ರೈಲಿಗೆ ಸಿಲುಕಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಹೊರಬಂತು ಶಾಕಿಂಗ್ ಸತ್ಯ! ಪೊಲೀಸರ ವಿಚಾರಣೆಯಲ್ಲಿ ಮಕ್ಕಳ ಕಣ್ಣೀರು…

ಕಳೆದ ಐದು ದಿನಗಳ ಹಿಂದೆ ಘಾಟ್‌ಕೇಸರ್ ರೈಲ್ವೇ ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ರವಿಕುಮಾರ್ ಮತ್ತು ಶಿರೀಷಾ ದಂಪತಿಯ ಪ್ರಕರಣದಲ್ಲಿ ಇದೀಗ ತಲೆತಿರುಗಿಸುವಂತಹ ಟ್ವಿಸ್ಟ್ ಒಂದು ಬೆಳಕಿಗೆ ಬಂದಿದೆ. ದಂಪತಿಯ ಆತ್ಮಹತ್ಯೆಗೆ ಪಕ್ಕದ ಮನೆಯವರೇ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಲವಂತದ ಮತಾಂತರದ ಒತ್ತಡ ಹಾಗೂ ಹೂಡಿಕೆಯ ಹೆಸರಿನಲ್ಲಿ 20 ಲಕ್ಷ ರೂಪಾಯಿ ವಂಚಿಸಿರುವುದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

​ಮೃತ ರವಿಕುಮಾರ್ ಅವರ ಪುತ್ರರಾದ ಸುಶಾಂತ್, ವಿದ್ವಾನ್ಸ್ ಮತ್ತು ಶಿರೀಷಾ ಅವರ ಪೋಷಕರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಬೆಚ್ಚಿಬೀಳಿಸುವ ವಿಷಯಗಳು ಬಹಿರಂಗಗೊಂಡಿವೆ.

​ಮತಾಂತರದ ವಿಚಾರವಾಗಿ ಮನೆಯಲ್ಲಿ ಜಗಳ!

​ಅಕ್ಕಿ ವ್ಯಾಪಾರ ಮಾಡಿಕೊಂಡಿದ್ದ ರವಿಕುಮಾರ್, ಸ್ವಂತ ಮನೆ ಖರೀದಿಸಿ ಇಬ್ಬರು ಗಂಡು ಮಕ್ಕಳೊಂದಿಗೆ ಸುಖವಾಗಿದ್ದರು. ಆದರೆ, ಇವರ ಸಂತೋಷದ ಸಂಸಾರಕ್ಕೆ ಪಕ್ಕದ ಮನೆಯ ದಂಪತಿಗಳು ಮತಾಂತರದ ಹೆಸರಿನಲ್ಲಿ ಬೆಂಕಿ ಇಟ್ಟಿದ್ದಾರೆ. ಪಕ್ಕದ ಮನೆಯ ವೆಂಕಟ್ ಮತ್ತು ಪ್ರಮೀಳಾ ಕುಟುಂಬದೊಂದಿಗೆ ರವಿಕುಮಾರ್ ದಂಪತಿಗೆ ಒಳ್ಳೆಯ ಪರಿಚಯವಿತ್ತು. ಇದನ್ನು ಬಂಡವಾಳ ಮಾಡಿಕೊಂಡ ವೆಂಕಟ್ ಮತ್ತು ಪ್ರಮೀಳಾ, ರವಿಕುಮಾರ್ ಮನೆಗೆ ಬಂದಾಗಲೆಲ್ಲಾ ಮತ ಬದಲಾಯಿಸಿ, ಪ್ರತಿ ಭಾನುವಾರ ಚರ್ಚ್‌ಗೆ ಬರುವಂತೆ ಒತ್ತಡ ಹೇರುತ್ತಿದ್ದರು.

​ಮೃದು ಸ್ವಭಾವದ ರವಿಕುಮಾರ್, ಕೆಲವೊಮ್ಮೆ ವೆಂಕಟ್ ಮಾತನ್ನು ತಳ್ಳಲಾಗದೆ ಪತ್ನಿ ಶಿರೀಷಾ ಜೊತೆ ಪ್ರಾರ್ಥನೆಗೆ ಹೋಗುತ್ತಿದ್ದರು. ಆದರೂ, ಸಂಪೂರ್ಣವಾಗಿ ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ವೆಂಕಟ್ ದಂಪತಿ ತೀವ್ರ ಒತ್ತಡ ಹೇರಿದ್ದಾರೆ. ಆದರೆ, ತನಗೆ ಧರ್ಮ ಬದಲಾಯಿಸುವುದು ಇಷ್ಟವಿಲ್ಲ ಎಂದು ಶಿರೀಷಾ ಖಡಾಖಡಿಯಾಗಿ ಹೇಳಿದ್ದರು. ಆದರೆ ರವಿಕುಮಾರ್ “ಮತ ಬದಲಾಯಿಸೋಣ” ಎಂದು ಪತ್ನಿಗೆ ತಿಳಿಹೇಳಲು ಯತ್ನಿಸುತ್ತಿದ್ದರು. ಈ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಜಗಳವೂ ನಡೆಯುತ್ತಿತ್ತು.

​ಪ್ಲಾನ್ ಬದಲಿಸಿ 20 ಲಕ್ಷ ರೂಪಾಯಿ ಹೂಡಿಕೆ ಮಾಡಿಸಿದರು!

