ಪಾಲಿಗೆ ಬಂದದ್ದು ಪಂಚಾಮೃತ: ಮುಸ್ಲಿಮರ ದೌರ್ಬಲ್ಯ ಮತ್ತು ದೌರ್ಭಾಗ್ಯ

ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನ ಕಳೆದರೂ ದೇಶದ ಹಾಗೂ ರಾಜ್ಯದ ರಾಜಕಾರಣದಲ್ಲಿ ಪ್ರಾತಿನಿಧ್ಯದ ಪ್ರಶ್ನೆ ಇನ್ನೂ ಜೀವಂತವಾಗಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಅತ್ಯಂತ ಪ್ರಮುಖ ಪಾಲನ್ನು ಹೊಂದಿರುವ, ಇತ್ತೀಚಿನ ಜಾತಿಗಣತಿಯ ವರದಿಗಳ ಪ್ರಕಾರ ರಾಜ್ಯದ ದೊಡ್ಡ ಸಮುದಾಯಗಳಲ್ಲಿ ಒಂದಾಗಿರುವ ಮುಸ್ಲಿಮ್ ಸಮುದಾಯದ ಇಂದಿನ ರಾಜಕೀಯ ಪರಿಸ್ಥಿತಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಚುನಾವಣಾ ರಾಜಕಾರಣದಲ್ಲಿ ಒಂದು ನಿರ್ದಿಷ್ಟ ಪಕ್ಷಕ್ಕೆ ಬಹುದೊಡ್ಡ ಮಟ್ಟದ ಬೆಂಬಲ ನೀಡುತ್ತಾ ಬಂದಿದ್ದರೂ, ಅಧಿಕಾರದ ಹಂಚಿಕೆ ಮತ್ತು ಪ್ರಭಾವದ ವಿಷಯಕ್ಕೆ ಬಂದಾಗ ಸಮುದಾಯವು ತೆರೆಮರೆಗೆ ತಳ್ಳಲ್ಪಡುತ್ತಿದೆಯೆಂಬ ಪ್ರಶ್ನೆ ಇಂದು ಗಂಭೀರವಾಗಿ ಕಾಡುತ್ತಿದೆ.

ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಂಖ್ಯೆಯ ಆಧಾರದ ಮೇಲೆ ರಾಜಕೀಯ ಪ್ರಾತಿನಿಧ್ಯ ಸಿಗುವುದು ನ್ಯಾಯಸಮ್ಮತ. ಆದರೆ ಕರ್ನಾಟಕದ ಇತಿಹಾಸವನ್ನು ಗಮನಿಸಿದರೆ, ಇದುವರೆಗೆ ಒಬ್ಬರೇ ಒಬ್ಬರು ಮುಸ್ಲಿಮ್ ಸಮುದಾಯದ ಮುಖ್ಯಮಂತ್ರಿಯನ್ನು ಕಾಣಲು ಸಾಧ್ಯವಾಗಿಲ್ಲ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಕ್ಯಾಬಿನೆಟ್‌ನಲ್ಲಿ ಸಿಗುತ್ತಿರುವ ಸ್ಥಾನಗಳು ಕೇವಲ ಹೆಸರಿಗಷ್ಟೇ ಸೀಮಿತವಾಗುತ್ತಿವೆ ಎಂಬ ಅಸಮಾಧಾನ ಸಮುದಾಯದಲ್ಲಿದೆ.

ಇತರ ಸಣ್ಣ ಸಣ್ಣ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಪಟ್ಟು ಹಿಡಿದು, ತಮಗೆ ಬೇಕಾದ ಸಚಿವ ಸ್ಥಾನ ಅಥವಾ ಖಾತೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿವೆ. ಆದರೆ, ಇಡೀ ರಾಜ್ಯದ ಚುನಾವಣಾ ಚಿತ್ರಣವನ್ನೇ ಬದಲಾಯಿಸಬಲ್ಲ ಶಕ್ತಿ ಹೊಂದಿರುವ ಮುಸ್ಲಿಮ್ ಸಮುದಾಯಕ್ಕೆ ಮಾತ್ರ ಕೊಟ್ಟಿದ್ದನ್ನು ಸ್ವೀಕರಿಸಿ ಸುಮ್ಮನಿರಬೇಕು ಎನ್ನುವಂತಹ ವಾತಾವರಣ ಸೃಷ್ಟಿಯಾಗಿರುವುದು ರಾಜಕೀಯ ಅಸಮತೋಲನವನ್ನು ಎತ್ತಿ ತೋರಿಸುತ್ತದೆ.

