ತಲೆಮಾರುಗಳನ್ನು ಮುನ್ನಡೆಸಿದ ಆಧ್ಯಾತ್ಮಿಕ ಗುರು ಪಳ್ಳತ್ತೂರು ಅದ್ಲಂಞಿ ಉಸ್ತಾದ್ ಇನ್ನಿಲ್ಲ

ಪಳ್ಳತ್ತೂರು: ಕೇರಳ-ಕರ್ನಾಟಕ ಗಡಿಭಾಗದ ಪಳ್ಳತ್ತೂರು ಮಹಲ್ಲಿನಲ್ಲಿ ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸೇವೆ ಸಲ್ಲಿಸಿದ ಪ್ರಸಿದ್ಧ ವಿದ್ವಾಂಸ, ಉಲಮಾ ಶಿರೋಮಣಿ ಪಳ್ಳತ್ತೂರು ಅಲ್‌ಹಾಜ್ ಅಬ್ದುಲ್ಲ ಕುಂಞಿ ಮುಸ್ಲಿಯಾರ್ (76) (ಅದ್ಲಂಞಿ ಉಸ್ತಾದ್) ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಅವರ ನಿಧನವು ಮುಸ್ಲಿಂ ಸಮುದಾಯ ಹಾಗೂ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

ಮೂಲತಃ ಈಶ್ವರಮಂಗಲದವರಾದ ಉಸ್ತಾದ್ ಅವರು ತಮ್ಮ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡಿದ್ದು ಪಳ್ಳತ್ತೂರನ್ನು. ಸೌಲಭ್ಯಗಳಿಲ್ಲದ, ಬಡತನವಿದ್ದ ಆ ಕಾಲದಲ್ಲಿ ಪಳ್ಳತ್ತೂರು ಬದರ್ ಮಸೀದಿ ಮತ್ತು ಮದ್ರಸದ ಜವಾಬ್ದಾರಿ ವಹಿಸಿಕೊಂಡ ಅವರು, ಕಠಿಣ ಪರಿಸ್ಥಿತಿಗಳಲ್ಲೂ ನಿಸ್ವಾರ್ಥವಾಗಿ ಜ್ಞಾನದ ಬೆಳಕನ್ನು ಹಂಚಿದರು. ಕೇವಲ ಬೋಧನೆಗಷ್ಟೇ ಸೀಮಿತವಾಗದೆ, ಇಡೀ ಪ್ರದೇಶಕ್ಕೆ ಆಧ್ಯಾತ್ಮಿಕ ಚೈತನ್ಯ ತುಂಬಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಅವರು ಕಾಸರಗೋಡು ಖಾಝಿಯಾಗಿದ್ದ ಮರ್ಹೂಂ ಅವರಾನ್‌ಕುಟ್ಟಿ ಮುಸ್ಲಿಯಾರ್, ಮರ್ಹೂಂ ಸರ್ಕಾವಿ ಉಸ್ತಾದ್, ಮರ್ಹೂಂ ಪಯ್ಯಕ್ಕಿ ಉಸ್ತಾದ್ ಹಾಗೂ ಮರ್ಹೂಂ ತೆಕ್ಕನ್ ಅಹ್ಮದ್ ಅಶ್ರಫ್ ಮುಸ್ಲಿಯಾರ್ ಸೇರಿದಂತೆ ಹಲವು ಶ್ರೇಷ್ಠ ವಿದ್ವಾಂಸರ ಕೈಕೆಳಗೆ ಇಸ್ಲಾಮಿಕ್ ಜ್ಞಾನಾರ್ಜನೆ ಮಾಡಿದ್ದರು. ಅಲ್ಲದೆ, ಆದೂರು ಯಹ್ಯಲ್ ಅಹ್ದಲ್ ತಂಙಳ್ ಸೇರಿದಂತೆ ಪ್ರಮುಖ ಆಧ್ಯಾತ್ಮಿಕ ನಾಯಕರೊಂದಿಗೆ ಆಪ್ತ ಬಾಂಧವ್ಯ ಹೊಂದಿದ್ದರು.

ದೇಲಂಪಾಡಿ ಮತ್ತು ಈಶ್ವರಮಂಗಲ ಪಂಚಾಯತ್ ವ್ಯಾಪ್ತಿಯ ಜನರಿಗೆ ಅವರು ಕೇವಲ ಶಿಕ್ಷಕರಾಗಿರಲಿಲ್ಲ, ಬದಲಿಗೆ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಮಾರ್ಗದರ್ಶಕರಾಗಿದ್ದರು. ದೈಹಿಕ, ಮಾನಸಿಕ ಸಂಕಷ್ಟಗಳೊಂದಿಗೆ ಬರುತ್ತಿದ್ದ ಜನರಿಗೆ ಪ್ರಾರ್ಥನೆ ಹಾಗೂ ಸಾಂತ್ವನದ ಮೂಲಕ ನೆಮ್ಮದಿ ನೀಡುತ್ತಿದ್ದರು. ಕಠಿಣ ವಿಷಯಗಳನ್ನು ಸರಳವಾಗಿ ಬೋಧಿಸುತ್ತಿದ್ದ ಅವರ ಶೈಲಿ ವಿಶಿಷ್ಟವಾಗಿತ್ತು.ಮರ್ಹೂಂ ಅಬ್ದುಲ್ಲ ಕುಂಞಿ ಮುಸ್ಲಿಯಾರ್ ಅವರು ಐದು ಗಂಡು ಮಕ್ಕಳು ಮತ್ತು ಐದು ಹೆಣ್ಣು ಮಕ್ಕಳನ್ನು ಒಳಗೊಂಡ ದೊಡ್ಡ ಕುಟುಂಬವನ್ನು ಅಗಲಿದ್ದಾರೆ. ತಮ್ಮ ಇಡೀ ಕುಟುಂಬವನ್ನು ಧಾರ್ಮಿಕ ಮತ್ತು ಸದಾಚಾರದ ಹಾದಿಯಲ್ಲಿ ಮುನ್ನಡೆಸಿದ್ದರು.

ಕೊನೆಯ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ತಮ್ಮನ್ನು ಹುಡುಕಿ ಬರುತ್ತಿದ್ದ ಜನರಿಗೆ ಧೈರ್ಯ ಹಾಗೂ ಪ್ರಾರ್ಥನೆಯ ಮಾತುಗಳನ್ನು ಹೇಳುತ್ತಿದ್ದರು.ಮೂರು ತಲೆಮಾರುಗಳಿಗೆ ಜ್ಞಾನದ ದೀಪ ಹಚ್ಚಿದ ಈ ಮಹಾನ್ ಚೇತನಕ್ಕೆ ಸರ್ವಶಕ್ತ ಮಘ್ಫಿರತ್ ಮತ್ತು ಮರ್ಹಮತ್ ನೀಡಿ, ಜನ್ನತುಲ್ ಫಿರ್ದೌಸ್‌ನಲ್ಲಿ ಉನ್ನತ ಸ್ಥಾನ ಕರುಣಿಸಲಿ ಎಂದು ಸಾಕಾರ ನ್ಯೂಸ್ ಬಳಗ ಪ್ರಾರ್ಥಿಸುತ್ತದೆ.

Leave a Reply

Discover more from

Subscribe now to keep reading and get access to the full archive.

Continue reading