ಎಲಿಮಲೆ ಮಸೀದಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಎಲಿಮಲೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಎಲಿಮಲೆ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯೋತ್ಸವವು ವಿಜೃಂಭಣೆಯಿಂದ ಜರುಗಿತು. ಆಧ್ಯಾತ್ಮಿಕ ನಾಯಕರಾದ ಮುಹ್ಸಿನ್ ಸೈದಲವಿಕೋಯ ಅಲ್ ಬುಖಾರಿ ಎಲಿಮಲೆ ತಂಙಳ್ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹನೀಯರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇಕ್ರಾಮುಸ್ಸುನ್ನ ದರ್ಸ್ ಹಾಗೂ ಹಿಫ್ಲ್ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮದರ್ರಿಸರಾದ ರಫೀಕ್ ಸಕಾಫಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಮಾತನಾಡುತ್ತಾ, ದೇಶದ ಅಭಿವೃದ್ಧಿ ಮತ್ತು ಸ್ವಾತಂತ್ರ್ಯದ ರಕ್ಷಣೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಕರೆ ನೀಡಿದರು. ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಪಾಣಾಜೆ ಉಪಸ್ಥಿತರಿದ್ದರು. ಎಲಿಮಲೆ ಹಿಫ್ಲುಲ್ ಕುರಾನ್ ಕಾಲೇಜು ಪ್ರಾಧ್ಯಾಪಕರಾದ ಹಾಫಿಝ್ ಹಾಶಿರ್ ಸಕಾಫಿ, ನೂರುಲ್ ಹುದಾ ಮದ್ರಸ ಮುಖ್ಯೋಪಾಧ್ಯಾಯ ಸಿದ್ದೀಕ್ ಹಿಮಮಿ, ಜೀರ್ಮುಖಿ ಮುಹಿಯದ್ದೀನ್ ಮಸೀದಿ ಇಮಾಮ್ ಅಬ್ದುಲ್ ಜಲೀಲ್ ಮುಈನಿ, ಮುಸ್ತಫಾ ಹಿಶಾಮಿ ಸೇರಿದಂತೆ ಜಮಾಅತ್ ಉಪಾಧ್ಯಕ್ಷ ಮಹಮೂದ್ ಸಖಾಫಿ, ಕಾರ್ಯದರ್ಶಿ ಇಬ್ರಾಹಿಂ ಜೀರ್ಮುಖಿ, ಮೀಲಾದ್ ಸಮಿತಿ ಅಧ್ಯಕ್ಷ ಹನೀಫ್ ಜೀರ್ಮುಖಿ ಹಾಗೂ ಊರಿನ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸೂಫಿ ಎಲಿಮಲೆ ಸ್ವಾಗತಿಸಿ ವಂದಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಂದು ಸಾಯಂಕಾಲ ಇಕ್ರಾಮುಸ್ಸುನ್ನ ಕ್ಯಾಂಪಸ್ ನಲ್ಲಿ ವಿವಿಧ ಕಲಾ ಸ್ಪರ್ಧೆಗಳು ಜರುಗಿದವು. ನುಸ್ರತ್ ಪದಾಧಿಕಾರಿಗಳು, ವಿವಿಧ ಮದ್ರಸಾಗಳ ವಿದ್ಯಾರ್ಥಿಗಳು, ಸ್ಕೌಟ್ಸ್ ವಿದ್ಯಾರ್ಥಿಗಳು ಹಾಗೂ ಹತ್ತಿರದ ಊರವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Discover more from

Subscribe now to keep reading and get access to the full archive.

Continue reading