ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯಿಂದ ಪಬ್, ಬ್ರಿವರೀಸ್, ಬಾರ್, ಕ್ಲಬ್ ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಕೇಂದ್ರಗಳಲ್ಲಿ ವಯಸ್ಸಿನ ಪರಿಶೀಲನೆ ಕೈಗೊಳ್ಳುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸೂಚನಾ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ವ್ಯಾಪ್ತಿಗೊಳಪಟ್ಟ ಬಾರ್ ಮತ್ತು ಮದ್ಯದ ಅಂಗಡಿಗಳ ಮಾಲಕರನ್ನು ಕರೆಸಿ ಮಾಹಿತಿ ನೀಡುವ ಸಭೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಜೂನ್ 06 ರಂದು ನಡೆಯಿತು.
ಸಭೆಯಲ್ಲಿ ಸುಳ್ಯ ತಾಲೂಕು ವ್ಯಾಪ್ತಿಯ ಮದ್ಯದಂಗಡಿಗಳು ಮತ್ತು ಬಾರ್ ಮಾಲಕರು ಭಾಗವಹಿಸಿದ್ದರು.ಪೊಲೀಸ್ ಠಾಣಾ ಉಪನಿರೀಕ್ಷಕರಾದ ಸಂತೋಷ್ ಬಿ ಪಿ ರವರು ಅಧ್ಯಕ್ಷತೆಯನ್ನು ವಹಿಸಿ ಸರಕಾರದಿಂದ ಬಂದಿರುವ ಆದೇಶ ಸೂಚನೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಅವರು ಸಮಾಜದಲ್ಲಿ ಯುವಜನತೆಯ ಮದ್ಯಪಾನ ಮತ್ತು ತಂಬಾಕು ವ್ಯಸನ ಇತ್ತೀಚೆಗೆ ವ್ಯಾಪಕವಾಗಿ ಹರಡುತ್ತಿದೆ.
ಮದ್ಯಪಾನದ ಹವ್ಯಾಸದ ಚಟವನ್ನು ಪ್ರಾರಂಭಿಸುವ ಸರಾಸರಿ ವಯಸ್ಸು 02 ವರ್ಷಗಳಿಂಬ ಆತಂಕಕಾರಿ ಅಂಶವನ್ನೂ ಸಹ ಇಲಾಖೆಯಿಂದ ಬಂದಿರುವ ಸೂಚನೆಯಲ್ಲಿ ಬಹಿರಂಗಪಡಿಸಿದೆ. ಅಷ್ಟೇ ಅಲ್ಲದೇ ಕೆಲವು ಅಪ್ರಾಪ್ತ ವಯಸ್ಕರು ಎಂಟು ವರ್ಷದ ವಯಸ್ಸಿನಲ್ಲೇ ಈ ಚಟಕ್ಕೆ ಬೀಳುತ್ತಿರುವ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದ್ದು, ಇಂತಹ ಬೆಳವಣಿಗೆಯು ರಾಜ್ಯದ ಹಾಗೂ ದೇಶದ ಮುಂದಿನ ಪೀಳಿಗೆಯ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಎಚ್ಚರಿಕೆಯ ಘಂಟೆಯಾಗಿದೆ.