ಪುತ್ತೂರು: ಇತ್ತೀಚೆಗೆ ಪುತ್ತೂರಿನ ಪುರುಷಕಟ್ಟೆಯಲ್ಲಿ ನಡೆದ ಘಟನೆಯು ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕೇವಲ ಒಂದು ಗೊಂದಲ ಮತ್ತು ತಪ್ಪು ತಿಳುವಳಿಕೆಯಿಂದ ಆರಂಭವಾದ ವಿಚಾರವು ರಾಜಕೀಯ ಬಣ್ಣ ಪಡೆದುಕೊಂಡು ಜಟಿಲಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಕಳವಳ ಮೂಡಿಸಿದೆ.ಘಟನೆಗೆ ಸಂಬಂಧಿಸಿದ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಹೆಣ್ಣು ಮಗುವಿನ ಭಯ ಮತ್ತು ಕಳವಳವು ಸಹಜವಾಗಿಯೇ ಇತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಮಗು ತನ್ನ ಅರಿವಿನ ಮಟ್ಟಿಗೆ ಆ ಕ್ಷಣದ ಪರಿಸ್ಥಿತಿಯನ್ನು ಗ್ರಹಿಸಿ ಹೆದರಿ ಮನೆಯಲ್ಲಿ ತಿಳಿಸಿದೆ. ಇದರ ಆಧಾರದ ಮೇಲೆ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹೆತ್ತವರಾಗಿ ಅವರ ನಡೆ ನಿಯಮಾನುಸಾರವೇ ಇತ್ತು.ಆರಂಭದಲ್ಲೇ ಪೊಲೀಸರು ಎರಡೂ ಕಡೆಯವರನ್ನು ಕರೆಸಿ, ನಿಜವಾಗಿ ನಡೆದಿದ್ದೇನು ಮತ್ತು ಮಗು ಯಾವ ಗೊಂದಲದಿಂದ ಹೆದರಿತ್ತು ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಪರಸ್ಪರ ಮಾತುಕತೆಯ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಬಹುದಿತ್ತು ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಆದರೆ, ಈ ಸಣ್ಣ ಗೊಂದಲದ ಪ್ರಕರಣಕ್ಕೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರವೇಶ ಪಡೆಯುತ್ತಿದ್ದಂತೆ ಪರಿಸ್ಥಿತಿ ಬದಲಾಯಿತು. ಈ ಹಿಂದೆ ಪುತ್ತೂರಿನಲ್ಲಿ ಇದಕ್ಕಿಂತ ಗಂಭೀರ ಘಟನೆಗಳು ನಡೆದಾಗ ಕಾಣಿಸಿಕೊಳ್ಳದಿದ್ದ ಹಲವು ಮುಖಗಳು ಈ ಬಾರಿ ಮುಂಚೂಣಿಗೆ ಬಂದವು. ಘಟನೆಯಲ್ಲಿ ಭಾಗಿಯಾದ ಹುಡುಗರು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕಾಗಿ, ಇದನ್ನೊಂದು ಕೋಮು ರಾಜಕೀಯದ ಅವಕಾಶವನ್ನಾಗಿ ಬಳಸಿಕೊಳ್ಳುವ ಪ್ರಯತ್ನಗಳು ನಡೆದವು ಎಂದು ವರದಿಯಾಗಿದೆ. ಇದರ ಪರಿಣಾಮವಾಗಿ, ಮಾತುಕತೆಯ ಮೂಲಕ ಬಗೆಹರಿಯಬೇಕಿದ್ದ ವಿಷಯವು ಎರಡೂ ಕಡೆಯವರ ಮೇಲೂ ಪ್ರಕರಣ ದಾಖಲಾಗುವ ಮಟ್ಟಿಗೆ ಬೆಳೆಯಿತು.ಪ್ರಕರಣವು ಕೋಮು ರಾಜಕೀಯದ ದಿಕ್ಕಿಗೆ ತಿರುಗುತ್ತಿದ್ದ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರು ತಡವಾಗಿಯಾದರೂ ಪರಿಸ್ಥಿತಿಯನ್ನು ಸಮತೋಲನಗೊಳಿಸಲು ಮುಂದಾದರು. ಎರಡೂ ಕಡೆಯವರನ್ನು ಭೇಟಿ ಮಾಡಿದ ಅವರು, ಘಟನೆಯ ನಿಜವಾದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ಪರಿಸ್ಥಿತಿಯನ್ನು ಶಾಂತಿಯುತವಾಗಿ ನಿಭಾಯಿಸಲು ಶ್ರಮಿಸಿದರು. ಪ್ರಚೋದನಕಾರಿ ವಾತಾವರಣವನ್ನು ತಿಳಿಗೊಳಿಸಲು ಶಾಸಕರು ತೋರಿದ ಈ ನಡೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.ಪ್ರಕರಣದ ಸೌಹಾರ್ದಯುತ ಸುಖಾಂತ್ಯವು, ಸದ್ಯ ಹೆಣ್ಣು ಮಗುವಿನ ಕುಟುಂಬಸ್ಥರು ಯಾವುದೇ ರೀತಿಯ ರಾಜಕೀಯ ಪ್ರಚೋದನೆಗಳಿಗೆ ಬಲಿಯಾಗದೆ, ಪರಿಸ್ಥಿತಿಯನ್ನು ಹತೋಟಿಗೆ ತರಲು ಹೇಗೆ ಸಹಕರಿಸುತ್ತಾರೆ ಎಂಬುದರ ಮೇಲೆಯೇ ಅವಲಂಬಿತವಾಗಿದೆ.