ಒಂದು ಮನಸಿಗೆ ಮುಟ್ಟಿದ ಅನುಭವ…

✒ಸುಪ್ರೀತ್ ಮೋಂಟಡ್ಕ

ಕೆಲವು ದಿನಗಳ ಹಿಂದೆ ನನಗೆ ಒಂದು ದೂರವಾಣಿ ಕರೆ ಬಂತು. “ಅಣ್ಣ, ನಮಸ್ತೆ, ನಿಮ್ಮ ಜೆಸಿಐ ಸುಳ್ಯ ಪಯಸ್ವಿನಿ ವತಿಯಿಂದ ಅಡ್ಕಾರ್‌ನ ವನಸುಮ ವನವಾಸಿ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಪುಸ್ತಕಗಳನ್ನು ನೀಡಬಹುದೇ? ಒಂದೊಂದು ಪುಸ್ತಕವಾದರೂ ಸಾಕು. ಇಲ್ಲಿ ಇರುವ ಮಕ್ಕಳು ಬೇರೆ ಬೇರೆ ಊರುಗಳಿಂದ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ” ಎಂದು ಅಲ್ಲಿನ ಟ್ರಸ್ಟಿ ಸದಸ್ಯೆ ಶ್ರೀಮತಿ ವೇದ ಶೆಟ್ಟಿ ಅವರು ವಿನಂತಿಸಿದರು. ನಾನು ಪ್ರಯತ್ನ ಮಾಡುತ್ತೇನೆ ಎಂದಷ್ಟೇ ತಿಳಿಸಿದ್ದೆ.
ಟ್ರಸ್ಟ್‌ನ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿನ ಮಕ್ಕಳಿಗೆ ಊಟದಿಂದ ಹಿಡಿದು ಶಿಕ್ಷಣ, ವಸತಿ ಹಾಗೂ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ತಮ್ಮದೇ ಜವಾಬ್ದಾರಿಯಿಂದ ದಾನಿಗಳ ಸಹಕಾರದಿಂದ ಅತ್ಯುತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರೀತಿ, ಕಾಳಜಿಯಿಂದ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.
ಜುಲೈ 18ರಂದು ದೇವರ ಕೃಪೆ ಹಾಗೂ ನಮ್ಮ ಜೆಸಿಐ ಸುಳ್ಯ ಪಯಸ್ವಿನಿ ತಂಡದ ಸಹಕಾರದಿಂದ ವನಸುಮ ವನವಾಸಿ ವಿದ್ಯಾರ್ಥಿ ನಿಲಯಕ್ಕೆ ಸುಮಾರು 7,000ಕ್ಕೂ ಅಧಿಕ ಮೌಲ್ಯದ ಪುಸ್ತಕಗಳನ್ನು ಹಾಗೂ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವಲಯ ಉಪಾಧ್ಯಕ್ಷರಾದ ಜೇಸಿಐ ಸೆನೇಟರ್ ಜಿತೇಶ್ ಪಿರೇರಾರವರು ರೂಪಾಯಿ 5000ವನ್ನು ವನವಾಸಿ ವಿದ್ಯಾರ್ಥಿ ನಿಲಯಕ್ಕೆ ದೇಣಿಗೆಯಾಗಿಯೂ ನೀಡಿದರು. ಇದು ನಿಜಕ್ಕೂ ನಮ್ಮ ಜೀವನದ ಒಂದು ಪುಣ್ಯದ ಕಾರ್ಯವೆಂದು ಭಾವಿಸುತ್ತೇನೆ.
ಮೊನ್ನೆ ನಮ್ಮ ಜೆಸಿಐ ಸುಳ್ಯ ಪಯಸ್ವಿನಿ ತಂಡದೊಂದಿಗೆ ಪುಸ್ತಕ ವಿತರಣೆಗಾಗಿ ವನಸುಮ ವನವಾಸಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ್ದೆವು. ಅಲ್ಲಿಗೆ ತಲುಪಿದ ಕ್ಷಣದಿಂದಲೇ ಮನಸ್ಸು ತುಂಬಿ ಬಂತು. ಅಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಎರಡು ಕೈಗಳನ್ನು ಜೋಡಿಸಿ “ನಮಸ್ತೆ” ಎಂದು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ನಮ್ಮ ಬಾಯಾರಿಕೆಯನ್ನು ನೀಗಿಸಲು ಮೊದಲಿಗೆ ಒಂದು ಲೋಟ ನೀರನ್ನು ನೀಡಿ ತೋರಿದ ಆತಿಥ್ಯ ಮತ್ತು ಅವರಲ್ಲಿನ ಸಂಸ್ಕಾರ ಮನಸ್ಸನ್ನು ತುಂಬಾ ಸ್ಪರ್ಶಿಸಿತು.
ಅಂತೆಯೇ ವಿದ್ಯಾರ್ಥಿಗಳೊಂದಿಗೆ ಮಾತನಾಡಿದಾಗ, ಅವರು ಹಾವೇರಿ, ಮೈಸೂರು, ಗದಗ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ತಿಳಿಯಿತು. ಸುಮಾರು 30 ವಿದ್ಯಾರ್ಥಿಗಳು ಈ ವಿದ್ಯಾರ್ಥಿನಿಲಯದಲ್ಲಿ ವಾಸವಾಗಿದ್ದು, ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ಯೋಗ, ಶ್ಲೋಕ ಹಾಗೂ ಭಾರತೀಯ ಸಂಸ್ಕಾರಾಧಾರಿತ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾ, ಕಲಿಕೆಯಲ್ಲೂ ಹಾಗೂ ಕ್ರೀಡೆ, ಯೋಗ, ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ.
ಅಲ್ಲಿನ ವಾರ್ಡನ್ ದಂಪತಿಗಳು ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿ, ಕಾಳಜಿ ಮತ್ತು ಶಿಸ್ತಿನಿಂದ ನೋಡಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅವರ ವಿನಯ, ಸೇವಾ ಮನೋಭಾವ ಮತ್ತು ಸಮರ್ಪಣೆ ನಮಗೆಲ್ಲರಿಗೂ ಆದರ್ಶವಾಗಿದೆ.
ಸುಂದರ ಪ್ರಕೃತಿ ಮಡಿಲಿನಲ್ಲಿರುವ ಈ ವನಸುಮ ವನವಾಸಿ ವಿದ್ಯಾರ್ಥಿ ನಿಲಯ ನಮ್ಮ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರ್‌ನಲ್ಲಿ ಇರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇಂತಹ ಸಂಸ್ಥೆಗಳು ಸಮಾಜಕ್ಕೆ ಉತ್ತಮ ಸಂಸ್ಕಾರವುಳ್ಳ ನಾಗರಿಕರನ್ನು ರೂಪಿಸುತ್ತಿವೆ.ಸಾಧ್ಯವಾದರೆ ಪ್ರತಿಯೊಬ್ಬರೂ ಒಮ್ಮೆ ಈ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿ, ಮಕ್ಕಳ ಶಿಸ್ತು ಮತ್ತು ಸಂಸ್ಕಾರವನ್ನು ಕಣ್ತುಂಬಿಕೊಳ್ಳಿ. ಇಂತಹ ಅನುಭವಗಳು ನಮ್ಮ ಜೀವನದಲ್ಲಿ ಒಂದು ಸ್ಫೂರ್ತಿಯಾಗುತ್ತದೆ.

 

Leave a Reply

Discover more from

Subscribe now to keep reading and get access to the full archive.

Continue reading