​ದಂಪತಿಗಳು ಮತಾಂತರಕ್ಕೆ ಒಪ್ಪುತ್ತಿಲ್ಲ ಎಂಬುದನ್ನು ಅರಿತ ವೆಂಕಟ್ ಮತ್ತು ಪ್ರಮೀಳಾ ಮತ್ತೊಂದು ಕುತಂತ್ರದ ಯೋಜನೆ ರೂಪಿಸಿದರು. ‘ರೆಡಿಮಿಕ್ಸ್’ (ಕಾಂಕ್ರೀಟ್) ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಭಾರಿ ಲಾಭ ಬರುತ್ತದೆ ಎಂದು ನಂಬಿಸಿದರು. ಧರ್ಮ ಬದಲಾಯಿಸದಿದ್ದರೂ ಪರವಾಗಿಲ್ಲ, ಅವರ ಮಾತಿಗೆ ಗೌರವ ಕೊಟ್ಟು ಕನಿಷ್ಠ ಬಿಸಿನೆಸ್‌ನಲ್ಲಾದರೂ ಹಣ ಹೂಡೋಣ ಎಂದು ರವಿಕುಮಾರ್ ದಂಪತಿ ನಿರ್ಧರಿಸಿದರು.

​ರೆಡಿಮಿಕ್ಸ್ ವಾಹನ ಖರೀದಿಸುವವರೆಗೂ ವೆಂಕಟ್ ದಂಪತಿ ಇವರನ್ನು ಬಿಡಲಿಲ್ಲ. ವಾಹನ ಖರೀದಿಸಿದರೆ ಪ್ರತಿ ತಿಂಗಳು 20 ಸಾವಿರ ರೂಪಾಯಿ ಆದಾಯ ಮನೆಗೆ ಬರುತ್ತದೆ ಎಂದು ನಂಬಿಸಿದ್ದರು. ಇದನ್ನು ನಂಬಿದ ರವಿಕುಮಾರ್, ತನ್ನ ಪತ್ನಿಯ ಚಿನ್ನಾಭರಣಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು 20 ಲಕ್ಷ ರೂಪಾಯಿ ಹಣ ತಂದು ವೆಂಕಟ್ ಮತ್ತು ಪ್ರಮೀಳಾಗೆ ನೀಡಿದ್ದರು. ಆದರೆ, ವೆಂಕಟ್ ದಂಪತಿ ಕೇವಲ ಎರಡು ಮೂರು ತಿಂಗಳು ಮಾತ್ರ ತಲಾ 20 ಸಾವಿರ ರೂಪಾಯಿ ನೀಡಿ, ಆಮೇಲೆ ಹಣ ಕೊಡುವುದನ್ನು ನಿಲ್ಲಿಸಿದರು. ಇದರಿಂದ ಬ್ಯಾಂಕ್‌ನಲ್ಲಿಟ್ಟ ಚಿನ್ನಕ್ಕೆ ಬಡ್ಡಿ ಕಟ್ಟಲಾಗದೆ ರವಿಕುಮಾರ್ ಮತ್ತು ಶಿರೀಷಾ ಪ್ರತಿದಿನ ತೀವ್ರ ಮಾನಸಿಕ ಯಾತನೆ ಅನುಭವಿಸುತ್ತಿದ್ದರು.

​ಮನೆ ಖಾಲಿ ಮಾಡುವಷ್ಟರಲ್ಲೇ ಆತ್ಮಹತ್ಯೆ!

​ಪಕ್ಕದ ಮನೆಯವರ ಕಿರುಕುಳ ಮತ್ತು ಕ್ರೌರ್ಯವನ್ನು ತಡೆಯಲಾರದೆ ರವಿಕುಮಾರ್ ದಂಪತಿ ತಮ್ಮ ಸ್ವಂತ ಮನೆಯನ್ನು ಖಾಲಿ ಮಾಡಿ ಬೇರೆಡೆಗೆ ವಲಸೆ ಹೋಗಲು ನಿರ್ಧರಿಸಿದ್ದರು. ಮನೆಯ ಸಾಮಾನುಗಳನ್ನೆಲ್ಲಾ ಪ್ಯಾಕ್ ಮಾಡಿ ಮೂಟೆ ಕಟ್ಟಿ ಇಟ್ಟಿದ್ದರು. ಆದರೆ, ಆ ದಿನ ಸಾಯಂಕಾಲ (ಜುಲೈ 2 ರಂದು) ಏನಾಯಿತೋ ಗೊತ್ತಿಲ್ಲ, ದಂಪತಿಗಳು ಘಾಟ್‌ಕೇಸರ್ ರೈಲ್ವೇ ನಿಲ್ದಾಣದ ಬಳಿ ಹೋಗಿದ್ದಾರೆ.

​ಪೊಲೀಸ್ ತನಿಖೆಯ ಶಾಕಿಂಗ್ ಅಂಶ: ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರವಿಕುಮಾರ್ ಪಕ್ಕದ ಮನೆಯ ವೆಂಕಟ್ ಜೊತೆ ಫೋನ್‌ನಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಮಾತನಾಡಿದ್ದಾರೆ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆ ಸಂಭಾಷಣೆಯ ನಂತರ ರವಿಕುಮಾರ್ ಮತ್ತು ಶಿರೀಷಾ ದಂಪತಿ ಪರಸ್ಪರ ಅಪ್ಪಿಕೊಂಡು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

​ದಂಪತಿಗಳು ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಪಕ್ಕದ ಮನೆಯಲ್ಲಿದ್ದ ವೆಂಕಟ್ ಮತ್ತು ಪ್ರಮೀಳಾ ತಮ್ಮ ಮನೆಗೆ ಬೀಗ ಹಾಕಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading