ಕೆಲವು ಕಥೆಗಳು ಕಲ್ಪನೆಗಿಂತಲೂ ಭೀಕರವಾಗಿರುತ್ತವೆ. ಚಿತ್ರಕಥೆಯೊಂದನ್ನು ಮೀರಿಸುವಂತಹ ಇಂತಹದ್ದೇ ಒಂದು ರೋಮಾಂಚನಕಾರಿ ಮತ್ತು ನಡುಕ ಹುಟ್ಟಿಸುವ ನೈಜ ಘಟನೆ ಕೇರಳದ ಕ್ಯಾಲಿಕಟ್ ಮತ್ತು ಕಣ್ಣೂರಿನ ಪರಿಸರದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ.
ನಾಲ್ಕು ದಶಕಗಳ ಕಾಲ ಕಾನೂನಿನ ಕಣ್ಣಿಗೆ ಮಣ್ಣೆರಚಿ, ಸಮಾಜದ ನಡುವೆಯೇ ಸಾಮಾನ್ಯನಂತೆ ಬದುಕುತ್ತಿದ್ದ ವ್ಯಕ್ತಿಯೊಬ್ಬ ದಿಢೀರನೆ ಮಾಧ್ಯಮಗಳ ಮುಂದೆ ಬಂದು, “ನಾನು ಎರಡು ಕೊಲೆ ಮಾಡಿದ್ದೇನೆ!” ಎಂದು ಬಾಂಬ್ ಸಿಡಿಸಿದ್ದಾನೆ.ಮೊದಲಿಗೆ ಈತನ ಮಾತುಗಳನ್ನು ಕೇಳಿ ಎಲ್ಲರೂ ಇವನಿಗೆ ಹುಚ್ಚು ಹಿಡಿದಿದೆ ಅಥವಾ ಕುಡಿತದ ನಶೆಯಲ್ಲಿ ಏನೇನೋ ಒದರುತ್ತಿದ್ದಾನೆ ಎಂದೇ ಭಾವಿಸಿದ್ದರು. ಆದರೆ, ಆತ ಪದೇ ಪದೇ ಅದೇ ಮಾತುಗಳನ್ನು ಒತ್ತಿ ಹೇಳಿದಾಗ ಪೊಲೀಸರು ಎಚ್ಚೆತ್ತುಕೊಂಡರು.


ಕಳೆದುಹೋದ ನಲವತ್ತು ವರ್ಷಗಳ ಹಳೆಯ ಫೈಲ್‌ಗಳನ್ನು ಧೂಳು ಕೊಡವಿ ಹುಡುಕಲು ಹೊರಟಾಗ ಸಿಕ್ಕ ಆಘಾತಕಾರಿ ಸತ್ಯಗಳು ಇಡೀ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸಿವೆ.

ಅದು ಸುಮಾರು ನಲವತ್ತು ವರ್ಷಗಳ ಹಿಂದಿನ ಮಾತು. ದಾರಿಯಲ್ಲಿ ಸಾಗುವಾಗ ಎರಡು ಜನ ಒಟ್ಟಿಗೆ ಸಾಗಲು ಸಾಧ್ಯವಿಲ್ಲದಂತಹ ಒಂದು ಸಣ್ಣ ಮರದ ಸೇತುವೆ ಇರುತ್ತದೆ. ಅಲ್ಲಿ ಎದುರಾದ ಅಪರಿಚಿತ ವ್ಯಕ್ತಿಯೊಂದಿಗೆ ದಾರಿ ಬಿಡುವ ವಿಚಾರವಾಗಿ ಸಣ್ಣದೊಂದು ಹಠ, ಅಹಂಕಾರದ ಜಗಳ ಶುರುವಾಗುತ್ತದೆ. ಕ್ಷಣಿಕ ಕೋಪದಲ್ಲಿ ಈ ವ್ಯಕ್ತಿ ಎದುರಿದ್ದವನನ್ನು ಕೆಳಗಿನ ನೀರಿನ ಹರಿವಿಗೆ ಜೋರಾಗಿ ದೂಡಿಬಿಡುತ್ತಾನೆ.

