






ಮಂಗಳೂರಿನ ಬಂಟ್ವಾಳದಲ್ಲಿ ಯುವತಿಯನ್ನು ಕೊಲೆ ಮಾಡಿದ್ದ ಘಟನೆ ಮಾಸುವ ಮುನ್ನವೇ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆಂಪಲನಾಥ ಗ್ರಾಮದಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ. ಸಾತನೂರು ಹೋಬಳಿಯ ಕುರುಬಳ್ಳಿ ಗ್ರಾಮದ ಪ್ರಾರ್ಥನ ಎಂಬ 16 ವರ್ಷದ ಅಪ್ರಾಪ್ತ ಯುವತಿಯನ್ನು ಆಕೆಯ ಪ್ರಿಯಕರ ಸುರೇಶ್ ಎಂಬಾತ ನಾಡಬಂದೂಕಿನಿಂದ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.
ಕಳೆದ ಒಂದು ವಾರದ ಹಿಂದೆ ಸುರೇಶ್ ಅಪ್ರಾಪ್ತೆಯನ್ನು ಮನೆಯಿಂದ ಕರೆದುಕೊಂಡು ಬಂದಿದ್ದನು. ಕೆಂಪಲನಾಥ ಗ್ರಾಮದ ತೋಟವೊಂದರಲ್ಲಿ ಇವರಿಬ್ಬರು ಇದ್ದಾಗ, ಯುವತಿ ಬೇರೊಬ್ಬನಿಗೆ ಮೊಬೈಲ್‌ನಲ್ಲಿ ಮೆಸೇಜ್ ಮಾಡುತ್ತಿದ್ದಾಳೆ ಎಂಬ ಸಂಶಯ ಸುರೇಶನಿಗೆ ಬಂದಿದೆ. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳ ನಡೆದು, ಆಕ್ರೋಶಗೊಂಡ ಸುರೇಶ್ ಮನೆಯಲ್ಲಿದ್ದ ನಾಡಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಇದರಿಂದಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕೊಲೆಯ ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸುರೇಶ್ ಯುವತಿಯ ಶವವನ್ನು ತೋಟದಲ್ಲೇ ಗುಂಡಿ ತೋಡಿ ಹೂತುಹಾಕಿದ್ದಾನೆ.
ಯುವತಿ ನಾಪತ್ತೆಯಾದ ದೂರಿನ ಅನ್ವಯ ತನಿಖೆ ಆರಂಭಿಸಿದ ಕೋಡಿಹಳ್ಳಿ ಪೊಲೀಸರು, ಆರೋಪಿ ಸುರೇಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತಹಶೀಲ್ದಾರ್ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.