ಸಮುದಾಯದ ಇಂದಿನ ಸ್ಥಿತಿಗೆ ಕೇವಲ ರಾಜಕೀಯ ಪಕ್ಷಗಳಷ್ಟೇ ಅಲ್ಲ, ಸಮುದಾಯವನ್ನು ಮುನ್ನಡೆಸಬೇಕಾದ ನಾಯಕರ ದೃಢತೆಯ ಕೊರತೆಯೂ ಕಾರಣ ಎಂಬ ವಾದ ಬಲವಾಗಿದೆ. ಅಧಿಕಾರ ಹಿಡಿದ ಮುಸ್ಲಿಮ್ ನಾಯಕರು ತಮ್ಮ ವೈಯಕ್ತಿಕ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ಸಮುದಾಯದ ಹಿತಾಸಕ್ತಿಯನ್ನು ಬಲಿಕೊಡುತ್ತಿದ್ದಾರೆ ಎಂಬ ಆರೋಪಗಳಿವೆ. ಹಕ್ಕುಗಳನ್ನು ಗಟ್ಟಿಯಾಗಿ ಕೇಳುವ ಬದಲು, ಕೇವಲ ಸಾಂತ್ವನದ ಮಾತುಗಳು ಅಥವಾ ಸಣ್ಣಪುಟ್ಟ ಭರವಸೆಗಳಿಗೆ ತೃಪ್ತಿಪಡಿಸುವ ಪ್ರವೃತ್ತಿ ಹೆಚ್ಚಾಗಿದೆ.

ರಾಜಕೀಯ ಪಕ್ಷಗಳ ಹೈಕಮಾಂಡ್ ಎದುರು ಸಮುದಾಯದ ಪರವಾಗಿ ಧ್ವನಿ ಎತ್ತುವ ಕಮಾಂಡಿಂಗ್ ನಾಯಕತ್ವ ಬೆಳೆಯದೇ ಹೋದದ್ದು ದೊಡ್ಡ ಹಿನ್ನಡೆಯಾಗಿದೆ.ಮೂಗಿಗೆ ತುಪ್ಪ ಸವರುವಂತೆ ಪರೋಕ್ಷವಾಗಿ ಬೇಡಿಕೆಗಳನ್ನು ಇಡುವುದರಲ್ಲೇ ಕಾಲ ಕಳೆದ ನಾಯಕರು, ಸಮುದಾಯಕ್ಕೆ ರಾಜಕೀಯವಾಗಿ ಹಕ್ಕು ಚಲಾಯಿಸುವ ಧೀರತನವನ್ನು ಕಲಿಸಿಕೊಡಲಿಲ್ಲ.

ರಾಜಕೀಯ ವಿಶ್ಲೇಷಕರ ಪ್ರಕಾರ, ಮುಸ್ಲಿಮ್ ಸಮುದಾಯವು ಒಂದು ನಿರ್ದಿಷ್ಟ ಪಕ್ಷಕ್ಕೆ ಮಾತ್ರ ಮತ ಹಾಕುತ್ತದೆ ಎಂಬ ಕಲ್ಪನೆ ಗಟ್ಟಿಯಾಗಿ ಬಿಟ್ಟಿದೆ. ರಾಜಕೀಯದಲ್ಲಿ ಯಾವಾಗ ಆಯ್ಕೆಗಳು ಮುಚ್ಚಿಹೋಗುತ್ತವೆಯೋ, ಆಗ ಆ ಸಮುದಾಯದ ಚೌಕಾಸಿ ಮಾಡುವ ಶಕ್ತಿ ಕುಗ್ಗಿಹೋಗುತ್ತದೆ. ಇವರಿಗೆ  ನಾವಲ್ಲದೇ ಬೇರೆ ಆಯ್ಕೆ ಇಲ್ಲ  ಎಂಬ ಉದಾಸೀನತೆ ಮತ್ತು ಅಸಡ್ಡೆ ರಾಜಕೀಯ ಪಕ್ಷದಲ್ಲಿ  ಬೆಳೆಯಲು ಸಮುದಾಯವು ತನ್ನ ಇಡೀ ಬೆಂಬಲವನ್ನು ಒಂದೇ ಪಕ್ಷಕ್ಕೆ ಧಾರೆ ಎರೆದಿರುವುದೂ ಒಂದು ಪ್ರಮುಖ ಕಾರಣವಾಗಿದೆ. ಇದು ಸಮುದಾಯವನ್ನು ಮುಖ್ಯವಾಹಿನಿಯ ನಿರ್ಧಾರಗಳಿಂದ ಹೊರಗುಳಿಯುವಂತೆ ಮಾಡಿದೆ ಮತ್ತು  ವಿಧಿಯಿಲ್ಲದೇ ಪಕ್ಷವೊಂದರ ಅನಿವಾರ್ಯ ಮತಬ್ಯಾಂಕ್ ಆಗಿ ಉಳಿದುಹೋಗಿದೆ‌.

