ಡ್ರೈವರ್ ಗೆ ಬಸ್ ನಲ್ಲೇ ಹೃದಯಾಘಾತ:26 ಪ್ರಯಾಣಿಕರನ್ನು ರಕ್ಷಿಸಿ ಜೀವ ಬಿಟ್ಟ ಚಾಲಕ

ಬೆಂಗಳೂರಿನಿಂದ ಸುಳ್ಯ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಖಾಸಗಿ ಚಾಲಕನೊಬ್ಬರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ತೋರಿದ ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆ ಎಲ್ಲರ ಕಣ್ಣು ಒದ್ದೆ ಮಾಡುವಂತಿದೆ. ಮಡಿಕೇರಿ ಸಮೀಪದ ಪೆರುಂಬಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಚಾಲಕನ ಸಾಹಸದಿಂದಾಗಿ ಬಸ್ಸಿನಲ್ಲಿದ್ದ 26 ಮಂದಿ ಪ್ರಯಾಣಿಕರು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಿಂದ ರಾತ್ರಿ ಪ್ರಯಾಣ ಬೆಳೆಸಿದ್ದ ಈ ಬಸ್ ಬೆಳಗಿನ ಜಾವ ಮಡಿಕೇರಿ ದಾಟಿ ಸುಳ್ಯದತ್ತ ಸಾಗುತ್ತಿತ್ತು. ಘಾಟಿ ಪ್ರದೇಶದ ತಿರುವುಗಳಲ್ಲಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ತೀವ್ರವಾಗಿ ಹೃದಯಾಘಾತ ಸಂಭವಿಸಿದೆ. ಅತೀವ ಎದೆನೋವು ಕಾಣಿಸಿಕೊಂಡರೂ ಚಾಲಕ ಬಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಳ್ಳಲಿಲ್ಲ. ಒಂದು ವೇಳೆ ಅವರು ಸ್ಟೀರಿಂಗ್ ಬಿಟ್ಟಿದ್ದರೆ ಅಥವಾ ಮೈಮರೆತಿದ್ದರೆ ಬಸ್ ನೇರವಾಗಿ ಆಳವಾದ ಕಂದಕಕ್ಕೆ ಉರುಳುವ ಅಪಾಯವಿತ್ತು.

ತಮಗೆ ಸಾವು ಹತ್ತಿರವಾಗುತ್ತಿದೆ ಎಂದು ತಿಳಿದಿದ್ದರೂ, ಬಸ್ಸಿನಲ್ಲಿದ್ದ ಜೀವಗಳನ್ನು ಉಳಿಸುವುದೇ ಅವರ ಮೊದಲ ಆದ್ಯತೆಯಾಗಿತ್ತು. ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಲು ಪ್ರಯತ್ನಿಸಿದ ಅವರಿಗೆ ಪೂರ್ಣವಾಗಿ ಯಶಸ್ಸು ಸಿಗದಿದ್ದಾಗ, ಅಂತಿಮ ಉಪಾಯವಾಗಿ ರಸ್ತೆಯ ಪಕ್ಕದಲ್ಲಿದ್ದ ಮಣ್ಣಿನ ಬರೆಗೆ ಬಸ್ಸನ್ನು ಡಿಕ್ಕಿ ಹೊಡೆಸುವ ಮೂಲಕ ವಾಹನದ ವೇಗವನ್ನು ನಿಯಂತ್ರಿಸಿ ನಿಲ್ಲಿಸಿದ್ದಾರೆ.

ತಮ್ಮ ಅಂತಿಮ ಕ್ಷಣದ ಹೋರಾಟದ ಮೂಲಕ 26 ಜನರ ಕುಟುಂಬಗಳು ಬೀದಿಗೆ ಬೀಳದಂತೆ ರಕ್ಷಿಸಿದ ಈ ಚಾಲಕ ನಿಜವಾದ ಅರ್ಥದಲ್ಲಿ ಮಾನವೀಯತೆಯ ಹರಿಕಾರ ಎನಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಮತ್ತು ಅನಿರೀಕ್ಷಿತವಾಗಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ನಿರಂತರ ಕೆಲಸದ ಒತ್ತಡ, ವಿಶ್ರಾಂತಿಯ ಕೊರತೆ ಮತ್ತು ಮಾನಸಿಕ ಆತಂಕಗಳು ಇಂತಹ ದುರಂತಗಳಿಗೆ ಕಾರಣವಾಗುತ್ತಿವೆ ಎಂಬ ಚರ್ಚೆಗಳು ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Leave a Reply

Discover more from

Subscribe now to keep reading and get access to the full archive.

Continue reading