ಸುಳ್ಯ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಣಜದ ಹುಳುಗಳು (ಕೂಡೊಲು) ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಪೆರಾಜೆ ಗ್ರಾಮದ ಹೊದ್ದೆಟ್ಟಿಯಿಂದ ವರದಿಯಾಗಿದೆ.

ಹೊದ್ದೆಟ್ಟಿ ಕುಟುಂಬದ ದೈವಸ್ಥಾನದ ಪೂಜಾರಿಯಾಗಿರುವ ಜಗದೀಶ (53) ಮೃತಪಟ್ಟ ದುರ್ದೈವಿ.
ಮೇ 19 ರಂದು ಪೆರಾಜೆ ಗ್ರಾಮದ ಹೊದ್ದೆಟ್ಟಿ ಎಂಬಲ್ಲಿ ಜಗದೀಶ್ ಅವರು ತಮ್ಮ ತೋಟದಲ್ಲಿ ಮಷೀನ್ ಮೂಲಕ ಕಾಡು ಕಡಿಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಕೆಲಸ ನಿರತರಾಗಿದ್ದಾಗ ಒಮ್ಮೆಲೇ ಇವರ ಮೇಲೆ ಕಣಜದ ಹುಳುಗಳು (ಕೂಡೊಲು) ತೀವ್ರವಾಗಿ ದಾಳಿ ನಡೆಸಿವೆ. ಇದರಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಘಟನೆ ನಡೆದ ತಕ್ಷಣವೇ ಸ್ಥಳೀಯರು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಜಗದೀಶ್ ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಚಿಕಿತ್ಸೆಯು ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಮೃತದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲೇ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.


