ಮಂಡ್ಯದ ಭೀಕರ ಮರ್ಡರ್ ಮಿಸ್ಟ್ರಿ: ಕಾಂಪೌಂಡ್ ದಾಟಿದ ಪ್ರೀತಿ, ಚಿತೆಯಾದ ಬ್ಯೂಟಿ ಪಾರ್ಲರ್ ಆಂಟಿ ಬಾಳು!

ಕ್ಷಣಿಕ ಸುಖದ ಅಕ್ರಮ ಸಂಬಂಧಗಳು ಕೊನೆಗೆ ತಂದಿಡುವ ದುರಂತಕ್ಕೆ ಮಂಡ್ಯದಲ್ಲಿ ನಡೆದ ಈ ಬೆಚ್ಚಿಬೀಳಿಸುವ ಘಟನೆಯೇ ಸಾಕ್ಷಿ! ನಂಬಿ ಹೋದ ಹೆಣ್ಣು ಹೆಣವಾದರೆ, ನರರಾಕ್ಷಸ ಪ್ರಿಯಕರನ ಕಥೆ ಕೆರೆಯಲ್ಲಿ ಅಂತ್ಯವಾಗಿದೆ.

ಬೆಂಗಳೂರಿನ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಾ, ಗಂಡನಿಂದ ದೂರವಾಗಿ ಒಂಟಿಯಾಗಿಯೇ ಲೈಫ್ ಲೀಡ್ ಮಾಡುತ್ತಿದ್ದಳು ನಳಿನಿ. ಆದರೆ ವಿಧಿಯ ಆಟ ಬೇರೆಯೇ ಇತ್ತು. ಕೆಲ ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ ಈಕೆಗೆ ರಾಜಶೇಖರ ಎಂಬಾತನ ಪರಿಚಯವಾಗಿದೆ. ದೇವಸ್ಥಾನದಲ್ಲಿ ಶುರುವಾದ ಈ ಪರಿಚಯ, ಮುಂದೆ ಅಕ್ರಮ ಸಂಬಂಧಕ್ಕೆ ತಿರುಗಿದೆ. ಪಾರ್ಕ್, ಸಿನಿಮಾ, ಮಾಲ್ ಅಂತ ಇಬ್ಬರೂ ಜೊತೆಯಾಗಿ ಸುತ್ತಾಡಿ ಎಂಜಾಯ್ ಮಾಡಿದ್ದಾರೆ.

ಕಳೆದ ಒಂದು ತಿಂಗಳಿಂದ ನಳಿನಿ, “ನನ್ನನ್ನು ಮದುವೆಯಾಗು” ಎಂದು ರಾಜಶೇಖರನಿಗೆ ಪಟ್ಟು ಹಿಡಿದಿದ್ದಾಳೆ. ಆದರೆ ಮದುವೆಗೆ ಒಪ್ಪದ ರಾಜಶೇಖರ ನಿರಾಕರಿಸಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಪ್ರತಿದಿನ ಜಗಳ ತಾರಕಕ್ಕೇರಿದೆ. ಮದುವೆಯಾಗದಿದ್ದರೆ ಈಕೆ ತನ್ನನ್ನು ಬಿಡುವುದಿಲ್ಲ ಎಂದು ಅರಿತ ರಾಜಶೇಖರ, ನಳಿನಿಯನ್ನೇ ಮುಗಿಸಲು ಭೀಕರ ಸ್ಕೆಚ್ ಹಾಕಿದ್ದಾನೆ.

ಹಂತಕ ರಾಜಶೇಖರ ನಳಿನಿಯನ್ನು ನಂಬಿಸಿ ಕರೆದೊಯ್ದು ಭೀಕರವಾಗಿ ಕೊಲೆ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಮಂಡ್ಯದ ಮಳವಳ್ಳಿಯ ಜವನಹಳ್ಳಿಗುಡ್ಡದ ಬಳಿ ತಂದು ಆಕೆಯ ದೇಹವನ್ನು ಸುಟ್ಟು ಕರಕಲಾಗಿಸಿದ್ದಾನೆ. ಆದರೆ, ಪಾಪದ ಕೊಡ ತುಂಬಿದಾಗ ಸತ್ಯ ಅಡಗಿರಲು ಸಾಧ್ಯವೇ?

ಬೆಳಕವಾಡಿ ಟೋಲ್ ಪ್ಲಾಜಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಬೆಚ್ಚಿಬಿದ್ದಿದ್ದಾರೆ! ಈ ನರರಾಕ್ಷಸ ನಳಿನಿಯ ಮೃತದೇಹವನ್ನು ಕಾರಿನ ಮುಂದಿನ ಸೀಟಿನಲ್ಲೇ ಕೂರಿಸಿಕೊಂಡು ಓಡಾಡಿದ್ದ ಎಂಬ ಭಯಾನಕ ಸತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸರು ಸುಳಿವು ಬೆನ್ನತ್ತಿ ವಿಚಾರಣೆಗೆ ಕರೆಯುತ್ತಿದ್ದಂತೆ ರಾಜಶೇಖರನಿಗೆ ಮರಣಭಯ ಶುರುವಾಗಿದೆ. ತನ್ನ ಕಾರನ್ನು ಮಾರಿಬಿಟ್ಟಿದ್ದೇನೆ ಎಂದು ಸುಳ್ಳು ಕಥೆ ಕಟ್ಟಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಖಾಕಿ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಸಿಕ್ಕಿಬೀಳುವ ಭಯದಿಂದ ಜೂನ್ 28 ರಂದು ತನ್ನ ತಾಯಿಯೊಂದಿಗೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ!

Leave a Reply

Discover more from

Subscribe now to keep reading and get access to the full archive.

Continue reading