ಸಾಹಿತ್ಯದ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಉಜಿರೆ; ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ 14ನೇ ಆವೃತ್ತಿ ಸಾಹಿತ್ಯೋತ್ಸವ ಆಗಸ್ಟ್ 1 ಮತ್ತು 2 ರಂದು

ಸಾಹಿತ್ಯ, ಸಂಸ್ಕೃತಿ, ಭಾಷೆ ಹಾಗೂ ಸೃಜನಶೀಲ ಪ್ರತಿಭೆಗಳಿಗೆ ಹೊಸ ಚೈತನ್ಯ ತುಂಬುವ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ 14ನೇ ಆವೃತ್ತಿ ಸಾಹಿತ್ಯೋತ್ಸವ–2026 ಆಗಸ್ಟ್ 1 ಮತ್ತು 2 ರಂದು ಬೆಳ್ತಂಗಡಿ ತಾಲೂಕಿನ ಮಲ್ಜಅ್ ಕ್ಯಾಂಪಸ್, ಉಜಿರೆಯಲ್ಲಿ ವೈಭವದಿಂದ ನಡೆಯಲಿದೆ.

ಜಿಲ್ಲೆಯ ಬೆಳ್ತಂಗಡಿ, ಉಪ್ಪಿನಂಗಡಿ, ಸುಳ್ಯ, ಪುತ್ತೂರು, ವಿಟ್ಲ ಹಾಗೂ ಕಡಬ ಡಿವಿಷನ್‌ಗಳ ವ್ಯಾಪ್ತಿಯ 242 ಯುನಿಟ್‌ಗಳಿಂದ ಸೆಕ್ಟರ್ ಹಾಗೂ ಡಿವಿಷನ್ ಮಟ್ಟದ ಸ್ಪರ್ಧೆಗಳಲ್ಲಿ ಆಯ್ಕೆಯಾದ ಪ್ರತಿಭಾವಂತ ಸ್ಪರ್ಧಿಗಳು ಈ ಸಾಹಿತ್ಯ ಮಹೋತ್ಸವದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ.

ಜೂನಿಯರ್, ಸೀನಿಯರ್, ಜನರಲ್, ಕ್ಯಾಂಪಸ್ ಜೂನಿಯರ್, ಕ್ಯಾಂಪಸ್ ಸೀನಿಯರ್, ಕ್ಯಾಂಪಸ್ ಜನರಲ್ ಹಾಗೂ ಕ್ಯಾಂಪಸ್ ಗರ್ಲ್ಸ್ ವಿಭಾಗಗಳಲ್ಲಿ ಸುಮಾರು 700ರಷ್ಟು ಸ್ಪರ್ಧಿಗಳು ಭಾಗವಹಿಸಲಿದ್ದು, ನೂರಾರು ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಶಿಕ್ಷಕರು, ಮಾರ್ಗದರ್ಶಕರು ಹಾಗೂ ಸಾರ್ವಜನಿಕರು ಈ ಸಾಂಸ್ಕೃತಿಕ ಹಬ್ಬಕ್ಕೆ ಸಾಕ್ಷಿಯಾಗಲಿದ್ದಾರೆ.

ಭಾಷಣ, ಪ್ರಬಂಧ, ಕವನ, ಕಥೆ, ವಾಚನ, ಕ್ವಿಜ್, ನಾತ್, ಬುರ್ದಾ ಸೇರಿದಂತೆ ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಮಹತ್ವದ ವೇದಿಕೆಯಾಗಿ ಈ ಸಾಹಿತ್ಯೋತ್ಸವ ರೂಪುಗೊಂಡಿದೆ.

ಸಾಹಿತ್ಯದ ಮೂಲಕ ಮೌಲ್ಯಬದ್ಧ ಸಮಾಜ ನಿರ್ಮಾಣ, ಓದು-ಬರವಣಿಗೆಯ ಸಂಸ್ಕೃತಿಯ ವೃದ್ಧಿ ಹಾಗೂ ಸೃಜನಶೀಲ ಚಿಂತನೆಗೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ನಡೆಯುವ ಈ ಜಿಲ್ಲಾ ಸಾಹಿತ್ಯೋತ್ಸವವನ್ನು ಜಿಲ್ಲೆಯ ಸಾಹಿತ್ಯಾಭಿಮಾನಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಇಂಜಿನಿಯರ್ ಶಫೀಕ್ ಸಅದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading