ಸಾಲ ತೀರಿಸಲು ಬಂದು ಚಿನ್ನ ದರೋಡೆ: ಪೋಲೀಸರ ಚಾಕಚಕ್ಯತೆಯಿಂದ ಅಪರಾಧಿಗಳ ಬಂಧನ,ಸುಖಾಂತ್ಯ

ಸುಳ್ಯ: ಪಡೆದುಕೊಂಡಿದ್ದ ಸಾಲವನ್ನು ಹಿಂದಿರುಗಿಸುವ ನೆಪದಲ್ಲಿ ಮನೆಗೆ ಬಂದ ಮಹಿಳೆಯೊಬ್ಬಳು, ಮನೆಯವರ ನಂಬಿಕೆ ದ್ರೋಹ ಮಾಡಿ ಸುಮಾರು 61.5 ಗ್ರಾಂ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಸುಳ್ಯದ ಉತ್ತರ ಬೀರಮಂಗಲದಲ್ಲಿ ಇತ್ತಿಚೆಗೆ ನಡೆದಿದೆ. ಈ ಪ್ರಕರಣವನ್ನು ಅತ್ಯಂತ ಚುರುಕಾಗಿ ಭೇದಿಸಿರುವ ಸುಳ್ಯ ಪೊಲೀಸರು, ಮೈಸೂರು ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಸುಳ್ಯದ ಬೀರಮಂಗಲ ನಿವಾಸಿ ಜಯರಾಮ ಎಂಬುವವರಿಂದ ಮೈಸೂರಿನ ಕುವೆಂಪು ನಗರದ ನಿವಾಸಿ ಶೃತಿ (37)ಎಂಬ ಮಹಿಳೆ ಈ ಹಿಂದೆ ಸುಮಾರು 6 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಹಣವನ್ನು ಮರಳಿ ನೀಡುವಂತೆ ಜಯರಾಮ ಅವರು ಶೃತಿಯವರನ್ನು ಒತ್ತಾಯಿಸುತ್ತಿದ್ದರು. ಏಪ್ರಿಲ್ 7 ರಂದು ಹಣ ತಂದು ಕೊಡುವುದಾಗಿ ಹೇಳಿದ ಶೃತಿ, ಅಂದು ಬೆಳಿಗ್ಗೆ ಜಯರಾಮ ಅವರ ಮನೆಗೆ ಬಂದಿದ್ದರು.

ಅಂದು ಮಧ್ಯಾಹ್ನ ಜಯರಾಮ ಅವರ ಮನೆಯವರು ಕೆಲಸಕ್ಕೆ ಹೊರಗಡೆ ಹೋದ ಸಮಯವನ್ನು ಹೊಂಚು ಹಾಕಿದ ಶೃತಿ, ಜಯರಾಮ ಅವರ ಮಗಳು ಮತ್ತು ಪತ್ನಿಗೆ ನಯವಂಚನೆಯ ಮಾತುಗಳನ್ನಾಡಿ ಅವರು ಮನೆಯಿಂದ ಹೊರಹೋಗುವಂತೆ ಮಾಡಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಪಾಟಿನಲ್ಲಿದ್ದ ಸುಮಾರು 58.97 ಗ್ರಾಂ ತೂಕದ ಚಿನ್ನದ ಸರಗಳು, ಉಂಗುರಗಳು ಮತ್ತು ಕಿವಿಯೋಲೆಗಳನ್ನು ದೋಚಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಈ ಕಳ್ಳತನಕ್ಕೆ ಆಕೆಗೆ ಮೈಸೂರಿನ ನಿವಾಸಿ ಪ್ರವೀಣ್ (44) ಎಂಬಾತ ಸಾಥ್ ನೀಡಿದ್ದನೆಂದು ತಿಳಿದುಬಂದಿದೆ.

ಮನೆಯವರು ವಾಪಸ್ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಪ್ರಕರಣದ ಗಾಂಭೀರ್ಯವನ್ನು ಅರಿತ ಸುಳ್ಯ ವೃತ್ತ ನಿರೀಕ್ಷಕ ತಮ್ಮಯ್ಯ ನಾಯ್ಕ ಮತ್ತು ಎಸ್‌ಐ ಸಂತೋಷ್ ಬಿ.ಪಿ ಅವರ ನೇತೃತ್ವದ ತಂಡ ತನಿಖೆ ಆರಂಭಿಸಿತು. ಮೊಬೈಲ್ ಲೊಕೇಶನ್ ಮತ್ತು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇವಲ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಮೈಸೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ

ಬಂಧಿತರಿಂದ ಒಟ್ಟು 61.5 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು 5 ಲಕ್ಷ ರೂಪಾಯಿಗಳು

ಬಂಧಿತರಾದ ಶೃತಿ ಮತ್ತು ಪ್ರವೀಣ್ ಅವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಹನುಮಂತಪ್ಪ, ಪ್ರಸಾದ್, ಸುನಿಲ್ ಮತ್ತು ಮಹಿಳಾ ಸಿಬ್ಬಂದಿ ಪದ್ಮಾವತಿ ಅವರು ಭಾಗವಹಿಸಿದ್ದರು.

Leave a Reply

Discover more from

Subscribe now to keep reading and get access to the full archive.

Continue reading