ಈ ಮಹತ್ವದ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯದ ಗೃಹ ಸಚಿವಾಲಯದಿಂದ ಕರ್ನಾಟಕ ರಾಜ್ಯದ ಯುವಜನತೆಯ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಅಪ್ರಾಪ್ತರು ಇಂತಹ ವ್ಯಸನಗಳಿಗೆ ಬಲಿಯಾಗದಂತೆ ಮಕ್ಕಳ ಮತ್ತು ಯುವಜನಾಂಗದ ಆರೋಗ್ಯ, ಸುರಕ್ಷತೆ ಹಿತದೃಷ್ಟಿಯಿಂದ ಮತ್ತು ಅವರ ಉಜ್ವಲ ಭವಿಷ್ಯಕ್ಕೆ ಯಾವುದೇ ರೀತಿಯ ಅಪಾಯವಾಗದಂತೆ ಕ್ರಮವಹಿಸುವ ದೃಷ್ಟಿಯಿಂದ ಈ ಸಂಬಂಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ, ಎಲ್ಲಾ ಘಟಕಾಧಿಕಾರಿಗಳು ಕರ್ನಾಟಕ ಪೊಲೀಸ್ ಕಾಯ್ದೆ, 1963 ರ ಸೆಕ್ಷನ್ 31, 80 ಮತ್ತು 81 ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುವ ಮೂಲಕ ರಾಜ್ಯದ ಎಲ್ಲಾ ಪಬ್, ಬ್ರಿವರೀಸ್, ಬಾರ್, ಕ್ಲಬ್, ಲಾಂಜ್, ರೆಸ್ಟೋರೆಂಟ್ ಮತ್ತು ತಮ್ಮ ವ್ಯಾಪ್ತಿಯಲ್ಲಿ ಮದ್ಯ ಪೂರೈಸುವ/ಮಾರಾಟ ಮಾಡುವ ರಾವುದೇ ಇತರ ಸಂಸ್ಥೆಗಳಿಗೆ ತಕ್ಷಣವೇ ನೋಟಿಸ್ ಗಳನ್ನು ಜಾರಿ ಮಾಡುವಂತೆ ಸೂಚಿಸಲಾಗಿದೆ.ಆದ್ದರಿಂದ ಯಾವುದೇ ಕಾರಣಕ್ಕೂ 21 ವರ್ಷದ ಒಳಗಿನ ಮಕ್ಕಳಿಗೆ ಮದ್ಯಪಾನ ಖರೀದಿಸಲು ಅವಕಾಶ ನೀಡಬಾರದೆಂದು ಸೂಚನೆಯನ್ನು ನೀಡಿದರು.

ಗುರುತಿನ ಚೀಟಿ ರಹಿತ ಪ್ರವೇಶ ನಿಷಿದ್ಧ. ಸಂಸ್ಥೆಗಳು ಅಪ್ರಾಪ್ತ ವಯಸ್ಕರಿಗೆ ಮದ್ಯದ ಪ್ರವೇಶ ಮತ್ತು ಸೇವೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದು. ಸರ್ಕಾರದಿಂದ ವಿತರಿಸಿರುವ ವಯಸ್ಸಿನ ಪುರಾವೆ/ಗುರುತಿನ ಚೀಟಿ ಇಲ್ಲದೇ ಯಾವುದೇ ವ್ಯಕ್ತಿಯನ್ನು ಮದ್ಯ ಮಾರಾಟ ಮಾಡುವ ಸಂಸ್ಥೆ/ಜಾಗಗಳಿಗೆ ಪ್ರವೇಶಿಸಲು ಅನುಮತಿಸುವುದನ್ನು ನಿರಾಕರಿಸುವುದು. ಮದ್ಯಪಾನ ಮಾರಾಟ/ಪೂರೈಕೆ ಮಾಡುವ ಸಂಸ್ಥೆಗಳು/ಜಾಗಗಳು ಪ್ರವೇಶವನ್ನು ಅನುಮತಿಸುವ ಮೊದಲು ಮತ್ತು ಮದ್ಯವನ್ನು ಪೂರೈಸುವ ಮೊದಲು ಸರ್ಕಾರ ನೀಡಿದ ಗುರುತಿನ ಚೀಟಿಯನ್ನು (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್, ಚಾಲನಾ ಪರವಾನಗಿ ಅಥವಾ ಪ್ಯಾನ್ ಕಾರ್ಡ್) ಪರಿಶೀಲಿಸತಕ್ಕದ್ದು. ಗುರುತಿನ ಚೀಟಿಗಳ ಪ್ರತಿಗಳನ್ನು ಮುಂದಿನ ಪರಿಶೀಲನೆಗಾಗಿ ಇರಿಸಿಕೊಳ್ಳುವುದು ಸೂಕ್ತ. ಅಪ್ರಾಪ್ತ ವಯಸ್ಕರಿಗೆ ಮದ್ಯವನ್ನು ಪೂರೈಸುವುದು ಅಥವಾ ಅಪ್ರಾಪ್ತ ವಯಸ್ಕರಿಗೆ ಮದ್ಯವನ್ನು ಪೂರೈಸುವುದನ್ನು ಬೆಂಬಲಿಸುವುದು ಕಂಡುಬಂದಲ್ಲಿ, ಅನ್ವಯವಾಗುವ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸೂಚನೆಗಳನ್ನು ಪಾಲಿಸದಿದ್ದಲ್ಲಿ ಅಂತಹ ಮದ್ಯದ ಅಂಗಡಿಗಳಿಗೆ ಮದ್ಯದ ಪರವಾನಗಿಯನ್ನು ಅಮಾನತುಗೊಳಿಸುವುದು/ರದ್ದುಗೊಳಿಸುವುದು. ಮಾಲೀಕರು, ವ್ಯವಸ್ಥಾಪಕರು ಮತ್ತು ಪರವಾನಗಿ ಹೊಂದಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು. ಮಾಲೀಕರು, ವ್ಯವಸ್ಥಾಪಕ ಆವರಣದಲ್ಲಿ ಸಂಖ್ಯೆ ನಿಗದಿಪಡಿಸುವಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳ ಅನ್ವಯ ಕರ್ನಾಟಕ ಅಬಕಾರಿ ಕಾಯ್ದೆ, 1963 ರ ಸೆಕ್ಷನ್ 36 (ಪರವಾನಗಿ ಷರತ್ತುಗಳು), ಸೆಕ್ಷನ್ 36 (ಪರವಾನಗಿ ಷರತ್ತುಗಳ ಉಲ್ಲಂಘನೆಗಾಗಿ ಪರವಾನಗಿಯನ್ನು ಅಮಾನತುಗೊಳಿಸುವುದು ಅಥವಾ ರದ್ದುಗೊಳಿಸುವುದು) ಮತ್ತು ಸೆಕ್ಷನ್ 38 (ಉಲ್ಲಂಘನೆಯ ಪರಿಣಾಮಗಳು) ನಿಬಂಧನೆಗಳ ಅಡಿಯಲ್ಲಿ ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಾರ್ ಮತ್ತು ಮದ್ಯದ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳು ಎಲ್ಲಾ ಸಮಯದಲ್ಲೂ ಕಾರ್ಯನಿರ್ವಹಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ತನಿಖೆಯ ಸಮಯದಲ್ಲಿ ಪರಿಶೀಲಿಸಲು ಅನುವಾಗುವಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಒಂದು ತಿಂಗಳ ಕಾಲ ಸಂರಕ್ಷಿಸಬೇಕು.ಪೊಲೀಸ್ ಘಟಕಗಳು ಶಿಕ್ಷಣ ಸಂಸ್ಥೆಗಳು, ಪೋಷಕರು, ನಿವಾಸಿ ಕಲ್ಯಾಣ ಸಂಘಗಳು (RWA) ಮತ್ತು ನಾಗರಿಕ ಗುಂಪುಗಳೊಂದಿಗೆ ಸಮನ್ವಯ ಸಾಧಿಸಿಕೊಂಡು, ಮದ್ಯ ಮಾರಾಟ ಮಾಡುವ ಸಂಸ್ಥೆಗಳ ನಿಯಮಿತ ಕಣ್ಣಾವಲು ಮತ್ತು ತಪಾಸಣೆ ನಡೆಸುವಂತಹ ಕ್ರಮಗಳ ಮೂಲಕ ಅಪ್ರಾಪ್ತ ವಯಸ್ಕರು ಮದ್ಯ, ತಂಬಾಕು ಮತ್ತು ಮಾದಕ ದ್ರವ್ಯಗಳಿಂದ ಚಟಗಳಿಗೆ ಬಲಿಯಾಗುವುದನ್ನು ತಡೆಯುವುದು ಆದೇಶದಲ್ಲಿ ಉಲ್ಲೇಖವಾಗಿದೆ ಎಂದು ಮಾಹಿತಿ ನೀಡಿದರು.







