ವರ ಒಬ್ಬ, ವಧುಗಳು ಮೂವರು: ಉತ್ತರಪ್ರದೇಶಲ್ಲೊಂದು ವಿಚಿತ್ರ ಮದುವೆ


ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮೂವರು ಇನ್‌ಫ್ಲುಯೆನ್ಸರ್ ಸಹೋದರಿಯರ ವಿವಾಹವು ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಮೂವರು ಯುವತಿಯರು ಒಂದೇ ವೇದಿಕೆಯಲ್ಲಿ ಒಬ್ಬನೇ ಯುವಕನನ್ನು ವಿವಾಹವಾಗಿದ್ದಾರೆ. ಹಾಸನಪುರದ ಪ್ರಸಿದ್ಧ ಚಾಮುಂಡಿ ದೇವಾಲಯದಲ್ಲಿ ಜುಲೈ 15 ರಂದು ಈ ವಿವಾಹ ನಡೆದಿದೆ.
ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿನಿ ಸರೋಜಾ (20), ಆಕೆಯ ಸಹೋದರಿ ಸಾವಿತ್ರಿ (19) ಮತ್ತು ಸಂಬಂಧಿ ಖಡಕ್‌ವಂಶಿ (18) ಇವರೇ ಆ ವಧುಗಳು.ಇವರ ರೀಲ್ಸ್  ವೀಡಿಯೊಗಳ ಕ್ಯಾಮೆರಾಮ್ಯಾನ್ ಆಗಿದ್ದ ಶ್ಯಾಮ್‌ಪುರದ ನಿವಾಸಿ 20 ವರ್ಷದ ವಿಕಾಸ್ (ವಿಕಿ) ಎಂಬ ಯುವಕನೇ ವರ. ಸೋಶಿಯಲ್ ಮೀಡಿಯಾ ರೀಲ್ಸ್‌ಗಳಲ್ಲಿ ಗಂಡನ ಪಾತ್ರದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದ ಯುವಕನೇ ಈ ವಿಕಾಸ್.
ಇದೇ ವಿಷಯ ಈ ಮದುವೆಗೆ ಹೆಚ್ಚಿನ ಗಮನ ಸೆಳೆಯುವಂತೆ ಮಾಡಿದೆ. “ನಾವೆಲ್ಲರೂ 18 ವರ್ಷ ತುಂಬಿದ ವಯಸ್ಕರು. ಈ ಮದುವೆಯಿಂದ ನಮಗೆ ಸಂತೋಷವಿದೆ” ಎಂದು ಮದುವೆಯ ನಂತರ ಯುವತಿಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. “ನಾವು ಸನಾತನ ಧರ್ಮಕ್ಕೆ ಯಾವುದೇ ಅಪಮಾನ ಮಾಡಿಲ್ಲ. ಹಿಂದೆ ರಾಜರಿಗೆ ಹಲವು ಹೆಂಡತಿಯರಿರಲಿಲ್ಲವೇ?” ಎಂದೂ ಅವರು ಪ್ರಶ್ನಿಸಿದ್ದಾರೆ.
ದೇವಾಲಯದಲ್ಲಿ ನಡೆದ ಈ ಮದುವೆ ಸಮಾರಂಭವನ್ನು ಯುವತಿಯರೇ ಮುನ್ನೆಡೆಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆರಂಭದಲ್ಲಿ ಸಂಬಂಧಿಕರು ಸರೋಜಾಳ ಮದುವೆಯನ್ನು ಮಾತ್ರ ನಿಶ್ಚಯಿಸಿದ್ದರು. ಆದರೆ ಮೂವರೂ ಒಟ್ಟಿಗೇ ಜೀವಿಸಬೇಕೆಂಬ ಪಟ್ಟಿಗೆ ಬದ್ಧರಾಗಿದ್ದರು.
ಒಂದೇ ಕುಟುಂಬದ ಮೂವರು ಸಹೋದರರನ್ನು ಹುಡುಕುವ ಪ್ರಯತ್ನ ವಿಫಲವಾದಾಗ, ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದಾಗಿ ಗ್ರಾಮದ ಯುವಕನಾದ ವಿಕಾಸ್‌ನನ್ನೇ ಮೂವರೂ ಮದುವೆಯಾಗಲು ನಿರ್ಧರಿಸಿದರು. ತದನಂತರ ನಾಲ್ವರೂ ದೇವಾಲಯಕ್ಕೆ ತೆರಳಿ ಮದುವೆಯಾದರು.
ಇವರು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿರುವ ಯುವತಿಯರಾಗಿದ್ದಾರೆ. ವಿಕಾಸ್ ಅವರ ರೀಲ್ಸ್‌ಗಳನ್ನು ಚಿತ್ರೀಕರಿಸುವುದಲ್ಲದೆ, ಅದರಲ್ಲಿ ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದನು. ಈ ಮದುವೆಯ ವೀಡಿಯೊ ಮತ್ತು ಫೋಟೋಗಳು ಈಗಾಗಲೇ ವೈರಲ್ ಆಗಿವೆ.
ಈ ಘಟನೆಯು ಕಾನೂನುಬದ್ಧವಾಗಿ ವಯಸ್ಕರ ಸ್ವಯಂಪ್ರೇರಿತ ನಿರ್ಧಾರ ಎಂದು ಯುವತಿಯರು ಹೇಳುತ್ತಿದ್ದರೂ, ಇಂತಹ ಮದುವೆಯು ಸಾಮಾಜಿಕವಾಗಿ ಹುಟ್ಟುಹಾಕಿರುವ ಚರ್ಚೆಗಳು ಇನ್ನೂ ಶಮನವಾಗಿಲ್ಲ. ಒಂದೇ ಕುಟುಂಬದ ಮೂವರು ಹೆಣ್ಣುಮಕ್ಕಳು ಒಬ್ಬನೇ ಹುಡುಗನನ್ನು ಮದುವೆಯಾಗುವುದು ಉತ್ತರ ಪ್ರದೇಶದಲ್ಲೂ ಸಹ ತೀರ ಅಪರೂಪದ ಸಂಗತಿಯಾಗಿದೆ.

Leave a Reply

Discover more from

Subscribe now to keep reading and get access to the full archive.

Continue reading