ಐಪಿಎಲ್ ಒಳಗೊಂದು ಫೀಲ್ ಗುಡ್ ರೊಮ್ಯಾಂಟಿಕ್ ಪ್ರೇಮಕಾವ್ಯ..

ಒಂದೆಡೆ ಐಪಿಎಲ್‌ನ ಆ ಕರಾಳ ಮುಖಗಳು ಕಣ್ಣೆದುರು ಬಂದು ಹೋಗುತ್ತವೆ. ಈ ಮೂರು ತಿಂಗಳು ನಮ್ಮ ಜನರೆಲ್ಲಾ ಕ್ರಿಕೆಟ್ ಎದುರು ಕುಳಿತು ಸೋಮಾರಿಗಳಾಗಿಬಿಡುತ್ತಾರಲ್ಲಾ ಎಂಬ ಬೇಸರ, ಇದು ಕೇವಲ ಕಾರ್ಪೊರೇಟ್ ಜಗತ್ತಿನ ಕುತಂತ್ರ ಎಂಬ ಆಕ್ರೋಶ, ಎಲ್ಲಕ್ಕಿಂತ ಹೆಚ್ಚಾಗಿ ಬೆಟ್ಟಿಂಗ್ ದಂಧೆಗೆ ಸಿಲುಕಿ ಬೀದಿಗೆ ಬಿದ್ದ ಅದೆಷ್ಟೋ ಕುಟುಂಬಗಳು, ಇತ್ತೀಚಿನ ಆತ್ಮಹತ್ಯೆಗಳ ಹಿಂದಿರುವ ಆ ಕಹಿ ವಾಸ್ತವ… ಇದೆಲ್ಲವೂ ಸೂಕ್ಷ್ಮ ಮನಸ್ಸನ್ನು ತೀವ್ರವಾಗಿ ಕಾಡುತ್ತದೆ. ಇದರಲ್ಲಿ ಸುಳ್ಳಿಲ್ಲ, ಇದು ನೂರಕ್ಕೆ ನೂರು ನಿಜ.

ಆದರೂ, ಇಷ್ಟೆಲ್ಲಾ ಕರಾಳತೆಯ ನಡುವೆಯೂ ಈ ಐಪಿಎಲ್‌ನ ಗ್ಲಾಮರ್ ಸೆಳೆತದಿಂದ  ಪೂರ್ಣವಾಗಿ ದೂರ ಸರಿಯಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ನಮ್ಮದೇ ಆದ ಸೂಕ್ಷ್ಮ ಆಲೋಚನೆಗಳನ್ನು ಪಕ್ಕಕ್ಕಿಟ್ಟು, ಎಲ್ಲವನ್ನೂ ಮುಕ್ತವಾಗಿ ನೋಡಿಬಿಡುವ ಆಸೆ ಮನಸ್ಸಿಗಾಗುತ್ತದೆ. ಹಾಗೆ ನೋಡಿದಾಗ  ಅಲ್ಲಿ ಬರೀ ಕ್ರಿಕೆಟ್ ಆಟ ಕಾಣುವುದಿಲ್ಲ; ಬದಲಿಗೆ ಭಾವನೆಗಳ ಮಹಾಪೂರವೇ ಕಣ್ಣಿಗೆ ಕಟ್ಟುತ್ತದೆ.
ಅದಕ್ಕೆ ಕಾರಣ ಅಲ್ಲೊಬ್ಬ ವಿರಾಟ್ ಕೊಹ್ಲಿ ಇದ್ದಾನೆ, ಆತನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿದೆ!

ಬೆಂಗಳೂರು ಎಂದರೆ ಕನ್ನಡಿಗ ಯುವಕರ ಪಾಲಿನ ‘ಫಸ್ಟ್ ಲವ್’. ಅಂತಹ ಬೆಂಗಳೂರಿನ ಹೆಸರನ್ನು ಹೊತ್ತ ಆರ್ಸಿಬಿ ಮೇಲೆ ನಮಗಿರುವ ಪ್ರೀತಿ ಅಷ್ಟಿಷ್ಟಲ್ಲ.ಕನ್ನಡದ ಪದಗಳನ್ನು ವಿದೇಶೀಯರಿಂದಲೂ ಹೇಳಿಸಿದ ‘ಈ ಸಲ ಕಪ್ ನಮ್ದೇ’ ಎಂಬ ವಾಕ್ಯ ಆರ್ಸಿಬಿಯನ್ನು ಕನ್ನಡಿಗರ ಬಳಿ ಸೆಳೆದ ಮತ್ತೊಂದು ಅಸ್ತ್ರ. ಆದರೆ ಒಂದು ಕಪ್‌ಗಾಗಿ ಆ ತಂಡ ಸತತ ಹದಿನೆಂಟು ವರ್ಷಗಳ ಕಾಲ ಅವಿರತ ಹೋರಾಟ ನಡೆಸಿದ್ದನ್ನು ನೋಡುತ್ತಾ ಬಂದೆವು. ನಿನ್ನೆ ಮೊನ್ನೆ ಬಂದವರೆಲ್ಲಾ ಕಪ್ ಗೆದ್ದು ಸಂಭ್ರಮಿಸುತ್ತಿದ್ದರೆ, ಐಪಿಎಲ್‌ನ ಅತ್ಯಂತ ಪ್ರತಿಭಾವಂತ, ಗ್ಲಾಮರಸ್ ತಂಡವಾದ ಆರ್ಸಿಬಿ ಸತತ ಹದಿನೇಳು ವರ್ಷಗಳ ಕಾಲ ಪೆಚ್ಚುಮೊರೆ ಹಾಕಿಕೊಂಡು ಮೈದಾನದಿಂದ ಹೊರನಡೆಯುತ್ತಿದ್ದಾಗ ಮನಸ್ಸಿಗಾಗುತ್ತಿದ್ದ ನೋವು ಕಡಿಮೆಯೇನಲ್ಲ.

ಆಗ ತಕ್ಷಣ ನೆನಪಾಗುತ್ತಿದ್ದುದೇ ಆ ‘ಕಿಂಗ್’ ಮುಖ. ಐಪಿಎಲ್ ಎಂದು ಯೋಚಿಸಿದ ಮರುಕ್ಷಣವೇ ವಿರಾಟ್ ಕೊಹ್ಲಿಯ ಮುಖ ಮನಸ್ಸಿನಲ್ಲಿ ಹಾದುಹೋಗುತ್ತದೆ. ಆಟಕ್ಕೂ ಆತನಿಗೂ ಇರುವ ಸಂಬಂಧವೇ ಅಂತಹದ್ದು.
ಎರಡು ದಶಕಗಳ ಹಿಂದೆ ಆತ ಮೈದಾನಕ್ಕೆ ಕಾಲಿಟ್ಟಾಗ ಆತನಲ್ಲಿದ್ದ ಆ ಅಗ್ರೆಸಿವ್ ನೆಸ್ (ಆಕ್ರಮಣಶೀಲತೆ) ಕ್ರಿಕೆಟ್ ಪ್ರೇಕ್ಷಕರನ್ನು ಬೆರಗುಗೊಳಿಸಿತ್ತು. ಮೈದಾನದೊಳಗೆ ಆತ ಯಾವತ್ತಿಗೂ ಗಾಯಗೊಂಡ ಹುಲಿಯೇ. ಆದರೆ ಮೈದಾನದಿಂದ ಹೊರಗೆ ಆತ ಅಪ್ಪಟ ಮುಗ್ಧ ಮಗು. ಪ್ರತಿ ಬಾರಿ ತಂಡ ಸೋತು ಹಿಂತಿರುಗುವಾಗ ಆತ ಅನುಭವಿಸುತ್ತಿದ್ದ ಆ ಖಿನ್ನತೆ, ಇನ್ನು ಈ ಕ್ರಿಕೆಟ್ಟೇ ಬೇಡ ಎನ್ನುವಷ್ಟರ ಮಟ್ಟಿಗೆ ಆತ ನೊಂದುಕೊಂಡಿದ್ದ ಆ ದಿನಗಳು ಇಂದಿಗೂ ನೆನಪಾಗುತ್ತವೆ. “ಇಲ್ಲಿನ ಗದ್ದಲಗಳಿಂದ ದೂರ ಸರಿದು ಮತ್ತೆಲ್ಲೋ ಹೊರಟು ಹೋಗೋಣ” ಎಂದು ಕೊಹ್ಲಿ ಅನುಭವಿಸಿದ ಆ ತಲ್ಲಣಗಳನ್ನು ಆತನ ಮಡದಿ ಅನುಷ್ಕಾ ಭಾವುಕವಾಗಿ ಹಂಚಿಕೊಂಡಾಗ ಎಲ್ಲರೊಳಗೊಂದು ಕಂಪನ ಹುಟ್ಟಿತ್ತು. ಸತತ ಐಪಿಎಲ್ ಸೋಲುಗಳು ಇತರ ಫಾರ್ಮಾಟ್ ಗಳ ಕೊಹ್ಲಿಯ ಸಾಧನೆಯನ್ನೇ ಮಂಕುಗೊಳಿಸಿಬಿಡುತ್ತಿತ್ತು.

