ರೆಕ್ಕೆ ಬಿಚ್ಚಿ ಹಾರಿದ್ದ ಕನಸುಗಳು ಮಣ್ಣಾದವು: ಬೆಂಗಳೂರಿನಲ್ಲಿ ಪ್ರವಾಸಿಗರ ಮೇಲೆ ಬಿದ್ದ ಆಸ್ಪತ್ರೆ ಗೋಡೆ

ಬೆಂಗಳೂರು: ಜೀವನದಲ್ಲಿ ಒಮ್ಮೆಯಾದರೂ ವಿಮಾನ ಏರಬೇಕು, ಆಗಸದ ಅಂಚಿನಿಂದ ಜಗತ್ತನ್ನು ನೋಡಬೇಕು ಎಂಬುದು ಆ 56 ಮಂದಿಯ ಪುಟ್ಟ ಕನಸಾಗಿತ್ತು. ಕೇರಳದ ಎರ್ನಾಕುಲಂನ ‘ಕುಟುಂಬಶ್ರೀ’ ಸಂಘದ ಆ ಮಹಿಳೆಯರು ಮತ್ತು ಅವರ ಕುಟುಂಬದವರು ಮೊದಲ ಬಾರಿಗೆ ವಿಮಾನ ಹತ್ತಿದ ಸಂಭ್ರಮದಲ್ಲಿದ್ದರು.

ಕೊಚ್ಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದಾಗ ಅವರ ಮುಖದಲ್ಲಿ ಅರಳಿದ್ದ ಆ ನಗು, ಕೆಲವೇ ಗಂಟೆಗಳಲ್ಲಿ ಕಣ್ಣೀರಿನ ಕಡಲಲ್ಲಿ ಮುಳುಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಬೆಂಗಳೂರಿನ ಜನನಿಬಿಡ ಶಿವಾಜಿನಗರದ ಮಾರುಕಟ್ಟೆ. ವ್ಯಾಪಾರಿಗಳ ಕೂಗು, ಗ್ರಾಹಕರ ಗಿಜಿಗುಟ್ಟುವಿಕೆ, ಶಾಪಿಂಗ್‌ ಗಡಿಬಿಡಿಯ ನಡುವೆ ಆ ಪ್ರವಾಸಿ ತಂಡ ಅತ್ಯಂತ ಖುಷಿಯಿಂದ ಸಂಚರಿಸುತ್ತಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಜೋರು ಮಳೆ, ಸ್ವಲ್ಪ ಹೊತ್ತು ಮಳೆಗೆ ನೆನೆಯದಿರಲು ಫುಟ್ಪಾತ್ ವ್ಯಾಪಾರಿಗಳು ಕಟ್ಟಿದ್ದ ಟೆಂಟ್ ನೊಳಗೆ ಆಶ್ರಯ ಪಡೆದಿದ್ದರು. ಅಷ್ಟರಲ್ಲೇ ಈ ಟೆಂಟ್ ಗೆ ತಾಗಿಕೊಂಡಿದ್ದ ಬೋರಿಂಗ್ ಆಸ್ಪತ್ರೆಯ ಹಳೆಯ ಆವರಣ ಗೋಡೆ ಇದ್ದಕ್ಕಿದ್ದಂತೆ ಕುಸಿದು ಬಿತ್ತು. ಕ್ಷಣಾರ್ಧದಲ್ಲಿ ಆ ಪ್ರದೇಶವೆಲ್ಲಾ ಕಿರುಚಾಟ, ರಕ್ತ ಮತ್ತು ಧೂಳಿನಿಂದ ತುಂಬಿಹೋಯಿತು.



ಈ ಭೀಕರ ಅವಘಡದಲ್ಲಿ ಕೇರಳದ ಸ್ಮಿತಾ ಮತ್ತು ಲತಾ ಎಂಬ ಇಬ್ಬರು ಮಲಯಾಳಿ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊದಲ ವಿಮಾನ ಪ್ರಯಾಣದ ಖುಷಿಯನ್ನು ಹಂಚಿಕೊಳ್ಳುವ ಮೊದಲೇ ಅವರು ಇಹಲೋಕ ತ್ಯಜಿಸಿದ್ದಾರೆ. ಇವರ ಜೊತೆಗೆ ಆ ಪ್ರದೇಶದಲ್ಲಿದ್ದ ಬೆಂಗಳೂರು ಮೂಲದ ಮೊಹಮ್ಮದ್ ಅಬ್ದುಲ್ ಹಕ್, ಫಯಾಸ್ ಅಹ್ಮದ್ ಹಾಗೂ ಕೇವಲ 6 ವರ್ಷದ ಪುಟ್ಟ ಬಾಲಕಿ ಮುಸ್ವೀರ್ ಬೇಗಂ ಕೂಡ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಸಲಾಹುದ್ದೀನ್ ಮತ್ತು ಅಸ್ಸಾಂನ ನಸೀಮುಲ್ಲಾ ಎಂಬ ಇಬ್ಬರು ಯುವ ಕಾರ್ಮಿಕರು ಕೂಡ ಈ ದುರಂತಕ್ಕೆ ಬಲಿಯಾಗಿದ್ದಾರೆ.



ಮೃತಪಟ್ಟ ಕುಟುಂಬಶ್ರೀ ತಂಡದ ಸದಸ್ಯರು ತಮ್ಮೂರಿನಿಂದ ಹೊರಡುವಾಗ ಮನೆಯವರಿಗೆ ತರಹೇವಾರಿ ಉಡುಗೊರೆ ತರುವುದಾಗಿ ಹೇಳಿ ಬಂದಿದ್ದರು. ಆದರೆ ಈಗ ಅವರ ಪಾರ್ಥಿವ ಶರೀರಗಳು ತವರಿಗೆ ಮರಳುವಂತಾಗಿದೆ. ಈ ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿದ್ದಾರೆ.
ಮೊದಲ ಬಾರಿಗೆ ವಿಮಾನದಲ್ಲಿ ಹಾರಾಡಿದ ಆ ಸಂಭ್ರಮ, ಶಾಪಿಂಗ್ ಮುಗಿಸಿ ಮನೆಗೆ ಮರಳುವ ಆತುರ… ಎಲ್ಲವೂ ಆ ಒಂದು ಗೋಡೆಯ ಅಡಿಯಲ್ಲಿ ಹೂತುಹೋಗಿವೆ. ಶಿವಾಜಿನಗರದ ಆ ರಸ್ತೆ ಈಗ ಕೇವಲ ವ್ಯಾಪಾರದ ಸ್ಥಳವಾಗಿ ಉಳಿದಿಲ್ಲ, ಬದಲಿಗೆ ಕನಸುಗಳನ್ನು ಹೊತ್ತು ಬಂದವರ ಮಸಣವಾಗಿ ಮಾರ್ಪಟ್ಟಿದೆ.

ನಗರದ ಹಳೆಯ ಕಟ್ಟಡಗಳ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ಅತ್ಯಂತ ಶೋಚನೀಯ ಸಂಗತಿ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಬೆಂಗಳೂರಿನ ಈ ಪ್ರವಾಸ ಅವರ ಪಾಲಿಗೆ ಎಂದಿಗೂ ಮರೆಯಲಾಗದ ಕಪ್ಪು ಚುಕ್ಕೆಯಾಗಿ ಉಳಿಯಲಿದೆ.

Leave a Reply

Discover more from

Subscribe now to keep reading and get access to the full archive.

Continue reading