







ಸಂಪಾಜೆ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ, ಅಯೋಧ್ಯೆ ರಾಮಮಂದಿರ ಖಜಾನೆ ಲೂಟಿ ಪ್ರಕರಣದ ತನಿಖೆ ಹಾಗೂ ಸಂಪಾಜೆ ಗ್ರಾಮದ ರಸ್ತೆ ಕಳಪೆ ಕಾಮಗಾರಿ ಖಂಡಿಸಿ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಸಂಪಾಜೆ ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು. ಬಳಿಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಪ್ರಾಣಿ ಬೇಟೆಯಾಡಲು ಬಳಸುವ ಮಾರಣಾಂತಿಕ ಪೆಲೆಟ್ ಗನ್ ಹಾಗೂ ಮೊಳೆಗಳಿರುವ ಲಾಠಿ ಬಳಸಿರುವುದನ್ನು ಖಂಡಿಸಿ, ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಕ್ಷಮೆ ಯಾಚಿಸಬೇಕು ಹಾಗೂ ಗೃಹಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಯಿತು.
ಅಯೋಧ್ಯೆ ರಾಮಮಂದಿರದ ಖಜಾನೆ ಕಳವು ಮತ್ತು ನೂರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆದಿರುವ ಪ್ರಕರಣದ ತನಿಖೆಯನ್ನು ಕೇವಲ ಎಸ್‌ಐಟಿ ಮೂಲಕ ನಡೆಸದೆ, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಪಾರದರ್ಶಕವಾಗಿ ನಡೆಸಬೇಕು ಹಾಗೂ ಸಂಪಾಜೆ ಗ್ರಾಮಸಭೆಯಲ್ಲಿ ಉಲ್ಲೇಖಿಸಲ್ಪಟ್ಟ ಗ್ರಾಮದ ವಿವಿಧ ರಸ್ತೆಗಳ ಕಳಪೆ ಕಾಮಗಾರಿಯ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಯಿತು.
ಸಂಪಾಜೆ ವಲಯ ಕಾಂಗ್ರೆಸ್ ಪ್ರಭಾರ ಅಧ್ಯಕ್ಷರಾದ ವಸಂತ ಪೆಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುತ್ತುಮಾರೊಯಮ್ಮ ದೇವಸ್ಥಾನದ ಅಧ್ಯಕ್ಷರಾದ ಜ್ಞಾನಶೀಲನ್ ರಾಜು, ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಮುಖ್ಯಸಂಯೋಜಕರಾದ ಜಾನಿ.ಕೆ.ಪಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಲನಾ ಕೆ.ಆರ್., ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪ್ರಮಿಳಾ ಪೆಲ್ತಡ್ಕ ಹಾಗೂ ಅಬೂಸಾಲಿ ಗೂನಡ್ಕ, ಮಾಜಿ ಗ್ರಾ.ಪಂ. ಸದಸ್ಯರಾದ ಬೆಂಜಮಿನ್ ಡಿಸೋಜ, ದೇವಸ್ಥಾನದ ಆಡಳಿತ ಮೊಕ್ತೇಸರ ಪಳನಿವೇಲು, ಕಾರ್ಮಿಕ ನಾಯಕರಾದ ನಾಗಮತ್ತು ನೆಲ್ಲಿಕುಮೇರಿ, ಫಿಲೋಮಿನಾ ಕ್ರಾಸ್ತ, ಮಹಮ್ಮದ್ ಕುಂಞಿ (ಉಪ್ಪಿ) ಉಪಸ್ಥಿತರಿದ್ದರು.
ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯವರು ಕಾರ್ಯಕ್ರಮ ನಿರೂಪಿಸಿ ನಡೆಸಿಕೊಟ್ಟರು. ಅಂತಿಮವಾಗಿ ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಗಾ ಡಿಸೋಜ ಅವರು ಮನವಿ ಸ್ವೀಕರಿಸಿ ಮಾತನಾಡಿದರು.