ಆದರೆ, ಇತಿಹಾಸ ಬದಲಾಯಿತು! ಹದಿನೇಳು ವರ್ಷಗಳ ಕಾಲ ಮರೀಚಿಕೆಯಾಗಿದ್ದ ಆ ಕಪ್, ಕೊನೆಗೂ ಹದಿನೆಂಟನೇ ವರ್ಷದಲ್ಲಿ ಆರ್ಸಿಬಿ ಪಾಲಾಯಿತು. ಆ ಕ್ಷಣ ಕೊಹ್ಲಿ ಹೆಮ್ಮೆಯಿಂದ ಬೀಗಿದ್ದ. ಅಲ್ಲಿಗೆ ನಿಲ್ಲದ ಆತ ಹತ್ತೊಂಬತ್ತನೇ ವರ್ಷಕ್ಕೆ ತನ್ನನ್ನು ಯಾರೂ ಬೀಟ್ ಮಾಡದಷ್ಟು ಎತ್ತರಕ್ಕೆ ಬೆಳೆದು, ಸತತವಾಗಿ ಮತ್ತೊಮ್ಮೆ ಕಪ್ ಗೆದ್ದುಕೊಟ್ಟಾಗ ಬದುಕಿನಲ್ಲಿ ಸೋಲುಗಳನ್ನು ಗೆದ್ದು ಬಂದವನ ಪ್ರತೀಕಾರವೆಂದೇ ಬಣ್ಣಿಸಲಾಯಿತು. ಮತ್ತು ಸೋತವನಿಗೆ ಸ್ಪೂರ್ತಿ ಎಂದು ಕೊಂಡಾಡಲಾಯಿತು.
 ಎರಡು ದಶಕಗಳ ಹಿಂದಿನ ಗಾಯಗೊಂಡ ಹುಲಿಯ ಅದೇ ಪ್ರಖರತೆ ಇಂದಿಗೂ ಆತನಲ್ಲಿ ಇದೆ. ಅದೇ ಅಗ್ರೆಸಿವ್ ನೆಸ್ ಇದೆ, ಅದೇ ಚಿಗರೆಯಂಥ ಚುರುಕುತನವಿದೆ, ಸಹ ಆಟಗಾರರನ್ನು ಹುರಿದುಂಬಿಸುವ ನಲ್ಮೆಯೂ ಇದೆ.

ಆದರೆ ಐಪಿಎಲ್ ಆಟದ ಬಿಗುವಿನ ವಾತಾವರಣದ ನಡುವೆಯೂ ಸ್ಟೇಡಿಯಮ್ ನೊಳಗೆ  ಮನಸ್ಸನ್ನು ಅತ್ಯಂತ ಆಪ್ತವಾಗಿ ತಾಕಿದ್ದು ವಿರಾಟ್ ಮತ್ತು ಅನುಷ್ಕಾ ಅವರ ನಡುವಿನ ಆ ಸುಂದರ ಸಂಬಂಧ. ಬ್ಯಾಟ್ ಬೀಸಿ ಒಂದೊಂದು ಮೈಲಿಗಲ್ಲನ್ನು ದಾಟಿದಾಗಲೂ, ಕೊಹ್ಲಿ ಸ್ಟೇಡಿಯಂನಲ್ಲಿ ಕುಳಿತಿರುವ ತನ್ನ ಮನದನ್ನೆಯ ಕಡೆಗೆ ತಿರುಗಿ ಕೊಡುವ ಆ ‘ಪ್ಲೈಯಿಂಗ್ ಕಿಸ್’ ಇದೆಯಲ್ಲ… ಅದನ್ನು ನೋಡುವಾಗ ಕ್ರಿಕೆಟ್ ನೋಡುತ್ತಿದ್ದೇನೆ ಅನ್ನಿಸುವುದೇ ಇಲ್ಲ! ಯಾವುದೋ ಒಂದು ಅದ್ಭುತವಾದ, ಮನಸ್ಸಿಗೆ ಮುದ ನೀಡುವ ‘ಫೀಲ್ ಗುಡ್ ರೋಮಾಂಟಿಕ್ ಸಿನಿಮಾ’ವನ್ನು ಕಣ್ಣಾರೆ ಸವಿಯುತ್ತಿರುವ ಅನುಭೂತಿ ಸಿಗುತ್ತದೆ.

ವಿರಾಟ್ ಸ್ವತಃ ಹೇಳಿಕೊಂಡಂತೆ ಅನುಷ್ಕಾ ವಿರಾಟ್‌ನನ್ನು ಕೇವಲ ಪತಿಯಾಗಿ ನೋಡಲಿಲ್ಲ, ತನ್ನ ಮಗುವಿನಂತೆ ಸಾಕಿ ಸಲಹಿದರು. ಮೈದಾನದಲ್ಲಿ ಜಗತ್ತನ್ನೇ ಗೆಲ್ಲುವ ವೀರನಂತೆ ಆರ್ಭಟಿಸುವ ಕೊಹ್ಲಿ, ಅನುಷ್ಕಾ ಎದುರು ನಿಂತಾಗ ಅಪ್ಪಟ ಪ್ರೇಮಿಯಾಗುತ್ತಾರೆ.

ಹೌದು, ಐಪಿಎಲ್‌ನ ಹಿಂದೆ ಕರಾಳ ದಂಧೆ ಇರಬಹುದು. ಆದರೆ ಸೂಕ್ಷ್ಮ ಯೋಚನೆಗಳನ್ನೂ ಮೀರಿ ಕಟ್ಟಿಹಾಕುವುದು ಮೈದಾನದಲ್ಲಿ ಮೂಡಿಬಂದ ಈ ಅಪರೂಪದ ಪ್ರೇಮಕಾವ್ಯ ಮತ್ತು ಒಬ್ಬ ಮನುಷ್ಯನ ಅವಿರತ ಹೋರಾಟದ ಯಶೋಗಾಥೆ!

✒ಸಾಹುಕಾರ್ ಅಚ್ಚು

Leave a Reply

Discover more from

Subscribe now to keep reading and get access to the full archive.

Continue reading