ವಾಹನವನ್ನು ಬೇರೆಯವರಿಗೆ ಮಾರಾಟ ಮಾಡಿದ್ದರೂ ಸಹ, ಅಧಿಕೃತವಾಗಿ ನೋಂದಣಿ ಪ್ರಮಾಣಪತ್ರದಲ್ಲಿ (RC – Registration Certificate) ಮಾಲೀಕತ್ವ ವರ್ಗಾವಣೆಯಾಗುವ ತನಕ, ಆ ವಾಹನದಿಂದ ಸಂಭವಿಸುವ ಅಪಘಾತಗಳಿಗೆ ಹಳೆಯ ಅಥವಾ ನೋಂದಾಯಿತ ಮಾಲೀಕರೇ ಸಂಪೂರ್ಣ ಹೊಣೆಗಾರರು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮಾರತಹಳ್ಳಿಯ ಸುನಿಲ್ ಕುಮಾರ್ ಎಂಬುವವರು ತಮ್ಮ ಬೈಕನ್ನು ಶಬ್ರೀಜ್ ಎಂಬುವವರಿಗೆ ಮಾರಾಟ ಮಾಡಿದ್ದರು. ಈ ಬೈಕ್ 2020ರ ಜೂನ್ 18 ರಂದು ಹನುಮಂತ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದರು. ಮೃತರ ಕುಟುಂಬದವರು ಪರಿಹಾರ ಕೋರಿ ಮೋಟಾರು ಅಪಘಾತ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ವಿಮಾ ದಾಖಲೆಗಳಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ, ಪರಿಹಾರವನ್ನು ಮಾಲೀಕರೇ ನೀಡಬೇಕೆಂದು ನ್ಯಾಯಮಂಡಳಿಯು ಈ ಹಿಂದೆ 33 ಲಕ್ಷ ರೂ.ಪರಿಹಾರ ನಿಗದಿಪಡಿಸಿ ಸುನಿಲ್ ಕುಮಾರ್ ಮತ್ತು ಶಬ್ರೀಜ್ ಅವರಿಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುನಿಲ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.


ಸುನಿಲ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಕೆಳಗಿನ ಅಂಶಗಳನ್ನು ಸ್ಪಷ್ಟಪಡಿಸಿದೆ:
ನೋಂದಾಯಿತ ಮಾಲೀಕರೇ ಹೊಣೆ: ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠವು, ಆರ್‌ಸಿಯಲ್ಲಿ ಹೆಸರು ಬದಲಾಗುವವರೆಗೂ ದಾಖಲೆಗಳಲ್ಲಿ ಯಾರ ಹೆಸರು ಇರುತ್ತದೆಯೋ ಅವರೇ ಕಾನೂನುಬದ್ಧ ಮಾಲೀಕರು ಮತ್ತು ಅವರೇ ಹೊಣೆಗಾರರು ಎಂದು ಹೇಳಿದೆ.

ಮೃತರ ಕುಟುಂಬದವರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಪರಿಹಾರದ ಮೊತ್ತವನ್ನು 33 ಲಕ್ಷದಿಂದ 47.15 ಲಕ್ಷ ರೂ.ಗೆ ಹೆಚ್ಚಿಸಿ, ಅದನ್ನು ಪಾವತಿಸುವಂತೆ ಮಾಲೀಕರಿಗೆ ಆದೇಶಿಸಿದೆ.
ಈ ತೀರ್ಪು ವಾಹನ ಮಾರಾಟ ಮಾಡುವವರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಕೇವಲ ವಾಹನವನ್ನು ಹಸ್ತಾಂತರಿಸಿ ಹಣ ಪಡೆದರೆ ಮಾಲೀಕನ ಜವಾಬ್ದಾರಿ ಮುಗಿಯುವುದಿಲ್ಲ. ಆರ್‌ಟಿಒ (RTO) ದಾಖಲೆಗಳಲ್ಲಿ ಮಾಲೀಕತ್ವದ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವುದು ಅತ್ಯಂತ ಅವಶ್ಯಕ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.


