ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದಲ್ಲಿ ಅತ್ಯಂತ ದಾರುಣ ಹಾಗೂ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ತಾಯಿಯ ಮಡಿಲಿನಲ್ಲಿ ಆಟವಾಡುತ್ತಿದ್ದ ಕಂದಮ್ಮನ ಮೇಲೆ ಅಚಾನಕ್ಕಾಗಿ ತೆಂಗಿನಕಾಯಿ ಬಿದ್ದ ಪರಿಣಾಮ, ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.
ಬ್ರಹ್ಮಾವರ ತಾಲೂಕಿನ ಚಾಂತಾರು ಹೇರಂಜಾಲು ಗ್ರಾಮದ ನಿವಾಸಿಗಳಾದ ಪ್ರಶಾಂತ್ ಮತ್ತು ಸುಚಿತ್ರಾ ದಂಪತಿಯ ಒಂದುವರೆ ವರ್ಷದ ಗಂಡು ಮಗು ಈ ದುರ್ಘಟನೆಗೆ ಬಲಿಯಾದ ದುರ್ದೈವಿ. ಸುಚಿತ್ರಾ ಅವರು ತಮ್ಮ ಆರು ವರ್ಷದ ಹಿರಿಯ ಮಗಳನ್ನು ಶಾಲೆಗೆ ಕಳುಹಿಸುತ್ತಿದ್ದ ಸಂದರ್ಭದಲ್ಲಿ, ಒಂದುವರೆ ವರ್ಷದ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡಿದ್ದರು.
ಈ ವೇಳೆ ತಾಯಿಯ ಕಂಕುಳಲ್ಲಿದ್ದ ಮಗುವಿನ ತಲೆಯ ಮೇಲೆ ತೆಂಗಿನಮರದಿಂದ ಅಚಾನಕ್ಕಾಗಿ ತೆಂಗಿನಕಾಯಿಯೊಂದು ಉದುರಿ ಬಿದ್ದಿದೆ. ತೆಂಗಿನಕಾಯಿ ಬಿದ್ದ ರಭಸಕ್ಕೆ ಮಗುವಿನ ತಲೆಗೆ ಗಂಭೀರ ಗಾಯಗಳಾಗಿದ್ದವು.ಮಗುವಿಗೆ ಪೆಟ್ಟಾಗುತ್ತಿದ್ದಂತೆ ಗಾಬರಿಗೊಂಡ ಕುಟುಂಬಸ್ಥರು ಮತ್ತು ಸ್ಥಳೀಯರು ತಕ್ಷಣವೇ ಮಗುವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದರು. ಮಗುವಿನ ಸ್ಥಿತಿ ಅತ್ಯಂತ ಗಂಭೀರವಾಗಿದ್ದರಿಂದ ವೈದ್ಯರು ತುರ್ತು ಶಸ್ತ್ರಚಿಕಿತ್ಸೆಯನ್ನು ನಡೆಸಿದರಾದರೂ, ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯದ ಕಾರಣದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಪುಟಾಣಿ ಕಂದಮ್ಮ ಕೊನೆಯುಸಿರೆಳೆದಿದೆ.




