ಕುಶಾಲನಗರ: ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ಸೋಮವಾರ (ಮೇ 18) ದಾರುಣ ಅವಘಡವೊಂದು ಸಂಭವಿಸಿದ್ದು, ಆನೆ ಮೈಮೇಲೆ ಬಿದ್ದ ಪರಿಣಾಮ ಮಹಿಳಾ ಪ್ರವಾಸಿಗರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚೆನ್ನೈ ಮೂಲದ ಜಿನ್ಶು (33) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆಲಭ್ಯವಿರುವ ಮಾಹಿತಿ ಪ್ರಕಾರ, ಮೃತ ಮಹಿಳೆ ಜಿನ್ಶು ಅವರು ಕುಟುಂಬದೊಂದಿಗೆ ದುಬಾರೆ ಆನೆ ಶಿಬಿರಕ್ಕೆ ಪ್ರವಾಸಕ್ಕೆ ಆಗಮಿಸಿದ್ದರು. ಶಿಬಿರದಲ್ಲಿ ಪ್ರವಾಸಿಗರಿಗೆ ಆನೆಗಳಿಗೆ ಸ್ನಾನ ಮಾಡುವ(Elephant Bathing) ಅವಕಾಶವಿದ್ದು, ಅದರಂತೆ ಜಿನ್ಶು ಅವರು ಆನೆ ಸ್ನಾನ ಮಾಡುತ್ತಿದ್ದ ಜಾಗದಲಿ ಇದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಆನೆಯು ಮತ್ತೊಂದು ಆನೆ ಜತೆ ಕಾದಾಟ ನಡೆಸುವಾಗ ಆಕಸ್ಮಿಕವಾಗಿ ಇವರ ಮೈಮೇಲೆ ಬಿದ್ದಿದೆ ಆನೆಯ ಭಾರವಾದ ದೇಹದ ಅಡಿಗೆ ಸಿಲುಕಿದ ಮಹಿಳೆ ತೀವ್ರವಾಗಿ ಗಾಯಗೊಂಡು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಇತರ ಪ್ರವಾಸಿಗರು ಹಾಗೂ ಆನೆ ಮಾವುತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಮುಂದಾಗದರೂ ಅಷ್ಟರಲ್ಲೇ ಮಹಿಳೆ ಮೃತಪಟ್ಟಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಸಿದ್ಧ ಪ್ರವಾಸಿ ತಾಣದಲ್ಲೇ ಇಂತಹದೊಂದು ಘಟನೆ ನಡೆದಿರುವುದು ಪ್ರವಾಸಿಗರಲ್ಲಿ ಮತ್ತು ಸ್ಥಳೀಯರಲ್ಲಿ ತೀವ್ರ ದಿಗ್ಭ್ರಮೆ ಮೂಡಿಸಿದೆ.


