‘ನನಗೆ ಆ ಬಗ್ಗೆ ಗೊತ್ತಿಲ್ಲ’ ಎಂಬ ನಿಲುವು ಹಲವರ ನೆಮ್ಮದಿಗೆ ಕಾರಣ ಆಗಬಹುದು.

ತಿಳಿಯದ ವಿಷಯಗಳ ಬಗ್ಗೆ ತಜ್ಞರಂತೆ ಮಾತನಾಡುವುದನ್ನು ನಿಲ್ಲಿಸುವುದು ನಾವು ಸಮಾಜಕ್ಕೆ ತೋರಿಸಬೇಕಾದ ಕನಿಷ್ಠ ಮರ್ಯಾದೆ. ಆದರೆ ದುರದೃಷ್ಟವಶಾತ್, ಇಂದಿನ ಸೈಬರ್ ಜಗತ್ತಿನಲ್ಲಿ ಬಹುತೇಕರಿಗೆ ಇಲ್ಲದೇ ಇರುವುದೂ ಇದೇ ಕನಿಷ್ಠ ಮರ್ಯಾದೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕಾಣುವ ನಾಲ್ಕು ಚಿತ್ರಗಳು, ಎಲ್ಲೋ ಓದಿದ ಒಂದೆರಡು ಸುದ್ದಿಗಳು ಅಥವಾ ಇನ್ಯಾರೋ ಹಬ್ಬಿಸಿದ ಊಹಾಪೋಹಗಳನ್ನು ಇಟ್ಟುಕೂಂಡು ಒಬ್ಬ ವ್ಯಕ್ತಿಯ ಇಡೀ ಜೀವನವನ್ನು ಅಳೆದು ತೂಗಿ ತೀರ್ಪು ನೀಡಲು ನಾವ್ಯಾರು ಎಂಬ ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕಿದೆ. ನಾವು ಯಾರೂ ಅಲ್ಲ ಮತ್ತು ನಮಗೆ ಅದಕ್ಕೆ ಯಾವುದೇ ಅರ್ಹತೆಯೂ ಇಲ್ಲ ಎಂಬುದನ್ನು ನಾವಿಲ್ಲಿ ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ.

ಇವತ್ತು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿರುವ ಅತ್ಯಂತ ಅಪಾಯಕಾರಿ ಪ್ರವೃತ್ತಿಯೆಂದರೆ, ಇನ್ನೊಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಕಟ್ಟುಕಥೆಗಳನ್ನು ಕಟ್ಟಿ, ಅದಕ್ಕೆ ತಮ್ಮದೇ ಆದ ಅಭಿಪ್ರಾಯಗಳ ರಂಗು ಬಳಿದು, ನಾನೊಬ್ಬನೇ ಸತ್ಯವಂತ ಮತ್ತು ನಾನೇ ಪರಿಶುದ್ಧ ಎಂಬ ಭ್ರಮೆಯಲ್ಲೇ ಬದುಕುವುದು. ತಾವು ಪವಿತ್ರರೆಂದು ತೋರಿಸಿಕೊಳ್ಳಲು ಇನ್ನೊಬ್ಬರ ಮಾನವನ್ನು ಸಾರ್ವಜನಿಕವಾಗಿ ಹರಾಜು ಹಾಕಲು ಇಂತಹವರು ಹಿಂಜರಿಯುವುದಿಲ್ಲ. ಇಂದು ಸೈಬರ್ ದಾಳಿಗೆ ಒಳಗಾಗುತ್ತಿರುವ ವ್ಯಕ್ತಿಗೆ ಇವೆಲ್ಲದರ ನಡುವೆ ಸಂಪೂರ್ಣವಾಗಿ ನಶಿಸಿಹೋಗಿರುವುದು ಅವರ ಮಾನಸಿಕ ಆರೋಗ್ಯವಾಗಿರುತ್ತದೆ. ಅವರಿಗೆ ಈಗ ತುರ್ತಾಗಿ ಬೇಕಾಗಿರುವುದು ಸಾಂತ್ವನ ಮತ್ತು ಮಾನಸಿಕ ಬೆಂಬಲವೇ ಹೊರತು ಕಟು ವಿಮರ್ಶೆಗಳಲ್ಲ. ಸಮಾಜವಾಗಿ ನಾವು ಅವರಿಗೆ ಆಸರೆಯಾಗಬೇಕಾದ ಈ ಅತ್ಯಂತ ಕಠಿಣ ಸಮಯದಲ್ಲಿ, ಅವರ ಬೆನ್ನಿಗೆ ನಿಲ್ಲುವ ಬದಲು ಸೈಬರ್ ದಾಳಿ ನಡೆಸಿ ಅವರನ್ನು ಮತ್ತಷ್ಟು ಕೆಳಕ್ಕೆ ತಳ್ಳುವುದು ನಾವು ಮಾಡುವ ಅತಿ ದೊಡ್ಡ ಅಪರಾಧವಾಗಿದೆ.

ನಾಲ್ಕು ಲೈಕ್‌ಗಳು ಮತ್ತು ಕೆಲವು ಶೇರ್‌ಗಳಿಗಾಗಿ ನಾವು ಹಬ್ಬಿಸುವ ಒಂದೊಂದು ಊಹಾಪೋಹವೂ ಎದುರಿಗಿರುವ ವ್ಯಕ್ತಿಯನ್ನು ಮಾನಸಿಕವಾಗಿ ಎಷ್ಟು ಕುಗ್ಗಿಸುತ್ತದೆ ಎಂದರೆ, ಅದು ಅವರನ್ನು ಸಾವಿನ ದಡಕ್ಕೆ ಅಥವಾ ಆತ್ಮಹತ್ಯೆಯ ಕರಾಳ ನಿರ್ಧಾರದ ಕಡೆಗೆ ತಳ್ಳಿಬಿಡುತ್ತದೆ. ಸ್ಕ್ರೀನ್‌ನ ಹಿಂದೆ ಕುಳಿತು ನಾವು ಟೈಪ್ ಮಾಡುವ ಒಂದೊಂದು ಹಗುರವಾದ ಪದವೂ ಇನ್ನೊಬ್ಬರ ಪಾಲಿಗೆ ಮಾರಕ ಅಸ್ತ್ರವಾಗಬಾರದು. ನಾವು ಸಮಾಜಕ್ಕೆ ಮತ್ತು ಸಹಜೀವಿಗಳಿಗೆ ತೋರಿಸಬೇಕಾದ ಕನಿಷ್ಠ ಮರ್ಯಾದೆ ಒಂದೇ ಆಗಿದೆ. ಗೊತ್ತಿಲ್ಲದ ವಿಷಯಗಳ ಬಗ್ಗೆ ಬಲ್ಲವರಂತೆ ಮಾತನಾಡದಿರುವುದು ಮತ್ತು ಸೈಬರ್ ದಾಳಿಯ ಕ್ರೌರ್ಯದಿಂದ ದೂರವಿರುವುದು. ಕೊನೆಪಕ್ಷ ಇಷ್ಟನ್ನಾದರೂ ನಾವು ಪಾಲಿಸೋಣ, ಏಕೆಂದರೆ ಅದೇ ನಿಜವಾದ ಮಾನವೀಯತೆ.

Leave a Reply

Discover more from

Subscribe now to keep reading and get access to the full archive.

Continue reading