ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಘಟನೆಯೊಂದು ನಡೆದಿದೆ. ಹಣಬಲ ಮತ್ತು ಪ್ರಭಾವಿ ನಾಯಕರ ಭದ್ರಕೋಟೆಯಾಗಿದ್ದ ರಾಣಿಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ಮಹಿಳೆ ಅಚ್ಚರಿಯ ಜಯ ದಾಖಲಿಸಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತಾಹಿರಾ ಅವರು ಪ್ರಜಾಪ್ರಭುತ್ವದ ಅಸಲಿ ಶಕ್ತಿಯನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.


ಈ ಚುನಾವಣೆಯಲ್ಲಿ ತಾಹಿರಾ ಎದುರಿಸಿದ್ದು ಸಣ್ಣ ನಾಯಕನನ್ನಲ್ಲ. ಮಾಜಿ ಸಚಿವ ಹಾಗೂ ಡಿಎಂಕೆ ಪಕ್ಷದ ಪ್ರಭಾವಿ ಮುಖಂಡರಾಗಿದ್ದ ಆರ್. ಗಾಂಧಿ ಅವರ ವಿರುದ್ಧ ಐದು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ತಾಹಿರಾ ವಿಜಯ ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ 16 ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಘಟಾನುಘಟಿಯನ್ನು ಸಾಮಾನ್ಯ ಮಹಿಳೆಯೊಬ್ಬರು ಸೋಲಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.


ತಾಹಿರಾ ಅವರ ಹಿನ್ನೆಲೆಯನ್ನು ಗಮನಿಸಿದರೆ ಈ ಗೆಲುವು ಮತ್ತಷ್ಟು ವಿಶೇಷವಾಗಿ ಕಾಣುತ್ತದೆ. ಸಾವಿರಾರು ಕೋಟಿ ಆಸ್ತಿ ಹೊಂದಿರುವ ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದ ಕ್ಷೇತ್ರದಲ್ಲಿ, ಕೇವಲ 33 ಸಾವಿರ ರೂಪಾಯಿ ಉಳಿತಾಯ ಮತ್ತು ಹತ್ತನೇ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದ ಮಹಿಳೆ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಜನರ ನಡುವೆ ಇದ್ದುಕೊಂಡು ಯಾವುದೇ ಅಬ್ಬರವಿಲ್ಲದೆ ಅವರು ನಡೆಸಿದ ಪ್ರಾಮಾಣಿಕ ಕೆಲಸಕ್ಕೆ ಮತದಾರರು ಜೈ ಎಂದಿದ್ದಾರೆ.
ನಟ ವಿಜಯ್ ಅವರ ಅಭಿಮಾನಿ ಸಂಘದ ಮೂಲಕ ಸಾಮಾಜಿಕ ಕೆಲಸಗಳನ್ನು ಆರಂಭಿಸಿದ್ದ ತಾಹಿರಾ, ಇಂದು ಸಾಮಾನ್ಯ ಜನರ ಧ್ವನಿಯಾಗಿ ತಮಿಳುನಾಡು ವಿಧಾನಸಭೆಯನ್ನು ಪ್ರವೇಶಿಸುತ್ತಿದ್ದಾರೆ. ಈ ಫಲಿತಾಂಶವು ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ, ಬದಲಾಗಿ ರಾಜಕೀಯದಲ್ಲಿ ಹಣದ ಪ್ರಭಾವಕ್ಕಿಂತ ಜನರ ಬೆಂಬಲವೇ ಮುಖ್ಯ ಎಂಬುದಕ್ಕೆ ಸಾಕ್ಷಿಯಾಗಿದೆ. ತಮಿಳುನಾಡಿನ ರಾಜಕೀಯದಲ್ಲಿ ಇದು ಹೊಸ ಬದಲಾವಣೆಯ ಮುನ್ಸೂಚನೆಯಾಗಿದ್ದು, ಸಾಮಾನ್ಯ ಜನರಿಗೂ ಇತಿಹಾಸ ನಿರ್ಮಿಸಲು ಸಾಧ್ಯವಿದೆ ಎಂಬುದನ್ನು ತಾಹಿರಾ ಸಾಬೀತುಪಡಿಸಿದ್ದಾರೆ.

