ಮತ್ತೆ ಕೇರಳದ ವಿಧಾನಸಭೆಯಲ್ಲಿ ಮೊಳಗಿದ ಕನ್ನಡದ ಕಹಳೆ

ಕೇರಳ ವಿಧಾನಸಭೆಯಲ್ಲಿ ಕನ್ನಡದ ಕಂಪು ಮರುಕಳಿಸಿದ್ದು ಗಡಿನಾಡಿನ ಕನ್ನಡಿಗರಲ್ಲಿ ಅಪಾರ ಹರ್ಷವನ್ನು ಉಂಟುಮಾಡಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎ ಕೆ ಎಂ ಅಶ್ರಫ್ ಅವರು ಕೇರಳ ವಿಧಾನಸಭೆಯ ಅಧಿವೇಶನದಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆ ಮತ್ತು ಕನ್ನಡಿಗರ ಸ್ವಾಭಿಮಾನವನ್ನು ಎತ್ತಿಹಿಡಿದಿದ್ದಾರೆ.

ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಶಾಸಕರು ದೈವನಾಮದಲ್ಲಿ ಸ್ಪಷ್ಟ ಹಾಗೂ ಅಚ್ಚುಕಟ್ಟಾದ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕಾಸರಗೋಡು ಮತ್ತು ಮಂಜೇಶ್ವರ ಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸದಾ ಧ್ವನಿಯಾಗುವ ಅವರು, ಭಾಷಾ ವೈವಿಧ್ಯತೆಯ ಕೇರಳ ವಿಧಾನಸಭೆಯಲ್ಲಿ ತಾಯಿ ಭಾಷೆಗೆ ಅತ್ಯುನ್ನತ ಗೌರವ ತಂದುಕೊಟ್ಟಿದ್ದಾರೆ.

ರಾಜಕೀಯ ಗಡಿಗಳನ್ನು ಮೀರಿ ಭಾಷಾ ಬಾಂಧವ್ಯವನ್ನು ಗಟ್ಟಿಗೊಳಿಸಿದ ಶಾಸಕರ ಈ ನಡೆಗೆ ಸಮಸ್ತ ಕನ್ನಡಿಗರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಪ್ರಮಾಣವಚನದ ವಿಡಿಯೋ ಮತ್ತು ಸುದ್ದಿಗಳು ಭಾರಿ ಪ್ರಮಾಣದಲ್ಲಿ ಹರಿದಾಡುತ್ತಿದ್ದು, ಗಡಿಯಾಚೆಗೂ ಕನ್ನಡದ ಗತ್ತನ್ನು ಸಾಬೀತುಪಡಿಸಿದ ಜನನಾಯಕನಿಗೆ ಸಾರ್ವಜನಿಕರು ಮತ್ತು ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading