ಸುಳ್ಯ: ಪೆರಾಜೆಯ ನಿವಾಸಿ, ಸ್ಥಳೀಯವಾಗಿ ‘ಟ್ಯಾಂಕರ್ ಮಹಮ್ಮದ್’ ಎಂದೇ ಅತ್ಯಂತ ಪರಿಚಿತರಾಗಿದ್ದ ಹಿರಿಯ ಕ್ರಿಕೆಟಿಗ ಮಹಮ್ಮದ್ (65 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಜೂನ್ 5ರಂದು ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಯಾವುದೇ ದೊಡ್ಡ ಮಟ್ಟದ ಸ್ಟಾರ್ ಆಟಗಾರನ ಸೋಗಿಲ್ಲದೆ, ತನಗಿಂತ ಸಣ್ಣ ಪ್ರಾಯದವರಿಂದ ಹಿಡಿದು ಹಿರಿಯರವರೆಗೆ ಎಲ್ಲಾ ವಯೋಮಾನದವರ ಜೊತೆ ಮೈದಾನದಲ್ಲಿ ಒಬ್ಬ ಸಾಮಾನ್ಯ ಆಟಗಾರನಾಗಿ ಬೆರೆತು ಆಡುತ್ತಿದ್ದದ್ದು ಮಹಮ್ಮದ್ ಅವರ ವಿಶೇಷತೆಯಾಗಿತ್ತು.

ಹಲವಾರು ವರ್ಷಗಳ ಕಾಲ ಪೆರಾಜೆ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಇವರು, 30 ಗಜಗಳ (30 Yards) ಕ್ರಿಕೆಟ್ ಪಂದ್ಯಾವಳಿಗಳಲ್ಲಿ ತಮ್ಮ ಚಾಣಾಕ್ಷ ಬೌಲಿಂಗ್ ದಾಳಿಯ ಮೂಲಕ ಅಪಾರ ಅನುಭವ ಹೊಂದಿದ್ದರು.

ಕೇವಲ ಆಟಕ್ಕಷ್ಟೇ ಸೀಮಿತವಾಗದೆ ಮೈದಾನದಲ್ಲಿ ಎಲ್ಲರನ್ನೂ ಪ್ರೋತ್ಸಾಹಿಸುತ್ತಾ, ತಾವೂ ಒಬ್ಬ ಯುವಕನಂತೆ ಉತ್ಸಾಹದಿಂದ ಆಡುತ್ತಿದ್ದ ಅವರ ಸರಳತೆ ಸ್ಥಳೀಯರ ಮನ ಗೆದ್ದಿತ್ತು.

ಇಂತಹ ಒಬ್ಬ ಅಪರೂಪದ ಕ್ರೀಡಾ ಪ್ರೇಮಿಯ ನಿಧನಕ್ಕೆ ಪೆರಾಜೆ ಹಾಗೂ ಸುಳ್ಯ ಪರಿಸರದ ಕ್ರೀಡಾಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


