ಐಟಿ ಕಂಪನಿ ಕ್ಯಾಂಪಸ್‌ನ ಒಳಗಿರುವ ಡೇ-ಕೇರ್‌ನಲ್ಲಿ ಎರಡು ವರ್ಷಕ್ಕಿಂತ ಮೇಲ್ಪಟ್ಟ ಪುಟ್ಟ ಕಂದಮ್ಮಗಳಿಗೆ ಸಿಬ್ಬಂದಿ ಕ್ರೂರವಾಗಿ ದೈಹಿಕ ಹಿಂಸೆ ನೀಡಿದ ಘಟನೆಗೆ ಸಂಬಂಧಿಸಿದಂತೆ ಐದು ಮಂದಿ ಮಹಿಳಾ ಸಿಬ್ಬಂದಿ (ಆಯಾಗಳು) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರಿನ ಎಚ್.ಎ.ಎಲ್ (HAL) ಕ್ಯಾಂಪಸ್‌ನಲ್ಲಿರುವ ಕೇಪ್‌ಜೆಮಿನಿ ಐಟಿ ಕಂಪನಿಯ ಒಳಗಡೆ ಕಾರ್ಯನಿರ್ವಹಿಸುತ್ತಿದ್ದ ಡೇ-ಕೇರ್‌ನಲ್ಲಿ ಪೋಷಕರ ಮನಸ್ಸನ್ನು ಕಲಕುವಂತಹ ಕ್ರೌರ್ಯ ನಡೆದಿದೆ.
ಅಳುವ ಅಥವಾ ಗಲಾಟೆ ಮಾಡುವ ಮಕ್ಕಳನ್ನು ಫ್ರಂಟ್ ಲೋಡಿಂಗ್ ವಾಷಿಂಗ್ ಮೆಷಿನ್‌ನ ಒಳಗಿಟ್ಟು, ಶೌಚಾಲಯಗಳಲ್ಲಿ ಲಾಕ್ ಮಾಡಿ ಹಾಗೂ ಟಾಯ್ಲೆಟ್ ಜೆಟ್ ಸ್ಪ್ರೇ ಮೂಲಕ ಮಕ್ಕಳ ಮುಖ ಮತ್ತು ಬಾಯಿಗೆ ನೇರವಾಗಿ ಜೋರಾಗಿ ನೀರು ಚಿಮುಕಿಸಿ ಇವರು ವಿಕೃತವಾಗಿ ಹಿಂಸಿಸುತ್ತಿದ್ದರು. ಐಟಿ ಪಾರ್ಕ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಕೆಲಸದ ಅವಧಿಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಈ ಡೇ-ಕೇರ್‌ಗೆ ಬಿಡುತ್ತಿದ್ದರು. ಇಲ್ಲಿ ನಡೆದ ದೌರ್ಜನ್ಯದ ದೃಶ್ಯಗಳು ಕಳೆದ ಸೋಮವಾರ ವಾಟ್ಸಾಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಡೇ-ಕೇರ್ ಸೆಂಟರ್ ಒಳಗಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ಈ ಆಘಾತಕಾರಿ ದೃಶ್ಯಗಳು ವ್ಯಾಪಕವಾಗಿ ಹರಡಿದ ಬೆನ್ನಲ್ಲೇ, ಚೈಲ್ಡ್ ಹೆಲ್ಪ್‌ಲೈನ್‌ಗೆ ಮಾಹಿತಿ ತಲುಪಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಕೇವಲ ಎರಡು ಮತ್ತು ಮೂರು ವರ್ಷ ಪ್ರಾಯದ ಪುಟ್ಟ ಮಕ್ಕಳ ಮೇಲೆಯೇ ಆಯಾಗಳು ಇಂತಹ ಮೃಗೀಯ ವರ್ತನೆ ತೋರಿದ್ದಾರೆ, ಅಷ್ಟೇ ಅಲ್ಲದೆ ಈ ವಿಷಯವನ್ನು ಹೊರಗೆ ಹೇಳದಂತೆ ಮಕ್ಕಳಿಗೆ ಬೆದರಿಕೆಯನ್ನೂ ಹಾಕಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬಂದ ದೃಶ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳಾದ ಐದು ಮಂದಿ ಮಹಿಳಾ ಸಿಬ್ಬಂದಿ ವಿರುದ್ಧ ಜುವೆನೈಲ್ ಜಸ್ಟಿಸ್ (ಮಕ್ಕಳ ರಕ್ಷಣೆ ಮತ್ತು ಆರೈಕೆ) ಕಾಯ್ದೆಯಡಿ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ ಎಫ್.ಐ.ಆರ್ (FIR) ರಿಜಿಸ್ಟರ್ ಮಾಡಿದ್ದಾರೆ. ಐಟಿ ನಗರಿಯ ಪ್ರತಿಷ್ಠಿತ ಕಂಪನಿಯೊಂದರ ಒಳಗಡೆಯೇ ನಡೆದಿರುವ ಈ ಘಟನೆಯು ನಗರದ ಪೋಷಕರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.