ಗ್ಯಾರಂಟಿ ಸಮಿತಿ ವತಿಯಿಂದ ಹಜ್ ಯಾತ್ರೆ ತೆರಳುತ್ತಿರುವ ಶಾಹುಲ್ ಹಮೀದ್ ಕುತ್ತಮೊಟ್ಟೆಯವರಿಗೆ ಬೀಳ್ಕೊಡುಗೆ

ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್ ಕುತ್ತಮೊಟ್ಟೆಯವರು ಈ ವರ್ಷ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ, ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ವತಿಯಿಂದ ಅವರಿಗೆ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಹಾಗೂ ಸ್ನೇಹ ಕೂಟವನ್ನು ಆಯೋಜಿಸಲಾಗಿತ್ತು. ತಾಲೂಕು ಗ್ಯಾರಂಟಿ ಸಮಿತಿಯ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಮುಖ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ ಅವರು, ಯಾತ್ರೆಗೆ ತೆರಳುವವರಿಗೆ ಶುಭ ವಿದಾಯ ಕೋರುವ ಸಂಪ್ರದಾಯಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ಹೇಳಿದರು. ಪ್ರತಿಯೊಬ್ಬರೂ ತನ್ನ ಧರ್ಮವನ್ನು ಪ್ರೀತಿಸಿ ಅನುಸರಿಸುವುದರ ಜೊತೆಗೆ, ಇತರ ಧರ್ಮ ಹಾಗೂ ಅದರ ಆಚರಣೆಗಳನ್ನು ಗೌರವಿಸುವುದು ಮುಖ್ಯವಾಗಿದೆ ಎಂದ ಅವರು, ಶಾಹುಲ್ ಹಮೀದ್ ಅವರ ಸಮಾಜಮುಖಿ ಕಾರ್ಯಗಳು ನಿಜಕ್ಕೂ ಅಭಿನಂದನೀಯ ಎಂದು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷರಾದ ಕೆ. ಎಂ. ಮುಸ್ತಫ ಅವರು ಕಾರ್ಯಕ್ರಮದ ವಿಷಯ ಪ್ರಸ್ತಾವನೆ ಮಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಳ್ಯ ತಾಲೂಕು ತಹಶೀಲ್ದಾರ್ ಶ್ರೀಮತಿ ಮಂಜುಳಾ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಅಡ್ವೋಕೇಟ್ ಮೂಸ ಪೈಂಬಚ್ಚಾಲ್, ಭವಾನಿ ಶಂಕರ್ ಕಲ್ಮಡ್ಕ ಹಾಗೂ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಅವರು ಹಜ್ ಯಾತ್ರೆಗೆ ತೆರಳುತ್ತಿರುವ ಶಾಹುಲ್ ಹಮೀದ್ ಅವರಿಗೆ ಶುಭ ಹಾರೈಸಿ ಮಾತನಾಡಿದರು. ಶಶಿಧರ್ ಎಂ. ಜೆ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿಯ ಸದಸ್ಯರು ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Discover more from

Subscribe now to keep reading and get access to the full archive.

Continue reading