





ಸಾಕಾರ ನ್ಯೂಸ್, ಸುಳ್ಯ: ಕಲ್ಲುಗುಂಡಿ ಕಡೆಪಾಲದಲ್ಲಿ ನಿನ್ನೆ ಮುಸ್ಸಂಜೆ ವೇಳೆಗೆ ನಡೆದಿದೆ ಎನ್ನಲಾದ ಯುವತಿಯೊಬ್ಬರ ಸಾವು ತೀವ್ರ ರಹಸ್ಯ ಹಾಗೂ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೊಂದು ಆತ್ಮಹತ್ಯೆಯಲ್ಲ, ಬದಲಿಗೆ ವ್ಯವಸ್ಥಿತ ಕೊಲೆ ಎಂದು ಮೃತ ಯುವತಿಯ ತವರು ಮನೆಯವರು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಹೆಚ್ಚಿನ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಳೂರಿಗೆ ರವಾನಿಸಲಾಗಿದೆ.
ಮೃತ ಯುವತಿ ಫಾತಿಮತ್ ಇಶಾನಾ ಕುಂಬ್ರದ ಸಾರೆಪುಣಿ ಮೂಲದವರಾಗಿದ್ದು, ದೇವರಕೊಲ್ಲಿ ಕಡೆಯಿಂದ ಕಲ್ಲುಗುಂಡಿ ಕಡೆಪಾಲದಲ್ಲಿ ಬಂದು ನೆಲೆಸಿದ ಮನೆಯೊಂದಕ್ಕೆ ವಿವಾಹವಾಗಿ ಬಂದಿದ್ದರು. ಮೃತರ ಗಂಡ ಅನ್ಸಾರ್ ಬೆಂಗಳೂರಿನಲಿ ಟಾಕ್ಸಿ ಚಾಲಕನಾಗಿ ದುಡಿಯುತ್ತಿದ್ದಾರೆಂದು ತಿಳಿದು ಬಂದಿದೆ. ನಿನ್ನೆ ಸಂಜೆ ಯುವತಿಯು ಸ್ನಾನಗೃಹದ ಶವರ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಡನ ಮನೆಯವರು ಹೇಳಿಕೆ ನೀಡಿದ್ದಾರೆ. ಆದರೆ ಈ ವಾದವನ್ನು ಮೃತಳ ಬಂಧುಗಳು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಗಂಡನ ಮನೆಯವರಿಂದ ತನಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಯುವತಿಯು ತವರಿಗೆ ಆಗಾಗ ಫೋನ್ ಮಾಡಿ ತನ್ನ ನೋವನ್ನು ತೋಡಿಕೊಳ್ಳುತ್ತಿದ್ದರು ಎಂದು ಬಂಧುಗಳು ತಿಳಿಸಿದ್ದಾರೆ. ಅಲ್ಲದೆ, ಸಾಮಾನ್ಯವಾಗಿ ಸ್ನಾನಗೃಹದ ಶವರ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಎಂಬ ತಾರ್ಕಿಕ ಪ್ರಶ್ನೆಯನ್ನು ಯುವತಿಯ ಕಡೆಯವರು ಎತ್ತಿದ್ದಾರೆ. ಇದರೊಂದಿಗೆ ತವರು ಮನೆಯವರು ಬರುವ ಮುನ್ನವೇ ಗಂಡನ ಮನೆಯವರೇ ಮೃತದೇಹವನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ಮಲಗಿಸಿದ್ದರು. ನಂತರ ಆಂಬುಲನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ನಡೆ ಇಡೀ ಘಟನೆಯನ್ನು ಆತ್ಮಹತ್ಯೆಯ ನಾಟಕ ಎಂದು ಬಿಂಬಿಸಲು ಮಾಡಿದ ತಂತ್ರ ಇರಬಹುದು ಎಂದು ಯುವತಿಯ ಬಂಧುಗಳು ತೀವ್ರ ಸಂಶಯ ವ್ಯಕ್ತಪಡಿಸಿದ್ದಾರೆ.
ಸಾವಿನ ಸುತ್ತ ಹೆಣೆದುಕೊಂಡಿರುವ ನಿಗೂಢತೆ ಹಾಗೂ ತವರು ಮನೆಯವರ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಸಾವಿಗೆ ನಿಖರ ಕಾರಣ ಏನೆಂಬುದನ್ನು ಪತ್ತೆಹಚ್ಚಲು ಉನ್ನತ ಮಟ್ಟದ ಹಾಗೂ ವೈಜ್ಞಾನಿಕ ಮರಣೋತ್ತರ ಪರೀಕ್ಷೆಯ ಅಗತ್ಯವಿದೆ. ಈ ಕಾರಣಕ್ಕಾಗಿ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ. ಮಂಗಳೂರಿನ ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಸತ್ಯಾಂಶ ಹೊರಬರಬೇಕಿದೆ.



