





ಸುಳ್ಯ: “ಮುಲ್ಲಾಗಳ ಎದೆ ಬಗೆದರೆ ಮೂರಕ್ಷರ ಇಲ್ಲ” ಎಂದು ಬಿಜೆಪಿ ನಾಯಕ ಸಿ.ಟಿ. ರವಿ ನೀಡಿರುವ ಹೇಳಿಕೆ ಅತ್ಯಂತ ಕೀಳುಮಟ್ಟದ್ದಾಗಿದ್ದು, ಸಮಾಜದಲ್ಲಿ ಧ್ರುವೀಕರಣ ಉಂಟುಮಾಡುವ ಉದ್ದೇಶಪೂರ್ವಕ ತಂತ್ರವಾಗಿದೆ ಎಂದು ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಿ.ಟಿ. ರವಿ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
“ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಮ್ ಆಜಾದ್ ಅವರಿಂದ ಹಿಡಿದು ಇಂದಿನವರೆಗೆ ಸಿ.ಟಿ. ರವಿ ಅವರು ‘ಮುಲ್ಲಾಗಳು’ ಎಂದು ಉದ್ದೇಶಿಸಿದ ಮುಸಲ್ಮಾನರು ದೇಶದಲ್ಲಿ ನಡೆಸಿದ ಶೈಕ್ಷಣಿಕ ಕ್ರಾಂತಿ ಕಣ್ಣ ಮುಂದಿದೆ. ದೇಶದ ಶೈಕ್ಷಣಿಕ ಅಡಿಪಾಯಕ್ಕೆ ಕೊಡುಗೆ ನೀಡಿದ ಇತಿಹಾಸವಿರುವ ಸಮುದಾಯದ ಬಗ್ಗೆ ಇಂತಹ ಹಗುರ ಮಾತುಗಳನ್ನಾಡುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.
“ಇಲ್ಲಿನ ರಾಷ್ಟ್ರ ಭಾಷೆ ಹಿಂದಿಯನ್ನೂ ಸರಿಯಾಗಿ ಮಾತನಾಡಲಾಗದ ಸಿ.ಟಿ. ರವಿ ಅವರು, ಒಂದು ಇಡೀ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡುತ್ತಿರುವುದರ ಹಿಂದಿನ ಉದ್ದೇಶವೇನು? ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ನಿಂದಿಸುವುದು ಅವರ ಅಜ್ಞಾನವನ್ನು ತೋರಿಸುತ್ತದೆ” ಎಂದು ಶಾಹುಲ್ ಹಮೀದ್ ಪ್ರಶ್ನಿಸಿದ್ದಾರೆ.
“ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವ ಸಿಜೆಪಿ ಮುಸಲ್ಮಾನ ಸಂಘಟನೆ ಅಲ್ಲ ಅಥವಾ ಸಿ.ಟಿ. ರವಿ ಅವರ ಹೇಳಿಕೆಯಂತೆ ಮುಲ್ಲಾಗಳು ಮಾತ್ರ ಹಮ್ಮಿಕೊಂಡ ಪ್ರತಿಭಟನೆಯೂ ಅಲ್ಲ. ಅದು ದೇಶದ ಸಮಸ್ತ ಯುವಜನರ ಬವಿಷ್ಯದ ಕುರಿತಾಗಿನ ಆತಂಕದಿಂದ ಹುಟ್ಟಿಕೊಂಡ ಚಳವಳಿ. ಇಲ್ಲಿನ ವಿದ್ಯಾರ್ಥಿಗಳ ಪ್ರತಿಭಟನೆಯ ಉದ್ದೇಶ ಈಡೇರಿದರೆ ಸಿಟಿ ರವಿಯ ಮಕ್ಕಳೂ ಸೇರಿದಂತೆ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಜನವೇ ಆಗಲಿದೆ.ಹೀಗಿರುವಾಗ ಜನರ ಗಮನ ಬೇರೆಡೆ ಸೆಳೆಯಲು ಅನಗತ್ಯವಾಗಿ ಪ್ರತಿಯೊಂದು ವಿಚಾರದಲ್ಲೂ ಮುಸ್ಲಿಂ ಸಮುದಾಯವನ್ನು ಎಳೆದು ತರುವುದು ಖಂಡನೀಯ” ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.

