ಆನೆಯನ್ನು ರಕ್ಷಿಸಲಾಯಿತು ಆದರೆ ಆನೆಗಳ ದಾಳಿ ಕೃಷಿಕರ ಆತಂಕಕ್ಕೆ ಕೊನೆ ಎಂದು?

ಪೆರಾಜೆ:ಸಮೀಪದ ಕಲ್ಚರ್ಪೆ ಎಂಬಲ್ಲಿ ನಿನ್ನೆ ತಡರಾತ್ರಿ ಸುಮಾರು 30 ಅಡಿಗೂ ಅಧಿಕ ಆಳದ ನೀರಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ರಕ್ಷಿಸಿದೆ. ಸುಮಾರು 6 ಗಂಟೆಗಳ ಕಾಲ ನಡೆದ ಸುದೀರ್ಘ ಕಾರ್ಯಾಚರಣೆಯ ನಂತರ ಆನೆಯನ್ನು ಪಕ್ಕದ ಪೂಮಲೆ ರಕ್ಷಿತಾರಣ್ಯಕ್ಕೆ ಓಡಿಸಲಾಯಿತು.

ಬಾವಿಗೆ ಬಿದ್ದ ಆನೆಯನ್ನು ಕಂಡು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ಜೆಸಿಬಿ ಮುಖಾಂತರ ಬಾವಿಯ ಮೇಲಿನಿಂದ ಮಣ್ಣನ್ನು ಸುರಿಯಲು ಆರಂಭಿಸಿದರು. ಬಾವಿ ಆಳವಾಗಿದ್ದ ಕಾರಣ, ಮಣ್ಣನ್ನು ತುಂಬಿಸುತ್ತಾ ಬಂದಂತೆ ಆನೆಯು ಆ ಮಣ್ಣಿನ ರಾಶಿಯ ಮೇಲೆಯೇ ಏರುತ್ತಾ ಬರಲು ವ್ಯವಸ್ಥೆ ಮಾಡಲಾಯಿತು. ಈ ಸಂಕಷ್ಟದ ಸಮಯದಲ್ಲಿ ಬಳಲಿದ್ದ ಆನೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೇಲಿನಿಂದ ಕುಡಿಯಲು ನೀರು, ತಿನ್ನಲು ಕಬ್ಬು ಮತ್ತು ಬೈನೆ ಎಲೆಗಳನ್ನು ನಿರಂತರವಾಗಿ ನೀಡಿ ಅದು ಚೈತನ್ಯ ಕಳೆದುಕೊಳ್ಳದಂತೆ ನೋಡಿಕೊಂಡರು.

ಸುಮಾರು 30 ಅಡಿ ಎತ್ತರದಿಂದ ಬಾವಿಯೊಳಗೆ ಬಿದ್ದಿದ್ದರೂ ಸಹ, ಆನೆಯ ಶರೀರಕ್ಕೆ ಯಾವುದೇ ದೊಡ್ಡ ಮಟ್ಟದ ಬಾಹ್ಯ ಗಾಯಗಳಾಗದಿರುವುದು ಆಶ್ಚರ್ಯದ ಸಂಗತಿಯಾಗಿತ್ತು. ಆದರೆ, ಅಷ್ಟು ಎತ್ತರದಿಂದ ಬಿದ್ದಾಗ ಆನೆಯ ಒಳ ಅಂಗಾಂಗಗಳಿಗೆ ಏನಾದರೂ ಪೆಟ್ಟಾಗಿದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲದೆ ಆನೆಯನ್ನು ಕಾಡಿಗೆ ಅಟ್ಟಲಾಗಿದೆ.

ಕಳೆದ ಒಂದೆರಡು ವರ್ಷಗಳಿಂದ ಪೆರಾಜೆ, ಕಲ್ಚರ್ಪೆ, ಆರಂತೋಡು, ಮರ್ಕಜ, ಗೂನಡ್ಕ, ಸಂಪಾಜೆ ಹಾಗೂ ಉಬರಡ್ಕ ಆಲೆಟ್ಟಿ ಭಾಗಗಳಲ್ಲಿ ಈ ಒಂಟಿ ಸಲಗ ಮತ್ತು ಇತರ 7 ಆನೆಗಳ ಹಿಂಡು ನಿರಂತರವಾಗಿ ರೈತರ ಕೃಷಿ ನಾಶ ಮಾಡುತ್ತಿವೆ. ಇದರಿಂದ ಕಂಗೆಟ್ಟಿರುವ ಸ್ಥಳೀಯ ರೈತರು ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಒಂದು ಮಹತ್ವದ ಸಲಹೆ ನೀಡಿದ್ದರು.ಈ ಪ್ರದೇಶವು ರಾಜ್ಯ ಹೆದ್ದಾರಿಗೆ ತೀರಾ ಹತ್ತಿರದಲ್ಲಿದೆ. ಹೀಗಾಗಿ ಸುಲಭವಾಗಿ ವಾಹನಗಳ ಸಂಚಾರ ಸಾಧ್ಯವಿತ್ತು. ಆನೆಯನ್ನು ಬಾವಿಯಿಂದ ಮೇಲೆತ್ತಿದ ಕೂಡಲೇ ತಜ್ಞ ವೈದ್ಯರಿಂದ ಅರಿವಳಿಕೆ ನೀಡಿ, ಪಳಗಿದ ಸಾಕಾನೆಗಳ ನೆರವಿನಿಂದ ಕೊಡಗಿನ ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸಿದ್ದರೆ ರೈತರಿಗೆ ಶಾಶ್ವತ ಪರಿಹಾರ ಸಿಗುತ್ತಿತ್ತು.
ಈ ಬಗ್ಗೆ ಸ್ಥಳದಲ್ಲಿದ್ದ ಅರಣ್ಯ ಅಧಿಕಾರಿಯೊಬ್ಬರಿಗೆ ಸ್ಥಳೀಯರು ಮನವಿ ಮಾಡಿದರೂ, ಅರಣ್ಯಾಧಿಕಾರಿಗಳಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಬದಲಾಗಿ, ಆನೆಯನ್ನು ಯಥಾಸ್ಥಿತಿ ಕಾಡಿಗೆ ಅಟ್ಟಲಾಯಿತು.

ಅರಣ್ಯ ಇಲಾಖೆಯ ಮಿಂಚಿನ ಕಾರ್ಯಾಚರಣೆಯಿಂದ ಆನೆ ಬದುಕುಳಿದಿರುವುದು ಸಂತೋಷದ ವಿಷಯವಾದರೂ, ಮತ್ತೆ ಅದೇ ಆನೆಯನ್ನು ಅದೇ ಕಾಡಿಗೆ ಬಿಟ್ಟಿರುವುದು ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದೆ. ಗಾಯಗೊಂಡಿರಬಹುದಾದ ಆನೆಯು ಇನ್ನಷ್ಟು ಕ್ರೂರವಾಗಿ ವರ್ತಿಸಿ ಮತ್ತೆ ಕೃಷಿ ಭೂಮಿಗೆ ದಾಳಿ ಇಡಬಹುದೇ ಎನ್ನುವ ಭೀತಿ ಎಲ್ಲರಲ್ಲಿ ಮನೆ ಮಾಡಿದೆ. ಕೊನೆಗೂ ಆನೆದಾಳಿ,ಕೃಷಿಕನ ಆತಂಕ ಮತ್ತೆ ಮುಂದುವರೆದಿದೆ.

ನಿಮ್ಮದೊಂದು ಉತ್ತರ