, ಅಮಿತ್ ಜೊತೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು. ಇನ್ನುಮುಂದೆಯೂ ಕಿರುಕುಳ ನೀಡಿದರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದರು. ಇದರ ಬೆನ್ನಲ್ಲೇ ಈತ ಶಾಲೆಗೆ ಬಂದು ಸಂಧ್ಯಾ ಅವರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಮವಾರ ಬೆಳಿಗ್ಗೆ 9:30 ರ ಸುಮಾರಿಗೆ ಮುಖವನ್ನು ಬಟ್ಟೆಯಿಂದ ಭಾಗಶಃ ಮುಚ್ಚಿಕೊಂಡು ಅಮಿತ್ ಶಾಲೆಗೆ ಬಂದಿದ್ದ.
ಸಿಬ್ಬಂದಿಯ ಬಳಿ ಸಂಧ್ಯಾ ಅವರನ್ನು ಭೇಟಿಯಾಗಲು ‘ವಿಕ್ಕಿ’ ಬಂದಿದ್ದಾನೆ (ಸಂಧ್ಯಾ ಅವರ ಪತಿ ವಿಕಾಸ್) ಎಂದು ಹೇಳಿ ಶಿಕ್ಷಕಿಯನ್ನು ತರಗತಿಯಿಂದ ಹೊರಗೆ ಕರೆಸಿದ್ದಾನೆ. ತರಗತಿಯಿಂದ ಹೊರಬಂದ ತಕ್ಷಣ ಅಮಿತ್ ಆಕೆಯನ್ನು ಬಲವಂತವಾಗಿ ಹೊರಗಿನ ಕಾರಿಡಾರ್‌ಗೆ ಎಳೆದುಕೊಂಡು ಹೋಗಿ ಚಾಕುವಿನಿಂದ ಸಾಲು ಸಾಲಾಗಿ ಇರಿಯುವುದು ಸಿಸಿಟಿವಿ ದೃಶ್ಯಗಳಲ್ಲಿ ಸ್ಪಷ್ಟವಾಗಿದೆ.
ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಕಣ್ಣೆದುರೇ ಈ ದಾಳಿ ನಡೆದಿದೆ. ಚಾಕು ಬಾಗುವವರೆಗೂ ಶಿಕ್ಷಕಿಗೆ ಇರಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಹಾಯಕ್ಕಾಗಿ ಕಿರುಚಾಡಿದ ಸಂಧ್ಯಾ ಅವರ ಮೇಲೆ ಆತ ಹಲ್ಲೆ ನಡೆಸಿದ್ದಾನೆ. ಕುತ್ತಿಗೆ ಮತ್ತು ಹೊಟ್ಟೆಗೆ ಇರಿದ ಅಮಿತ್, ಸಂಧ್ಯಾ ನೆಲಕ್ಕೆ ಬಿದ್ದರೂ ದಾಳಿಯನ್ನು ಮುಂದುವರಿಸಿದ್ದಾನೆ.
ಸಂಧ್ಯಾ ಅವರ ಚೀರಾಟ ಕೇಳಿ ಶಾಲೆಯ ಪ್ರಿನ್ಸಿಪಾಲ್ ತೇಜ್‌ಪಾಲ್ ಕಾರಿಡಾರ್‌ಗೆ ಓಡಿಬಂದರಾದರೂ, ಆರೋಪಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಸಂಧ್ಯಾ ಮೃತಪಟ್ಟಿದ್ದರು. ‘ಶಾಲೆಯೊಳಗೆ ವಿದ್ಯಾರ್ಥಿಗಳಿದ್ದರು, ಸಂಧ್ಯಾ ತರಗತಿ ತಗೊಳ್ತಿದ್ರು. ಪತಿಯ ಹೆಸರು ಹೇಳಿ ಆಕೆಯನ್ನು ಹೊರಗೆ ಕರೆದ. ತಕ್ಷಣ ಆಕೆಯ ಮೇಲೆ ದಾಳಿ ಮಾಡಿದ. 20 ಕ್ಕೂ ಹೆಚ್ಚು ಬಾರಿ ಇರಿದ. ನಾನು ತಡೆಯಲು ಯತ್ನಿಸಿದಾಗ ನನ್ನ ಮೇಲೆಯೂ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ. ನಾವು ಆಕೆಯನ್ನು ಅಲ್-ಫಲಾ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋದೆವು, ಅಲ್ಲಿ ತಲುಪಿದಾಗ ಸಾವು ಸಂಭವಿಸಿರುವುದು ಖಚಿತವಾಯಿತು’ ಎಂದು ಪ್ರಿನ್ಸಿಪಾಲ್ ಹೇಳಿದ್ದಾರೆ.