ಎರಡು ದಿನಗಳ ನಂತರ ಆ ವ್ಯಕ್ತಿಯ ಶವ ಸಿಗುತ್ತದೆ. ಆದರೆ, ಅದು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಂಭವಿಸಿದ ಸಾವು ಎಂದೇ ಎಲ್ಲರೂ ಭಾವಿಸುತ್ತಾರೆ. ಅದು ತಣ್ಣಗಾಗುತ್ತಿದ್ದಂತೆ ನಡೆದಿದ್ದು ಕೊಲೆ ಎಂಬ ಸತ್ಯ ಯಾರಿಗೂ ತಿಳಿಯದೆ ಹೂತುಹೋಗುತ್ತದೆ. ಆದರೆ, ಆ ಘಟನೆ ಈತನ ಮನಸ್ಸಿನಲ್ಲಿ ಆಳವಾದ ಖಿನ್ನತೆಯನ್ನು ಸೃಷ್ಟಿಸುತ್ತದೆ. ಪಾಪಪ್ರಜ್ಞೆಯಿಂದ ನೊಂದ ಆತ ಊರೂರು ಅಲೆಯಲು ಪ್ರಾರಂಬಿಸುತ್ತಾನೆ.

ಹೀಗೆ ಮನಸ್ಸಿನ ನೆಮ್ಮದಿ ಕಳೆದುಕೊಂಡು ಅಲ್ಲಿಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವಾಗ ಕಣ್ಣೂರಿನ ಇರಿಕ್ಕೂರು ಎಂಬ ಪ್ರದೇಶದಲ್ಲಿ ಮತ್ತೊಂದು ದುರಂತ ಸಂಭವಿಸುತ್ತದೆ. ಅದು ಹಣದ ವಿಚಾರ. ತನ್ನ ಸ್ನೇಹಿತನೊಬ್ಬನಿಗೆ ಉಪಕಾರ ಮಾಡಲು ಹೋಗಿ ಅಲ್ಲಿ ಮತ್ತೊಂದು ಕೊಲೆ ನಡೆದೇ ಹೋಗುತ್ತದೆ. ಆ ಸಂದರ್ಭದಲ್ಲಿ ಈತನಿಗೆ ಸ್ವಲ್ಪ ಹಣವೂ ಸಿಗುತ್ತದೆ. ಬೆನ್ನಿಗೆ ಬಿದ್ದ ಎರಡು ಕೊಲೆಗಳ ಅಪರಾಧ ಪ್ರಜ್ಞೆಯನ್ನು ಹೊತ್ತು ಆತ ಅಲ್ಲಿಂದಲೂ ಪರಾರಿಯಾಗುತ್ತಾನೆ.

ಕಾಲ ಉರುಳಿದಂತೆ ಈತನ ಜೀವನದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಮದುವೆಯಾಗುತ್ತದೆ, ಆದರೆ ದುರದೃಷ್ಟವಶಾತ್ ಆ ಹೆಂಡತಿ ಈತನನ್ನು ಬಿಟ್ಟು ಬೇರೊಬ್ಬನ ಜೊತೆ ಓಡಿಹೋಗುತ್ತಾಳೆ. ಅದಾದ ನಂತರ ಕಾಲದ ಓಟದಲ್ಲಿ ಆತ ತನ್ನ ಧರ್ಮದಿಂದ ಮತಾಂತರಗೊಂಡು ಮಹಮ್ಮದಲಿ ಎಂಬ ಹೆಸರನ್ನು ಪಡೆದುಕೊಳ್ಳುತ್ತಾನೆ. ಎರಡನೇ ಮದುವೆಯಾಗಿ ಇಬ್ಬರು ಗಂಡು ಮಕ್ಕಳೊಂದಿಗೆ ಸಂಸಾರ ಸುಂದರವಾಗಿಯೇ ಸಾಗುತ್ತಿರುತ್ತದೆ.