ಪ್ರಸ್ತುತ ದೇಶದಲ್ಲಿ ಹರಡಿಕೊಂಡಿರುವ ಧ್ರುವೀಕರಣದ ರಾಜಕಾರಣ ಮತ್ತು ಇಸ್ಲಾಮೋಫೋಬಿಯಾದ ವಾತಾವರಣದಿಂದಾಗಿ, ಜಾತ್ಯತೀತ ಎಂದು ಕರೆದುಕೊಳ್ಳುವ ಪಕ್ಷಗಳೂ ಕೂಡ ಮುಸ್ಲಿಮ್ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಹಿಂಜರಿಯುತ್ತಿವೆ. ಮುಸ್ಲಿಮ್ ನಾಯಕರಿಗೆ ಪ್ರಮುಖ ಸ್ಥಾನ ನೀಡಿದರೆ ಬಹುಸಂಖ್ಯಾತರ ಮತಗಳು ಕೈತಪ್ಪಬಹುದು ಎಂಬ ಭಯದ ರಾಜಕಾರಣ ಸೃಷ್ಟಿಯಾಗಿದೆ. ಇದು ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕುವ ಪ್ರವೃತ್ತಿಯಾಗಿದ್ದು, ಮುಸ್ಲಿಮರನ್ನು ರಾಜಕೀಯವಾಗಿ ಅಸ್ಪೃಶ್ಯರನ್ನಾಗಿಸುವ ತಂತ್ರಗಳಿಗೆ ದಾರಿ ಮಾಡಿಕೊಡುತ್ತಿದೆ.

ಮುಸ್ಲಿಮ್ ಸಮುದಾಯವು ರಾಜಕೀಯ ಅಸಹಾಯಕತೆಯಿಂದ ಮತ್ತು ಕತ್ತಲೆಯಿಂದ ಹೊರಬರಬೇಕಾದರೆ ಕೆಲವು ಪ್ರಮುಖ ಬದಲಾವಣೆಗಳು ಅತ್ಯಗತ್ಯ. ಕೇವಲ ಭಾವನಾತ್ಮಕ ವಿಚಾರಗಳಿಗೆ ಸೀಮಿತವಾಗದೆ, ಹಕ್ಕುಗಳು ಮತ್ತು ಸಂವಿಧಾನದ ಆಧಾರದ ಮೇಲೆ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ವೈಯಕ್ತಿಕ ಲಾಭಕ್ಕಾಗಿ ಸಮುದಾಯವನ್ನು ಬಳಸಿಕೊಳ್ಳುವ ಹಳೇ ನಾಯಕರನ್ನು ಬದಿಗೊತ್ತಿ, ಸಮುದಾಯದ ಹಿತಾಸಕ್ತಿಯನ್ನು ರಾಜಕೀಯ ಪಕ್ಷಗಳ ಮುಂದೆ ಕಟುವಾಗಿ ಮಂಡಿಸುವ ಯುವ ಮತ್ತು ವಿದ್ಯಾವಂತ ನಾಯಕತ್ವ ಮುಂಚೂಣಿಗೆ ಬರಬೇಕಿದೆ.

ಯಾವುದೇ ಒಂದು ಪಕ್ಷಕ್ಕೆ ಬದ್ಧವಾಗಿ ಉಳಿಯುವ ಬದಲು, ಸಮುದಾಯದ ಅಭಿವೃದ್ಧಿ, ರಕ್ಷಣೆ ಮತ್ತು ರಾಜಕೀಯ ಪ್ರಾತಿನಿಧ್ಯಕ್ಕೆ ಬೆಲೆ ಕೊಡುವವರಿಗೆ ಮಾತ್ರ ಬೆಂಬಲ ನೀಡುವ ಕಮಾಂಡಿಂಗ್ ನೀತಿಯನ್ನು ಅಳವಡಿಸಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ಸಮುದಾಯವು ಕೇವಲ ಮತ ಚಲಾಯಿಸುವ ಯಂತ್ರವಾಗಬಾರದು.

 

ಕರ್ನಾಟಕದ ಮುಸ್ಲಿಮ್ ಸಮುದಾಯವು ಕೇವಲ ಬೆಂಬಲಿಗರಾಗಿ ಉಳಿಯದೆ, ಅಧಿಕಾರ ಹಂಚಿಕೆಯಲ್ಲಿ ಸಮಾನ ಪಾಲುದಾರರಾಗುವ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಂಡು, ತನ್ನ ರಾಜಕೀಯ ನಡೆಯನ್ನು ಮರುರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿನ ತುರ್ತು ಅಗತ್ಯವಾಗಿದೆ.

-ಸಾಹುಕಾರ್ ಅಚ್ಚು

Leave a Reply

Discover more from

Subscribe now to keep reading and get access to the full archive.

Continue reading