ಕಾಂಗ್ರೆಸ್ ನಲ್ಲಿ ದಾವಣಗೆರೆ ದಂಗಲ್ ನಂತರ ನಡೆಯುತ್ತಿರುವುದೇನು?

ದಾವಣಗೆರೆ ಉಪಚುನಾವಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. ಮುಸ್ಲಿಂ ನಾಯಕರ ವಿರುದ್ಧ ಕೈಗೊಳ್ಳಲಾದ ಶಿಸ್ತು ಕ್ರಮವು ಸಚಿವ ಸಂಪುಟ ಸಭೆಯಲ್ಲಿ ಭಾರೀ ವಾಗ್ವಾದಕ್ಕೆ ಕಾರಣವಾಗಿದ್ದು, ಸರ್ಕಾರದ ಪ್ರಭಾವಿ ಸಚಿವರೇ ಪಕ್ಷದ ಹೈಕಮಾಂಡ್ ಮತ್ತು ಕೆಪಿಸಿಸಿ ನಿಲುವನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.

ದಾವಣಗೆರೆ ಉಪಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಮುಸ್ಲಿಂ ನಾಯಕರನ್ನು ಅಮಾನತುಗೊಳಿಸಿರುವುದು ಈಗ ಕಾಂಗ್ರೆಸ್ ಒಳಗಿನ ಮೂಲ ಮತ್ತು ವಲಸಿಗ ಅಥವಾ ಸಮುದಾಯದ ನಾಯಕತ್ವ ಎಂಬ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಸತೀಶ್ ಜಾರಕಿಹೊಳಿ ಅವರು ಈ ಕ್ರಮದ ವಿರುದ್ಧ ಹರಿಹಾಯ್ದಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಪಕ್ಷದ ಮತಬ್ಯಾಂಕ್ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

“ನಾವು ಹಂತಹಂತವಾಗಿ ಮುಸ್ಲಿಂ ಸಮುದಾಯದ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದೇವೆ. ಸಮುದಾಯದ ನಾಯಕರ ಮೇಲೆ ಈ ರೀತಿ ಏಕಪಕ್ಷೀಯವಾಗಿ ಕ್ರಮ ಕೈಗೊಂಡರೆ, ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ,” ಎಂದು ಅವರು ಎಚ್ಚರಿಸಿದ್ದಾರೆ.
ಕೇವಲ ದೂರು ಬಂದ ತಕ್ಷಣ ವಿಚಾರಣೆ ನಡೆಸದೆ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂಬುದು ಅವರ ವಾದವಾಗಿದೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಅಬ್ದುಲ್ ಜಬ್ಬಾರ್ ಅವರ ಮೇಲಿನ ಕ್ರಮವನ್ನು “ಅವಸರದ ನಿರ್ಧಾರ” ಎಂದು ಬಣ್ಣಿಸಿದ್ದಾರೆ.
“ಅಬ್ದುಲ್ ಜಬ್ಬಾರ್ ಅವರಂತಹ ಹಿರಿಯ ನಾಯಕರನ್ನು ಅಮಾನತು ಮಾಡಿದ್ದು ಸರಿಯಲ್ಲ. ಈ ಕ್ರಮವು ಮುಸ್ಲಿಂ ಸಮುದಾಯವೇ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕುವಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ,” ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಈ ಅವಸರದ ಕ್ರಮಗಳು ಉಪಚುನಾವಣೆಯ ಫಲಿತಾಂಶದ ಮೇಲೆ ಮಾತ್ರವಲ್ಲದೆ, ಸರ್ಕಾರದ ಇಮೇಜ್ ಮೇಲೂ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದಾವಣಗೆರೆ ಉಪಚುನಾವಣೆಯ ಪ್ರಚಾರದ ವೇಳೆ ಕೆಲ ಮುಸ್ಲಿಂ ನಾಯಕರು ಪಕ್ಷದ ಅಧಿಕೃತ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿಲ್ಲ ಮತ್ತು ಆಂತರಿಕವಾಗಿ ಬಂಡಾಯವೆದ್ದಿದ್ದಾರೆ ಎಂಬ ದೂರು ಕೆಪಿಸಿಸಿಗೆ ಸಲ್ಲಿಕೆಯಾಗಿತ್ತು. ಇದನ್ನು ಆಧರಿಸಿ ಪಕ್ಷದ ಶಿಸ್ತು ಸಮಿತಿಯು ಶಿಸ್ತು ಕ್ರಮ ಜರುಗಿಸಿತ್ತು. ನಂತರ ನಾಯಕರುಗಳು ಒಳಗೆ ಬಂಡಾಯ ಬುಗಿಲೆದ್ದಿತ್ತು.

ಈ ಆಂತರಿಕ ಸಮರವು ಈಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಾಯಕತ್ವಕ್ಕೆ ಹೊಸ ಸವಾಲನ್ನು ತಂದೊಡ್ಡಿದೆ. ಒಂದು ಕಡೆ ಪಕ್ಷದ ಶಿಸ್ತನ್ನು ಕಾಪಾಡಬೇಕಾದ ಅನಿವಾರ್ಯತೆ, ಇನ್ನೊಂದೆಡೆ ಪ್ರಮುಖ ಮತಬ್ಯಾಂಕ್ ಆಗಿರುವ ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸಬೇಕಾದ ಅನಿವಾರ್ಯತೆ ಕಾಂಗ್ರೆಸ್ ಮುಂದಿದೆ.

ಈ ಬೆಳವಣಿಗೆಯು ಮುಂಬರುವ ದಿನಗಳಲ್ಲಿ ಸಂಪುಟದ ಒಳಗೆ ಮತ್ತು ಪಕ್ಷದ ವೇದಿಕೆಗಳಲ್ಲಿ ಇನ್ನೂ ಹೆಚ್ಚಿನ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ. ಸಚಿವರ ಬಹಿರಂಗ ಆಕ್ರೋಶವು ಹೈಕಮಾಂಡ್ ಮಟ್ಟದಲ್ಲಿ ಯಾವ ರೀತಿಯ ಬದಲಾವಣೆಗೆ ಕಾರಣವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

Leave a Reply

Discover more from

Subscribe now to keep reading and get access to the full archive.

Continue reading