ಮನೆಯಿಂದ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಮ್ಮಘಟ್ಟದ ಕೆರೆಯಲ್ಲಿ ಜ್ಯೋತಿ (೨೯) ಎಂಬುವವರ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.
ಮೃತ ಮಹಿಳೆಯ ಕುಟುಂಬಸ್ಥರು ಆಕೆಯ ಪತಿ ಶರತ್ ಕುಮಾರ್ ವಿರುದ್ಧ ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ.

ಮೂಲತಃ ಹೆಚ್.ಡಿ. ಕೋಟೆಯ ಸರಗೂರಿನವರಾದ ಜ್ಯೋತಿ ಹಾಗೂ ಶರತ್ ಕುಮಾರ್ ದಂಪತಿ ಕೊಮ್ಮಘಟ್ಟದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ವೃತ್ತಿಯಲ್ಲಿ ಚಾಲಕನಾಗಿದ್ದ ಶರತ್ ಕುಮಾರ್ ಮತ್ತು ಜ್ಯೋತಿ ದಂಪತಿಗೆ ನಾಲ್ಕು ವರ್ಷದ ಒಂದು ಮಗುವಿದೆ.

ಕಳೆದ ಕೆಲವು ಸಮಯದಿಂದ ಪತಿ ಶರತ್, ಪತ್ನಿ ಜ್ಯೋತಿಗೆ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಪತಿಯ ಈ ಕಿರುಕುಳದಿಂದ ತೀವ್ರ ಮನನೊಂದಿದ್ದ ಜ್ಯೋತಿ, ನಾಲ್ಕು ದಿನಗಳ ಹಿಂದೆ ಮನೆಯಿಂದ ಯಾರಿಗೂ ಹೇಳದೇ ಹೊರಟುಹೋಗಿದ್ದರು.

ಗುರುವಾರ ಬೆಳಿಗ್ಗೆ ಕೊಮ್ಮಘಟ್ಟ ಕೆರೆಯಲ್ಲಿ ಮಹಿಳೆಯ ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕುಂಬಳಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದು ಪರಿಶೀಲಿಸಿದಾಗ, ಅದು ನಾಪತ್ತೆಯಾಗಿದ್ದ ಜ್ಯೋತಿ ಅವರದ್ದೇ ಎಂದು ಗುರುತಿಸಲಾಗಿದೆ.

ಜ್ಯೋತಿ ಅವರ ಸಾವಿಗೆ ಪತಿ ಶರತ್ ನೀಡುತ್ತಿದ್ದ ವರದಕ್ಷಿಣೆ ಕಿರುಕುಳವೇ ನೇರ ಕಾರಣ ಎಂದು ಮೃತರ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ಕುರಿತು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿರುವುದಾಗಿ ಬೆಂಗಳೂರು ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ ಹದ್ದಣ್ಣನವರ್ ತಿಳಿಸಿದ್ದಾರೆ.