ಆದರೆ, ಪ್ರಕೃತಿಯ ನಿಯಮ ಕಠಿಣವಾದದ್ದು. ಈತನ ಹಣೆಬರಹದಲ್ಲಿದ್ದ ಕರ್ಮದ ಫಲ ಎಂಬಂತೆ, ದೊಡ್ಡ ಮಗ ಅಪಘಾತವೊಂದರಲ್ಲಿ ದುರ್ಮರಣಕ್ಕೀಡಾಗುತ್ತಾನೆ. ಮತ್ತೊಬ್ಬ ಮಗ ಕೂಡ ಭೀಕರ ಅಪಘಾತಕ್ಕೊಳಗಾಗಿ ಇಂದಿಗೂ ಮನೆಯಲ್ಲೇ ಹಾಸಿಗೆ ಹಿಡಿದಿದ್ದಾನೆ. ತನ್ನ ಕಣ್ಣೆದುರೇ ಕುಟುಂಬ ಅನುಭವಿಸುತ್ತಿರುವ ಈ ನರಕಯಾತನೆಗೆ ತನ್ನ ಹಳೆಯ ಪಾಪಗಳೇ ಕಾರಣ ಎಂದು ಆತನ ಸುಪ್ತಮನಸ್ಸು ಚೀರಲಾರಂಭಿಸುತ್ತದೆ.

ಮನದೊಳಗೆ ನಲವತ್ತು ವರ್ಷಗಳಿಂದ ಕೊರೆಯುತ್ತಿದ್ದ ಈ ಭೀಕರ ರಹಸ್ಯವನ್ನು ಜಗತ್ತಿನ ಮುಂದೆ ಹೇಳದಿದ್ದರೆ ತನಗೆ ಸತ್ತ ಮೇಲೂ ನೆಮ್ಮದಿ ಸಿಗಲಾರದು ಎಂದು ಅರಿತ ಮಹಮ್ಮದಲಿ, ನೇರವಾಗಿ ಮಾಧ್ಯಮಗಳ ಮುಂದೆ ಬಂದು ತನ್ನ ಪಾಪದ ಕಥೆಯನ್ನು ಬಿಚ್ಚಿಡುತ್ತಾನೆ. ಆರಂಭದಲ್ಲಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳದ ಪೊಲೀಸರು, ಆತ ನೀಡಿದ ಸುಳಿವುಗಳ ಆಧಾರದ ಮೇಲೆ ತನಿಖೆಗೆ ಇಳಿದಾಗ ಕಂಗಾಲಾಗಿದ್ದಾರೆ. ಏಕೆಂದರೆ, ಆತ ಹೇಳಿದ ಮೊದಲ ಕೊಲೆಯ ವಿವರಗಳು ಮತ್ತು ನಲವತ್ತು ವರ್ಷಗಳ ಹಿಂದಿನ ಹಳೆಯ ದಾಖಲೆಗಳು ಹೌದು ಎಂದು ಸಾಬೀತಾಗಿವೆ!

ಪ್ರಸ್ತುತ ಪೊಲೀಸರು ಎರಡನೇ ಕೊಲೆಯ ಜಾಡು ಹಿಡಿದು ಹೊರಟಿದ್ದಾರೆ. “ನಾನು ಯಾವುದೇ ಶಿಕ್ಷೆ ಅನುಭವಿಸಲೂ ಸಿದ್ಧ. ಕೊಲೆ ಮಾಡಿದ ದಿನದಿಂದ ಇಂದಿನವರೆಗೆ ನಾನು ಅನುಭವಿಸುತ್ತಿರುವ ಮಾನಸಿಕ ಯಾತನೆ ನರಕಕ್ಕಿಂತ ಮಿಗಿಲಾದದ್ದು. ಕಾನೂನಾತ್ಮಕವಾಗಿ ಶಿಕ್ಷೆ ಅನುಭವಿಸಿ ಜೈಲು ಕಂಬಿಗಳ ಹಿಂದೆ ಕಳೆಯುವ ದಿನಗಳೇ ನನಗೆ ನಿಜವಾದ ಮಾನಸಿಕ ನೆಮ್ಮದಿ ನೀಡಬಲ್ಲವು” ಎನ್ನುತ್ತಿದ್ದಾನೆ ಈ ಹಂತಕ.

ನಲವತ್ತು ವರ್ಷಗಳ ಕಾಲ ಅಡಗಿದ್ದ ಸತ್ಯ ಈಗ ನ್ಯಾಯದ ಕದ ತಟ್ಟುತ್ತಿದೆ. ಇಷ್ಟು ವರ್ಷಗಳ ನಂತರ ಈ ಕೇಸ್‌ಗೆ ತಾರ್ಕಿಕ ಅಂತ್ಯ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.