13 ಸೆಕೆಂಡುಗಳಲ್ಲಿ ಆರೋಪಿ ಸಂಧ್ಯಾ ಅವರಿಗೆ ಸುಮಾರು 20 ಬಾರಿ ಇರಿದಿದ್ದಾನೆ ಎಂಬುದು ಸಿಸಿಟಿವಿ ದೃಶ್ಯಗಳಿಂದ ಸ್ಪಷ್ಟವಾಗಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಗಾಯಗಳ ಕುರಿತು ಹೆಚ್ಚಿನ ಮಾಹಿತಿ ಸ್ಪಷ್ಟವಾಗಲಿದೆ. ಶಾಲೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದಾಳಿಯ ದೃಶ್ಯಗಳಿಂದ ಆರೋಪಿಯನ್ನು ಗುರುತಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಆಂಟಿ ವೆಹಿಕಲ್ ಥೆಫ್ಟ್ ಸ್ಕ್ವಾಡ್ ಮತ್ತು ಸಿಕೋನಾ ಪೊಲೀಸ್ ಠಾಣೆಯ ತಂಡವು ಎರಡು ಗಂಟೆಗಳ ಒಳಗೆ ಅಮಿತ್‌ನನ್ನು ಪತ್ತೆ ಹಚ್ಚಿದೆ ಎಂದು ಪೊಲೀಸ್ ವಕ್ತಾರ ಯಶಪಾಲ್ ಯಾದವ್ ತಿಳಿಸಿದ್ದಾರೆ. ‘ವಿಚಾರಣೆ ವೇಳೆ, ಸಂಧ್ಯಾ ಕಲಿಯುತ್ತಿದ್ದ/ಪಾಠ ಮಾಡುತ್ತಿದ್ದ ತನ್ನ ಗ್ರಾಮದ ಶಾಲೆಯಲ್ಲಿ ಆಕೆಯ ಪರಿಚಯವಾಗಿತ್ತು ಎಂದು ಆರೋಪಿ ಹೇಳಿದ್ದಾನೆ. ನಂತರ ಆಕೆ ಮಾತನಾಡುವುದನ್ನು ನಿಲ್ಲಿಸಿದ್ದಳು ಮತ್ತು ಹಿಂಬಾಲಿಸಿ ಕಿರುಕುಳ ನೀಡುವುದನ್ನು ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಳು ಎಂದೂ ಆರೋಪಿ ಹೇಳಿದ್ದಾನೆ’ ಎಂದು ಯಾದವ್ ತಿಳಿಸಿದ್ದಾರೆ.
ಕೊಲೆಗೆ ಬಳಸಿದ ಚಾಕುವನ್ನು ಅಮಿತ್ ಸುಮಾರು ಎರಡು ತಿಂಗಳ ಹಿಂದೆ ಖರೀದಿಸಿದ್ದ ಹಾಗೂ ಅಂದಿನಿಂದಲೇ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಮಿತ್ ಮೋಟಾರ್ ಸೈಕಲ್‌ನಲ್ಲಿ ಶಾಲೆಗೆ ಬಂದಿದ್ದ.
ಸಂಧ್ಯಾ ಮತ್ತು ವಿಕಾಸ್ ಅವರದ್ದು ಪ್ರೇಮ ವಿವಾಹವಾಗಿತ್ತು. ಇವರಿಗೆ ಐದು ವರ್ಷದ ಮಗ ಮತ್ತು ಮೂರು ವರ್ಷದ ಮಗಳಿದ್ದಾರೆ. ಸಂಧ್ಯಾ ಅವರ ಪತಿಯ ದೂರಿನ ಮೇರೆಗೆ ಸೆಕ್ಟರ್ 58 ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಭಯಭೀತರಾದ ಮಕ್ಕಳನ್ನು ಶಿಕ್ಷಕರು ತಕ್ಷಣವೇ ತರಗತಿ ಕೊಠಡಿಗಳಿಗೆ ಕರೆದೊಯ್ದರು. ವಿಷಯ ತಿಳಿಯುತ್ತಿದ್ದಂತೆ ಪೋಷಕರೂ ಶಾಲೆಗೆ ಬರಲು ಪ್ರಾರಂಭಿಸಿದರು. ತನಿಖೆಯ ಭಾಗವಾಗಿ ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.









